“ಅನೇಕ ವರ್ಷಗಳಿಂದ ತಾಲೂಕು ಬರಗಾಲಕ್ಕೆ ತುತ್ತಾಗುತ್ತಿದ್ದರೂ ಸಹ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ದ ಅಡಿಯಲ್ಲಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗಿಲ್ಲ. ಆ ಮೂಲಕ ಈ ಭಾಗದ ಜನರಿಗೆ ನಂಬಿಕೆ ದ್ರೋಹ ಮಾಡಿದ್ದಾರೆ” ಎಂದು ರೈತ ಮುಖಂಡರು ಆರೋಪಿಸಿದರು.
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಬೆಣಚಮಟ್ಟಿ ಕೆರೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಶನಿವಾರ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಕಾರ್ಮಿಕ ಮುಖಂಡ ಎಂ.ಎಸ್. ಹಡಪದ ಮಾತನಾಡಿ, “ತಾಲೂಕಿನ ಸಣ್ಣ, ಸಣ್ಣ ಹಿಡುವಳಿದಾರರು ನೀರಲ್ಲದೆ ತಮ್ಮ ಜಮೀನುಗಳನ್ನು ರಿಯಲ್ ಎಸ್ಟೇಟ್ ಎಜೆಂಟ್ ಗಳಿಗೆ, ಶ್ರೀಮಂತರಿಗೆ ಮಾರಿದ ಮೇಲೆ ಪವನ್ ವಿದ್ಯುತ್ ಯೋಜನೆಗೆ, ರಿಯಲ್ ಎಸ್ಟೇಟ್ ಮಾಡುವವರಿಗೆ ಅನುಕೂಲ ಕಲ್ಪಿಸಲು ನೀರಾವರಿ ಯೋಜನೆಗೆ ಮುಂದಾಗುವುದು ಆಡಳಿತದ ಹುನ್ನಾರವಾಗಿದೆ” ಎಂದು ಕಿಡಿಕಾರಿದರು.
“ಮಂಡ್ಯ, ಬೆಳಗಾವಿ ರೈತರಿಗೆ ಬೇಡವಾದ ಪವನ್ ವಿದ್ಯುತ್ ಇಲ್ಲಿನ ರೈತರಿಗೂ ಸಹ ಬೇಡವಾಗಿತ್ತು. ಆದರೆ ಒತ್ತಡ ತಂತ್ರದ ಮೂಲಕ ಫ್ಯಾನ್ ಕೂಡಿಸಲಾಗುತ್ತಿದೆ. ಇದರ ಹಿಂದಿರುವವರು ಯಾರು ಎಂಬುದು ಮುಚ್ಚಿಡದ ಸತ್ಯವಾಗಿದೆ” ಎಂದು ಹೆಳಿದರು.
