ಗದಗ | ಮೂವರು ಶಿಕ್ಷಕರಿಗೆ ಕಲಾಶಿಸಂ ಪ್ರತಿಷ್ಠಾನದ ಮಕ್ಕಳ ಸ್ನೇಹಿ ಶಿಕ್ಷಕ ಪ್ರಶಸ್ತಿ

Date:

Advertisements

“ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಕಲಾ ಶಿಕ್ಷಣ ಸಂಸ್ಕೃತಿ ಪ್ರತಿಷ್ಠಾನವು ಶಿಕ್ಷಕ ದಿನಾಚರಣೆಯ ಅಂಗವಾಗಿ ರಾಜ್ಯದ ಮೂರು ಜನ ಶಿಕ್ಷಕರಿಗೆ, ‘2025ರ ಮಕ್ಕಳ ಸ್ನೇಹಿ ಶಿಕ್ಷಕ’ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸುತ್ತಿದೆ” ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ನಿಂಗು ಸೊಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

“ಕ್ರಮವಾಗಿ ಕುಂದಾಪುರದ ಉದಯ ಗಾಂವಕರ, ಹಗರಿಬೊಮ್ಮನಹಳ್ಳಿಯ ಹೆಚ್. ಎಂ. ವನಿತಾ, ಮತ್ತು ಶಿಡ್ಲಘಟ್ಟದ ಎಸ್. ಕಲಾಧರ್, ಆಯ್ಕೆಯಾಗಿದ್ದಾರೆ” 

“ಪ್ರಶಸ್ತಿ ಪುರಸ್ಕೃತರಿಗೆ 5000 ನಗದು ಪುರಸ್ಕಾರದೊಂದಿಗೆ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತಿದ್ದು, ಸೆಪ್ಟಂಬರ್ ೭ ರಂದು ಭಾನುವಾರ ಮುಂಡರಗಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು” ಪ್ರತಿಷ್ಠಾನದ ಅಧ್ಯಕ್ಷ ಡಾ. ನಿಂಗು ಸೊಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಯಾವುದೇ ರೀತಿ ಅರ್ಜಿ ಹಾಕಿಸಿಕೊಳ್ಳದೇ ರಾಜ್ಯಾದ್ಯಂತ ಇರುವ ಪರಿಚಿತ ಸಮುದಾಯ, ಆಯಾ ಭಾಗದ ಅಧಿಕಾರಿಗಳು, ಶಿಕ್ಷಕರೊಂದಿಗೆ ಮಾತುಕತೆ ನಡೆಸಿ ಮಕ್ಕಳ ಸ್ನೇಹಿಯಾಗಿ ನಾವೀನ್ಯಯುತ ಸೃಜನಾತ್ಮಕ ಪ್ರಯೋಗ, ಚಟುವಟಿಕೆಗಳೊಂದಿಗೆ ಕಾರ್ಯ ಮಾಡುತ್ತಿರುವ  ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತಿದೆ”  ಎಂದು ತಿಳಿಸಿದರು.

ಪ್ರಶಸ್ತಿ ಪುರಸ್ಕೃತರ ಪರಿಚಯ: 

ಉದಯ ಗಾಂವಕಾರ: ಉತ್ತರ ಕನ್ನಡದ ಕುಮಟಾ ತಾಲೂಕಿನ ಪಡುವಣಿಯವರಾದ ಉದಯ ಗಾಂವಕಾರ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿದ್ದು ಬೇಳೂರು ಸರಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಭಾರತ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕದ ನೇತೃತ್ವದಲ್ಲಿ ನಡೆದ ಮಕ್ಕಳ ವಿಜ್ಞಾನ ಹಬ್ಬ, ಕಲಿಕಾ ಹಬ್ಬ, ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮಗಳ ವಿನ್ಯಾಸ ರೂಪಿಸುವಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದಾರೆ. ಶಿಕ್ಷಣ ಇಲಾಖೆ ರೂಪಿಸಿದ ವಿಜ್ಞಾನ ಚಟುವಟಿಕೆ ಪುಸ್ತಕ ರಚನೆಯ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ವಿಜ್ಞಾನ ಮಾದರಿ ತಯಾರಿಸುವಲ್ಲಿ, ಪರಿಸರ ಪ್ರವಾಸಗಳ ಮೂಲಕ ವಿಜ್ಞಾನ ಕಲಿಕೆಯನ್ನು ಅನುಭವಾತ್ಮಕವಾಗಿಸುವಲ್ಲಿ ನಿರಂತರ ಪ್ರಯತ್ನಶೀಲರಾಗಿದ್ದಾರೆ. ದೇಶದಲ್ಲಿ ನಡೆದ ಇಂಡೋ ನಾರ್ವೇಜಿಯನ್‌ ಪರಿಸರ ಕಾರ್ಯಕ್ರಮದ ಹತ್ತು ವರ್ಷಗಳ ಸಾಧನೆಯ ದಾಖಲಾತಿಯಲ್ಲಿ ಇವರ ಹಿಂದಿನ ಶಾಲೆಯ ‘ಭೂಮಿ ಇಕೋಕ್ಲಬ್‌’ ನ ಕಾರ್ಯಕ್ರಮಗಳನ್ನು ಒಂದು ಅಧ್ಯಾಯವಾಗಿ ಸೇರಿಸಲಾಗಿದೆ. 

