ಜನರು ಅಜ್ಞಾನದ ಅಂಧಕಾರದಲ್ಲಿಯೇ ಇರಬೇಕು ಎಂದು ಬಯಸುವುದು ಮಾನಸಿಕ ಭಯೋತ್ಪಾದನೆಯಾಗಿದೆ. ಮೌಢ್ಯ ಮತ್ತು ಅಂಧಶ್ರದ್ಧೆಯನ್ನು ಪ್ರಶ್ನಿಸುವವರನ್ನು ವೈಚಾರಿಕವಾಗಿ ಎದುರಿಸುವ ಬದಲು ವೈಯಕ್ತಿಕವಾಗಿ ಟೀಕಿಸುವುದು ಮತೀಯವಾದಿಗಳ ಪ್ರವೃತ್ತಿಯಾಗಿದೆ. ಆದರೆ ವೈಚಾರಿಕ ತಳಹದಿಯ ಚರ್ಚೆಗೆ ಸದಾ ಸ್ವಾಗತವಿದೆ ಎಂದು ಮುಂಡರಗಿ-ಬೈಲೂರು ತೋಂಟದಾರ್ಯ ಶಾಖಾಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.
ಗದಗ ನಗರದ ತೋಂಟದಾರ್ಯ ಮಠದಲ್ಲಿ ಆಯೋಜಿಸಿದ್ದ ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ ಎಂಟನೇ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬುದ್ಧ ಮತ್ತು ಬಸವಣ್ಣನವರ ಕಾಲದಿಂದಲೂ ವೈಚಾರಿಕ ವಿಚಾರಗಳನ್ನು ಮುಂದಿಟ್ಟವರ ಮೇಲೆ ವೈಯಕ್ತಿಕ ಪ್ರಹಾರಗಳು ನಡೆಯುತ್ತಿವೆ. ಆದರೆ ಜನರನ್ನು ಮೌಢ್ಯದ ಕತ್ತಲಲ್ಲಿಟ್ಟು ಆಳಲು ಸಾಧ್ಯವಿಲ್ಲ. ಬಸವಾದಿ ಶರಣರ ಚಿಂತನೆಗಳನ್ನು ಅಳಿಸಿಹಾಕಲು ಯಾರಿಂದಲೂ ಸಾಧ್ಯವಿಲ್ಲ. ಒಂದು ಧರ್ಮವನ್ನು ವಿರೋಧಿಸುವ ಉದ್ದೇಶದಿಂದ ವೈಚಾರಿಕ ಚಿಂತನೆಯನ್ನೇ ನಾಶಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ವಚನ ಮತ್ತು ಸಂವಿಧಾನವೇ ನಮ್ಮ ಚಿಂತನೆಗೆ ಆಧಾರ*
ನಾವು ವಚನ ಸಾಹಿತ್ಯ ಹಾಗೂ ಸಂವಿಧಾನದ ಆಶಯಗಳನ್ನು ಆಧರಿಸಿ ಮಾತನಾಡುತ್ತಿದ್ದೇವೆಯೇ ಹೊರತು, ಯಾರನ್ನೂ ವೈಯಕ್ತಿಕವಾಗಿ ಟೀಕಿಸುವ ಉದ್ದೇಶ ಹೊಂದಿಲ್ಲ. ಬಸವತತ್ವವನ್ನು ಒಪ್ಪುವವರನ್ನು ನಾವೂ ಗೌರವಿಸುತ್ತೇವೆ. ನಮ್ಮ ವಿಚಾರಗಳಿಗೆ ವಿರೋಧ ವ್ಯಕ್ತಪಡಿಸುವವರು ವೈಯಕ್ತಿಕ ಟೀಕೆ ಮಾಡುವ ಬದಲು ವೈಚಾರಿಕ ನೆಲೆಯಲ್ಲಿ ಚರ್ಚೆಗೆ ಬರಬೇಕು ಎಂದು ಹೇಳಿದರು.
ಲಿಂಗಾಚಾರ, ಗಣಾಚಾರ ಮತ್ತು ಶಿವಾಚಾರಗಳು ಯಾವ ತತ್ವಗಳನ್ನು ಪ್ರತಿಪಾದಿಸುತ್ತವೆ ಎಂಬುದನ್ನು ಟೀಕಾಕಾರರು ಸ್ಪಷ್ಟವಾಗಿ ವಿವರಿಸಲಿ. ವಿಚಾರಗಳಿಗೆ ವಿಚಾರಗಳ ಮೂಲಕವೇ ಉತ್ತರ ನೀಡಬೇಕು. ವೈಯಕ್ತಿಕ ಆರೋಪಗಳಿಂದ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಅವರು ನೀಡಿದರು.
*ಚಾತುರ್ವರ್ಣದ ಮನಸ್ಥಿತಿಗೆ ಸಮಾಜದಲ್ಲಿ ಮನ್ನಣೆ ಇಲ್ಲ
ನಾವು ಆದಿ-ಅನಾದಿ ಎಂಬ ಕಲ್ಪನೆಗಳನ್ನು ಒಪ್ಪುವುದಿಲ್ಲ. ತತ್ವ ಮತ್ತು ಶರಣರ ವಿಚಾರಗಳಿಗೆ ಮಹತ್ವ ನೀಡುತ್ತೇವೆ. ಚಾತುರ್ವರ್ಣದ ಮನಸ್ಥಿತಿಯನ್ನು ಇಂದಿನ ಸಮಾಜ ಒಪ್ಪುವುದಿಲ್ಲ. ಸಮಾನತೆ, ಮಾನವೀಯತೆ ಮತ್ತು ವೈಚಾರಿಕ ಪ್ರಜ್ಞೆಗೆ ಆದ್ಯತೆ ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಧರ್ಮದ ವಿಚಾರಗಳನ್ನು ಜನರಿಗೆ ತಲುಪಿಸುವವರು ಭಯಕ್ಕೆ ಒಳಗಾಗಬಾರದು. ‘ಪ್ರಾಣ ಕೊಟ್ಟೇವು, ತತ್ವ ಬಿಡೆವು’ ಎಂಬ ದೃಢ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಶರಣರ ವಿಚಾರಧಾರೆ ಮತ್ತು ವೈಚಾರಿಕ ಚಿಂತನೆಗಳನ್ನು ಮುಂದುವರಿಸುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದು ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.






