ರಭಸವಾಗಿ ಹರಿಯುತ್ತಿದ್ದ ಹಳ್ಳ ದಾಟುವ ಸಮಯದಲ್ಲಿ ಮೂವರು ಆರೋಗ್ಯ ಇಲಾಖೆ ಸಿಬ್ಬಂದಿ ಕೊಚ್ಚಿಹೋದ ಘಟನೆ ಮಂಗಳವಾರ ಗದಗ ಜಿಲ್ಲೆಯಲ್ಲಿ ನಡೆದಿದೆ.
ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಯಾ.ಸ.ಹಡಗಲಿ ಗ್ರಾಮ ಕೌಜಗೇರಿ ಗ್ರಾಮದ ನಡುವೆ ಇರುವ ಹಳ್ಳ ದಾಟುವ ವೇಳೆ ಆರೋಗ್ಯ ಇಲಾಖೆಯ ಮೂವರು ಸಿಬ್ಬಂದಿಗಳು ಕೊಚ್ಚಿ ಹೋಗಿದ್ದಾರೆ. ಮೂವರಲ್ಲಿ ಇಬ್ಬರನ್ನು ರಕ್ಷಿಸಲಾಗಿದ್ದು, ಒಬ್ಬರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಬೆಳವಣಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಸಮುದಾಯ ಆರೋಗ್ಯ ಅಧಿಕಾರಿ ಬಸವರಾಜ ಕಡಪಟ್ಟಿ (34), ಹಿರಿಯ ಆರೋಗ್ಯ ಅಧಿಕಾರಿ ವೀರಸಂಗಯ್ಯ ಹಿರೇಮಠ (49) ಮತ್ತು ಕಿರಿಯ ಆರೋಗ್ಯ ಸಹಾಯಕಿ ಬಸಮ್ಮ ಗುರಿಕಾರ (32) ಅವರು ಯಾ.ಸ.ಹಡಗಲಿ ಗ್ರಾಮದಲ್ಲಿನ ಆರೋಗ್ಯ ಮೇಳ ಕಾರ್ಯಕ್ರಮ ಮುಗಿಸಿಕೊಂಡು ಬರುವಾಗ ಈ ಘಟನೆ ನಡೆದಿದೆ.
ಆರೋಗ್ಯ ಇಲಾಖೆಯ ಮೂವರು ಸಿಬ್ಬಂದಿ ಒಂದೇ ಬೈಕ್‌ನಲ್ಲಿ ಬರುತ್ತಿದ್ದರು. ರಭಸವಾಗಿ ಹರಿಯುತ್ತಿದ್ದ ಹಳ್ಳ ದಾಟುವ ವೇಳೆ ನೀರಿಗೆ ಬಿದ್ದಿದ್ದಾರೆ. ಈ ವೇಳೆ ಬಸವರಾಜ ಕಡಪಟ್ಟಿ , ವೀರಸಂಗಯ್ಯ ಹಿರೇಮಠ ಅವರನ್ನು ರಕ್ಷಿಸಲಾಗಿದೆ. ಬಸಮ್ಮ ಗುರಿಕಾರ ಅವರು ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.