‘ಬರೆವಣಿಗೆ ಮೆರವಣಿಗೆ’ ಮತ್ತಿತರ ವಿಜ್ಞಾನ ಬರಹಗಳು, ‘ಮಕ್ಕಳಿಗಾಗಿ ಮಹಾತ್ಮ’, ‘ಆಲೂ ಸಮೋಸಾದೊಳಗೆ ಬಂದಿದ್ದು ಹೇಗೆ?’ ಕೃತಿಗಳು ಪ್ರಕಟಗೊಂಡಿದ್ದು, ಹಲವು ಮಕ್ಕಳ ನಾಟಕಗಳು ರಂಗದ ಮೇಲೆ ಪ್ರದರ್ಶನಗೊಂಡಿವೆ. ಕತೆಗಳು, ಕವಿತೆಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಹವ್ಯಾಸಿ ರೇಖಾಚಿತ್ರ ರಚನೆಕಾರರಾಗಿ ನೂರಾರು ಪುಸ್ತಕಗಳ ಮುಖಪುಟ ವಿನ್ಯಾಸಗೊಳಿಸಿದ್ದಾರೆ. ‘ಮಕ್ಕಳಿಗಾಗಿ ಮಹಾತ್ಮ’ ಸಚಿತ್ರ ಪುಸ್ತಕದೊಡನೆ ನಡೆಸಿದ ಗಾಂಧಿ ಓದು ಅಭಿಯಾನ ರಾಜ್ಯಾದ್ಯಂತ ಯಶಸ್ಸು ಕಂಡಿದೆ.

ಈದಿನ ಡಾಟ್‌ ಕಾಮ್‌, ಜನಪ್ರತಿನಿಧಿ, ಕರಾವಳಿ ಮುಂಜಾವು ಮತ್ತಿತರ ವೆಬ್‌ ತಾಣ, ಪತ್ರಿಕೆಗಳಲ್ಲಿ ಅಂಕಣ ಬರಹಗಳು ಪ್ರಕಟಗೊಂಡಿವೆ. ಕೋವಿಡ್‌ ಸಂದರ್ಭದಲ್ಲಿ ರಾಜ್ಯ ಸರ್ಕಾರ ದೂರದರ್ಶನ ವಾಹಿನಿ, ಯೂಟ್ಯೂಬ್‌ ಚಾನಲ್‌ ಮೂಲಕ ಮಕ್ಕಳಿಗಾಗಿ ಬಿತ್ತರಿಸಿದ ‘ಮಕ್ಕಳವಾಣಿ-ನಲಿಯೋಣ ಕಲಿಯೋಣ’ ವಿಡಿಯೋ ಸರಣಿಯ ಕಂಟೆಂಟ್‌ ಕ್ಯುರೇಟರ್‌ ಮತ್ತು ನಿರೂಪಕನಾಗಿ ಕಾರ್ಯ ಮಾಡಿದ್ದಾರೆ.

ಕಳೆದ ಮೂರು ದಶಕಗಳಿಂದ ಸಮುದಾಯ ರಂಗ ಚಳುವಳಿಯಲ್ಲಿ ಸಕ್ರಿಯವಾಗಿರುವ ಇವರು ಕುಂದಾಪುರ ಸಮುದಾಯದ ಅಧ್ಯಕ್ಷರಾಗಿ, ಸದ್ಯ ಸಮುದಾಯ ಸಂಘಟನೆಯ ರಾಜ್ಯ ಸಮಿತಿಯ ಜೊತೆ ಕಾರ್ಯದರ್ಶಿಯಾಗಿ ಕಾರ್ಯ ಮಾಡುತ್ತಿದ್ದಾರೆ. ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಸಮಿತಿ ಸದಸ್ಯರಾಗಿ, ಟೀಚರ್‌ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯ ಮಾಡುತ್ತಿದ್ದಾರೆ.

