ಜಿಲ್ಲೆಯ ಲಕ್ಷ್ಮೀಶ್ವರ ನಗರದ ಎಂ.ಎ. ಕಾಲೇಜಿನ ಹಿಂಭಾಗದಲ್ಲಿರುವ ಗಡ್ಡದೇವರಮಠ ನಗರದಲ್ಲಿ ವಾಸವಿರುವ ಅಲೆಮಾರಿ, ಅರೆ ಅಲೆಮಾರಿ ಹಾಗೂ ಇತರೆ ಬಡ ಕುಟುಂಬಗಳ ತೆರವು ಖಂಡಿಸಿ ಗದಗ ನಗರದಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಈಚೆಗೆ ಪಾದಯಾತ್ರೆ ನಡೆಸಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಕೊರಮ (ಭಜಂತ್ರಿ) ಸೇವಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹುಲ್ಲೇಶ ಎಚ್. ಭಜಂತ್ರಿ ಮಾತನಾಡಿ, ’30 ವರ್ಷಗಳಿಂದ ಅಲೆಮಾರಿ, ಅರೆ ಅಲೆಮಾರಿ ಹಾಗೂ ಇತರೆ ಬಡ ಕುಟುಂಬಗಳು ಇದೇ ಜಾಗದಲ್ಲಿ ವಾಸಿಸುತ್ತಿವೆ. ಅವರಿಗೆ ಪರ್ಯಾಯ ವಸತಿ ಹಾಗೂ ಮೂಲಸೌಕರ್ಯ ಕಲ್ಪಿಸದೆ ತೆರವು ಮಾಡುವುದು ಖಂಡನೀಯ’ ಎಂದರು.
‘ಇಲ್ಲಿನ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟದ ನಡುವೆ ಜೀವನ ಸಾಗಿಸುತ್ತಿವೆ. ಲಕ್ಷೇಶ್ವರ ಪುರಸಭೆಯ ಅಧಿಕಾರಿಗಳು ಈ ಸ್ಥಳದಿಂದ ತೆರವುಗೊಳಿಸಲು ಮುಂದಾಗಿರುವುದು ಆತಂಕಕ್ಕೀಡು ಮಾಡಿದೆ. ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸದಿದ್ದರೆ ಮಕ್ಕಳು, ಮಹಿಳೆಯರು, ವೃದ್ಧರು ನಿರಾಶ್ರಿತರಾಗುವ ಪರಿಸ್ಥಿತಿ ಎದುರಾಗಲಿದೆ’ ಎಂದು ಹೇಳಿದರು.
‘ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳು ಹಾಗೂ ಇತರೆ ಬಡ ಕುಟುಂಬಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಆದ್ಯತೆ ನೀಡಬೇಕು. ಅರ್ಹ ಕುಟುಂಬಗಳನ್ನು ಗುರುತಿಸಿ, ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳು ಹಾಗೂ ಇತರೆ ಬಡ ಕುಟುಂಬಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಆದ್ಯತೆ ನೀಡಬೇಕು. ಅರ್ಹ ಕುಟುಂಬಗಳನ್ನು ಗುರುತಿಸಿ ಸರ್ಕಾರದ ವಸತಿ ಯೋಜನೆಗಳಡಿ ಮನೆಗಳನ್ನು ಮಂಜೂರು ಮಾಡಬೇಕು. ಕುಡಿಯುವ ನೀರು, ವಿದ್ಯುತ್, ರಸ್ತೆ, ಚರಂಡಿ ಹಾಗೂ ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು’ ಎಂದು ಅವರು ಒತ್ತಾಯಿಸಿದರು.
ಘವೇಂದ್ರ ಪೂಜಾರ, ದುರಗೇಶ ವಿಭೂತಿ, ಮಂಜುನಾಥ ಶ್ಯಾವಿ, ನಾಗರಾಜ ಕರಣಿ, ಶಿವರಾಜ ಮಡಿವಾಳರ, ದುರಗಪ್ಪ ಪೂಜಾರ, ಹೆಗಡೆಪ್ಪ ಶಿಗ್ಗಾಂವ, ಬಂದಗಿ ಕಲೇಗಾರ, ರಾಜಪ್ಪ ಕಲೇಗಾರ, ಹನಮಂತಪ್ಪ ಮಂಡಿವಾಲ, ರವಿ ಬಂಡಿವಾಳ, ಹೊಸಿನೆವ್ವ ಪೂಜಾರ, ಪಾರವ್ವ ಶಿಗ್ಗಾಂವ, ಸುಜಾತಾ ಹೊಸಮನಿ ಇದ್ದರು.





