“ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಶೇ.17% ಮತ್ತು ಶೇ.7% ಹೆಚ್ಚಿಸಲು ಕೇಂದ್ರದ ಬಿಜೆಪಿ ಸರ್ಕಾರ ಸಂವಿಧಾನದ ಷೆಡ್ಯುಲ್ 9ಕ್ಕೆ ಸೇರಿಸಿ ಕ್ರಮ ಜರುಗಿಸುವಂತೆ” ಸಿಪಿಐ(ಎಂ) ಜಿಲ್ಲಾ ಸಮಿತಿ ಕಾರ್ಯದರ್ಶಿ ಬಾಲು ರಾಠೋಡ್ ಆಗ್ರಹಿಸಿದ್ದಾರೆ.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದ, “ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಹೆಚ್ಚಿಸುವ ತೀರ್ಮಾನವನ್ನು ರಾಜ್ಯ ಹೈಕೋರ್ಟ್ ರದ್ದುಗೊಳಿಸಿರುವುದು ದುರದೃಷ್ಟಕರ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಪ್ರಸ್ತುತ ಜನಸಂಖ್ಯೆ ಆಧಾರದಲ್ಲಿ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್ ಆಯೋಗ ಮೀಸಲಾತಿ ಹೆಚ್ಚಳಕ್ಕೆ ಶಿಫಾರಸ್ಸು ಮಾಡಿತ್ತು. ಹಿಂದಿನ ಬೊಮ್ಮಾಯಿ ಸರ್ಕಾರವು ಕೂಡ ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಮಾಡಿತ್ತು. ಕೇಂದ್ರ ಸರ್ಕಾರ ತಕ್ಷಣ ಸಂವಿಧಾನದ ಷೆಡ್ಯುಲ್ 9ಕ್ಕೆ ಸೇರಿಸಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು” ಎಂದು ಸಿಪಿಐ(ಎಂ) ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ.
“ಈಗಾಗಲೇ ತಮಿಳುನಾಡಿನಲ್ಲಿ ಶೇ.69 ರಷ್ಟು ಮತ್ತು ಇತರೆ ಕೆಲವು ರಾಜ್ಯಗಳಲ್ಲಿಯೂ ಮೀಸಲಾತಿ ಹೆಚ್ಚಳ ಜಾರಿಯಲ್ಲಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (ಇಡಬ್ಲ್ಯೂಎಸ್) ಶೇ.10 ರಷ್ಟು ಮೀಸಲಾತಿಯನ್ನು ತುರ್ತಾಗಿ ಜಾರಿಗೊಳಿಸಿದ ಬಿಜೆಪಿ ಸರ್ಕಾರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೂ ಸಂವಿಧಾನದ ಆಶಯದಂತೆ ಮೀಸಲಾತಿ ಪ್ರಮಾಣ ಹೆಚ್ಚಿಸುವುದು ನ್ಯಾಯ ಬದ್ಧವಾಗಿದೆ” ಎಂದು ತಿಳಿಸಿದ್ದಾರೆ.
“ಕೂಡಲೇ ಕೇಂದ್ರದ ಬಿ.ಜೆ.ಪಿ. ಸರ್ಕಾರ ಮೀಸಲಾತಿ ಪ್ರಮಾಣ ಹೆಚ್ಚಿಸಲು ಸಂವಿಧಾನದ ಷೆಡ್ಯೂಲ್ 9ಕ್ಕೆ ಸೇರಿಸಲು ಅಗತ್ಯ ಕ್ರಮ ಜರುಗಿಸಬೇಕು” ಎಂದು ಸಿಪಿಐ(ಎಂ) ಜಿಲ್ಲಾ ಸಮಿತಿ ಕಾರ್ಯದರ್ಶಿ ಬಾಲು ರಾಠೋಡ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.