ಹೆಚ್. ಎಂ. ವನಿತಾ: ಹೆಚ್. ಎಂ. ವನಿತಾರವರು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಗಂ. ಭೀ. ಸರಕಾರಿ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಭಾಷೆಯ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ‌. ಗ್ರಾಮೀಣ ಭಾಗದ ಮಕ್ಕಳಲ್ಲಿ ಇಂಗ್ಲಿಷ್ ಭಾಷೆ ಕುರಿತಾಗಿರುವ ಭಯವನ್ನು ದೂರ ಮಾಡಲು ತಮ್ಮ ಸೇವಾ ಅನುಭವದುದ್ದಕ್ಕೂ ಹಲವಾರು ಯಶಸ್ವಿ ಪ್ರಯತ್ನಗಳನ್ನು ಕೈಗೊಂಡಿದ್ದಾರೆ. ಸ. ಕಿ. ಪ್ರಾ. ಶಾಲೆ ಹೊಸ ಆನಂದದೇವನಹಳ್ಳಿಯಲ್ಲಿ ಸ್ವಂತ ಖರ್ಚಿನೊಂದಿಗೆ ‘ಇಂಗ್ವಿಷ್ ಲ್ಯಾಂಗ್ವೇಜ್ ಲ್ಯಾಬ್’ ನಿರ್ಮಿಸಿದ್ದಾರೆ. ರಜಾ ಅವಧಿಯಲ್ಲಿ ಮಕ್ಕಳಿಗಾಗಿ ಉಚಿತ ಸ್ಪೋಕನ್ ಇಂಗ್ಲಿಷ್ ತರಗತಿಗಳನ್ನು ಆಯೋಜಿಸಿದ್ದಾರೆ.

ಇಂಗ್ಲಿಷ್ ಭಾಷೆಯ ಶಿಕ್ಷಣವನ್ನು ಉತ್ತಮಗೊಳಿಸುವುದಕ್ಕೆ ಸಂಬಂಧಿಸಿದ ಹಲವಾರು ತರಬೇತಿಗಳಲ್ಲಿ, ಬ್ರಿಟಿಷ್ ಕೌನ್ಸಿಲ್‍ ಸೇರಿದಂತೆ ಬೇರೆ ಬೇರೆ ಸಂಸ್ಥೆಗಳೊಟ್ಟಿಗೆ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ರಾಜ್ಯ ಸರ್ಕಾರ ಮೊದಲ ಬಾರಿಗೆ ರೂಪಿಸಿದ 1ರಿಂದ 4ನೇ ತರಗತಿಯ ಇಂಗ್ಲಿಷ್ ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ, ಇಂಗ್ಲಿಷ್ ಬೋಧನೆಯ ಸರಳೀಕರಣದಲ್ಲಿ ಪಾಲ್ಗೊಂಡಿದ್ದಾರೆ. ನಲಿ-ಕಲಿ ವಿಧಾನದ ಮೂಲಕ ಇಂಗ್ಲಿಷ್ ಕಲಿಸುವ ಸಾಹಿತ್ಯವನ್ನು ರಚಿಸಲು ಯುನಿಸೆಫ್ ಮತ್ತು ರಾಜ್ಯ ಸರ್ಕಾರ ನೇಮಿಸಿದ್ದ ಸಮಿತಿಯ ಭಾಗವಾಗಿ ಕೆಲಸ ಮಾಡಿದ್ದಾರೆ. ರಾಜ್ಯ ಸರ್ಕಾರದ ಇಂಗ್ಲಿಷ್ ಮಾಧ್ಯಮ ಶಾಲೆಗಳ ಪಠ್ಯಪುಸ್ತಕ ಪರಿಷ್ಕರಣೆ ಮತ್ತು ಅನುವಾದ ಸಮಿತಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ನಾಲ್ಕು ವರ್ಷಗಳ ಕಾಲ ಸಂಪನ್ಮೂಲ ವ್ಯಕ್ತಿಯಾಗಿ ಹಲವಾರು ಶಿಕ್ಷಕರಿಗೆ ತರಬೇತಿ ನೀಡಿದ್ದಾರೆ.

ಶಿಕ್ಷಣ ಕ್ಷೇತ್ರದ ಜೊತೆಗೆ, ಸಾಹಿತ್ಯದ ಬರವಣಿಗೆ ಮತ್ತು ಅನುವಾದದಲ್ಲಿಯೂ ನಿರತರಾಗಿದ್ದಾರೆ. ಇವರು ಅನುವಾದಿಸಿರುವ ‘ಸೂರ್ಯ ಮತ್ತು ಚಂದ್ರ’ ಕೃತಿಯನ್ನು ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ ಪ್ರಕಟಿಸಿದೆ.