“ಪ್ರಸ್ತುತ ಯೋಜನೆಯ ನೆರೆಯ ತಾಲೂಕು ಯಲಬುರ್ಗಾ, ಕುಷ್ಟಗಿ ಹಾಗೂ ಗಂಗಾವತಿ ಮತ್ತು ಕನಕಗಿರಿಯಲ್ಲಿ ಭಾಗಶಃ ನೀರು ಹರಿಸುವ ಮೂಲಕ ಅಲ್ಲಿನ ರೈತರಿಗೆ ನೀರಾವರಿ ಲಾಭವನ್ನು ತಲುಪಿಸಲಾಗಿದೆ. ಆದರೆ ಇಲ್ಲಿನ ಜನಪ್ರತಿನಿಧಿಗಳು ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಶಾಸಕರಾಗಿ ರಾಜಕೀಯ ಅಧಿಕಾರ ಅನುಭವಿಸಿದ್ದೀರಿ. ಆದರೆ ಯೋಜನೆಯ ಲಾಭ ಮಾತ್ರ ಇಲ್ಲಿನ ರೈತರಿಗೆ ಸಿಕ್ಕಿಲ್ಲ. ಹೀಗಾಗಿ ಶಾಸಕರು ನೀವು ಯೋಜನೆಗೆ ಡಿಪಿಆರ್ ಆಗಿದೆ. ನಾಳೆ, ಮುಂದಿನ ವಾರ. ಕೆಲವೇ ತಿಂಗಳಲ್ಲಿ ನೀರು ಕೆರೆಗಳಿಗೆ ಬರುತ್ತದೆ ಎಂದು ಜನರ ನಂಬಿಸುತ್ತಾ ಬರುತ್ತಿದ್ದೀರಿ. ನೀವು ಕೆಲಸ ಮಾಡಿದ್ದು ನಿಜವಾದರೆ ಸರ್ಕಾರದ ಜತೆಗಿನ ಪತ್ರ ವ್ಯವಹಾರ ಅಥವಾ ಅಗತ್ಯ ದಾಖಲೆಗಳನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಅ.28ರಿಂದ ಮ್ಯಾಕಲ್‌ಝರಿಗ್ರಾಮದಿಂದ ಪ್ರತಿಭಟನಾಮೆರವಣಿಗೆ ಮತ್ತು ತಹಸೀಲ್ದಾರ್ ಕಚೇರಿ ಎದುರಿಗೆ ಪ್ರತಿಭಟನಾ ಧರಣಿ ನಡೆಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಮುಖಂಡ ಬಾಲು ರಾಠೋಡ ಮಾತನಾಡಿ, “ತಾಲೂಕು ಬರಪೀಡಿತ ಎಂದು ಘೋಷಣೆಯಾಗಿದೆ. ಆದರೆ ಈವರೆಗೂ ಉದ್ಯೋಗಖಾತ್ರಿ ಅಡಿಕೆಲಸವಾಗಲಿ, ದನ ಕರುಗಳಿಗೆ ಮೇವು ಬ್ಯಾಂಕ್ ಸೇರಿ ಇತರ ಅಗತ್ಯ ಕಾರ್ಯಕ್ರಮಗಳ ಬಗ್ಗೆ ಆಡಳಿತ ಹಾಗೂ ಅಧಿಕಾರಿಗಳು ಮತ್ತು ವಿಪಕ್ಷಗಳು ಧ್ವನಿ ಎತ್ತುತ್ತಿಲ್ಲ. ಇದರಿಂದ ಇವರಿಗೆ ರೈತರ, ಕೂಲಿಕಾರ್ಮಿಕರ ಮತ್ತು ಬಡಜನರ ಬಗ್ಗೆ ಕಾಳಜಿ ಎಷ್ಟಿದೆ ಎಂಬುದು ತಿಳಿಯುತ್ತದೆ” ಎಂದರು.
“ಇದಕ್ಕೂ ಮುನ್ನ ಕೆರೆಗೆ ಕೃಷಿ ಕೂಲಿಕಾರ್ಮಿಕ ಸಂಘಟನೆಯ ನಾಯಕಿ ಕರಿಯಮ್ಮ ಗುರಿಕಾರ ನೀರನ್ನು ಹಾಕುವ ಮೂಲಕ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಪುರಸಭೆ ಸ್ಥಾಯಿ ಸಮಿತಿ ಮಾಜಿ ಚೇರ್ಮನ್ ಶರಣಪ್ಪ ರೇವಡಿ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಪೀರು ರಾಠೋಡ, ದಾವಲ ತಾಳಿಕೋಟಿ, ಕರಿಯಪ್ಪ ಜಾನಾಯಿ, ನೀಲ್ಲಪ್ಪ ಗಡಾದ, ಈರಪ್ಪ ಕೆರಿ, ಕೆ.ಎಚ್. ಪಾಟೀಲ, ಶರಣಪ್ಪ ಆವಾರಿ ಸೇರಿ ಇತರರು ಇದ್ದರು.





