ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಸೋಮವಾರ ಮೃತರಾದ ಕೇರಳ ಮಾಜಿ ಮುಖ್ಯಮಂತ್ರಿ ವಿ.ಎಸ್ ಅಚ್ಯುತಾನಂದನ್ ಅವರಿಗೆ ಸಿಪಿಐಎಂ ಪಕ್ಷದ ವತಿಯಿಂದ ನುಡಿನಮನ ಸಲ್ಲಿಸಲಾಯಿತು.
ಈ ವೇಳೆಯಲ್ಲಿ ಸಿಪಿಐಎಂ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಎಂ.ಎಸ್.ಹಡಪದ ಮಾತನಾಡಿ, “ಅಚ್ಯುತಾನಂದನ್ ಸಾರ್ವಜನಿಕ ಜೀವನದಲ್ಲಿ ನ್ಯಾಯ ಮತ್ತು ಜನ ಸಾಮಾನ್ಯರ ಹಿತದ ಪರವಾಗಿ ದೃಢವಾದ ಧ್ವನಿಯಾಗಿದ್ದರು. ಹೋರಾಟದ ವೇಳೆಯಲ್ಲಿ, ಕೇರಳದ ಮುಖ್ಯಮಂತ್ರಿಯಾಗಿಯೂ ಸೇರಿದಂತೆ ಅಧಿಕಾರದ ಸ್ಥಾನಗಳಲ್ಲಿ ಅವರು ತಮ್ಮ ತತ್ವಗಳಿಗೆ ನಿಷ್ಠರಾಗಿದ್ದರು. ಅವರ ನಿಧನದಿಂದಾಗಿ ಇಡೀ ಕಾರ್ಮಿಕ ವರ್ಗಕ್ಕೆ ನಮ್ಮ ಪಕ್ಷಕ್ಕೆ ತುಂಬಾಲಾರದ ನಷ್ಟವಾಗಿದೆ” ಎಂದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಬಾಲು ರಾಠೋಡ ಮಾತನಾಡಿ, “ತಮ್ಮ 17 ನೇ ವಯಸ್ಸಿಗೆ ದೇಶದ ಸ್ವತಂತ್ರ್ಯ ಹೋರಾಟಕ್ಕೆ ಅರ್ಪಿಸಿಕೊಂಡವರು. ಭಾರತದ ಬಹು ದೊಡ್ಡ ರೈತ ಕಾರ್ಮಿಕರ ಹೋರಾಟಗಳಲ್ಲೊಂದಾದ ಪುನ್ನಪ್ರ ವಯಲಾರ್ ಸಂಘರ್ಷದಲ್ಲಿ ಪೊಲೀಸರ ವಿಚಿತ್ರ ಹಿಂಸೆಗಳಿಗೆ ಒಳಗಾದವರು. ತೆಂಗಿನ ನಾರು ಕಾರ್ಮಿಕರ, ಕೃಷಿಕೂಲಿಕಾರರ ಸಂಘಟನೆಗಳ ಸ್ಥಾಪಕರು. ಭೂ ಹೋರಾಟದ ಧೀರರು. ನೂರೊಂದು ವರ್ಷಗಳ ಹೋರಾಟದ ಬದುಕು, ಸರಳ ತುಂಬು ಜೀವನ. ಮುಖ್ಯಮಂತ್ರಿಯಾಗಿ ಭ್ರಷ್ಟಾಚಾರ ನಿರ್ಮೂಲನೆ ಕ್ರಮಗಳಿಗೆ ಹೆಸರಾದವರು” ಎಂದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಲಂಚ ಪಡೆವಾಗ ಲೋಕಾಯುಕ್ತ ಬಲೆಗೆ ಮೂವರು ನೌಕರರು
ಸಿಪಿಐಎಂ ಶಾಖಾ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ, ಜಿಲ್ಲಾ ಸಮಿತಿ ಸದಸ್ಯರಾದ ಮೆಹಬೂಬ್ ಹವಾಲ್ದಾರ್, ಪೀರು ರಾಠೋಡ, ಚಂದ್ರು ರಾಠೋಡ, ಚೆನ್ನಪ್ಪ ಗುಗಲ್ತೋತ್ತರ, ಕನಕರಾಯ ಹಾದಿಮನಿ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.