ಎಸ್. ಕಲಾಧರ್ : ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದವರಾದ ಎಸ್. ಕಲಾಧರ್ ಅವರು ಪ್ರಸ್ತುತ ಶಿಡ್ಲಘಟ್ಟ ತಾಲೂಕಿನ ತಾತಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿಯವರೆಗಿನ 23 ವರ್ಷಗಳ ತಮ್ಮ ಸೇವಾ ಅವಧಿಯಲ್ಲಿ, ಶಾಲೆಯಲ್ಲಿ ಮಕ್ಕಳ ಸ್ನೇಹಿ ವಾತಾವರಣವನ್ನು ನಿರ್ಮಿಸುವ, ಮಕ್ಕಳನ್ನು ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿ ಅವರ ಕಲಿಕೆಗೆ ಹೊಸ ರೂಪ ನೀಡುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇವರು ಹೊರತಂದ ‘ಶಾಮಂತಿ’ ಪುಸ್ತಕದ ಎಂಟು ಸಂಪುಟಗಳು ಇವರ ಮಕ್ಕಳ ಸ್ನೇಹಿ ಚಟುವಟಿಕೆಗಳಿಗೆ ಸಾಕ್ಷಿ. ಮಕ್ಕಳಿಗಾಗಿ ಮುಕ್ತ ವಾತಾವರಣವನ್ನು ನಿರ್ಮಿಸಿ, ಅವರ ಸೃಜನಶೀಲತೆಗೆ ಪ್ರೋತ್ಸಾಹ ಕೊಟ್ಟು, ಅವರಿಂದ ಬರಹಗಳನ್ನು ಮತ್ತು ಚಿತ್ರಗಳನ್ನು ಬರೆಸಿ, ಸಮುದಾಯದ ಸಹಾಯದೊಂದಿಗೆ ಅವುಗಳನ್ನು ಪುಸ್ತಕಗಳ ರೂಪದಲ್ಲಿ ಪ್ರಕಟಿಸಿರುವುದು ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಒಂದು ವಿಶೇಷ ಕಾರ್ಯ. ಎಂಟು ವರ್ಷಗಳ ಕಾಲ ಪ್ರಕಟವಾದ ಈ ಸಂಪುಟಗಳು ಸಾಹಿತ್ಯ ಲೋಕದ ಗಮನ ಸೆಳೆದಿದ್ದವು.

ಶಾಲೆಯಾಚೆಗೂ, ಮಕ್ಕಳ ಶಿಕ್ಷಣ ಮತ್ತು ಸಾಹಿತ್ಯದ ಕೆಲಸಗಳಲ್ಲಿ ನಿರತವಾಗಿರುವ ಇವರು ‘ನವಿಲಗರಿ’ ಎಂಬ ಮಕ್ಕಳ ಮಾಸಿಕವನ್ನು ಪ್ರಾರಂಭಿಸಿ ಎರಡು ವರ್ಷ ನಿರ್ವಹಿಸಿದ್ದಾರೆ. ಮಕ್ಕಳ ಗೋಡೆ ಪತ್ರಿಕೆ ‘ಬೇಲಿಹೂ’ನ ಪ್ರಕಟಣೆಯನ್ನು ನಿರ್ವಹಿಸಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ‘ಗೋಡೆತೇರು’ ಗೋಡೆ ಪತ್ರಿಕೆಯ ವಿನ್ಯಾಸ ಹಾಗೂ ಸಂಪಾದಕೀಯ ಸಮಿತಿಯಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ‘ಬಾಲನಂದಿ’ ಮಕ್ಕಳ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಪಾಲಿಕೆಗೆ 19 ಗ್ರಾಮಗಳ ಸೇರ್ಪಡೆಗೆ ಸಿದ್ಧತೆ

ಶಿವಮೊಗ್ಗ, ನಿರೀಕ್ಷೆಯಂತೆಯೇ ತುಮಕೂರು ಮತ್ತು ಶಿವಮೊಗ್ಗ ನಗರ ಪಾಲಿಕೆಗಳ ವ್ಯಾಪ್ತಿ ವಿಸ್ತರಣೆಗೆ...

ಶಿವಮೊಗ್ಗ | ಅಂಬೇಡ್ಕರ್ ಓದು ; ಭಾರತವನ್ನು ಅರಿಯುವ ದಾರಿ : ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯ

ಶಿವಮೊಗ್ಗ ಮಾನವತಾವಾದಿ ಅಂಬೇಡ್ಕರ್ ಅವರನ್ನು ಓದುವುದು ಎಂದರೆ ಭಾರತವನ್ನು ನೈಜವಾಗಿ ಅರಿಯುವುದು,...

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

Download Eedina App Android / iOS

X