ಸ್ವಾತಂತ್ರ್ಯಪೂರ್ವಕ್ಕಿಂತಲೂ ಭೀಕರವಾದ ಕಾನೂನುಗಳು ಇಂದಿನ ಭಾರತದಲ್ಲಿ ಅಸ್ತಿತ್ವದಲ್ಲಿದ್ದರೂ, ಇಂದಿನ ಹೋರಾಟವನ್ನು ಜನಪರವಾಗಿ ಅರ್ಥ ಮಾಡಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ ಎಂದು ಚಿಂತಕರಾದ ಉದಯ ಗಾಂವಕಾರ ಹೇಳಿದರು.
ಉಡುಪಿ ರಥಬೀದಿ ಗೆಳೆಯರು ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಶನಿವಾರ ಉಡುಪಿ ಎಂಜಿಎಂ ಕಾಲೇಜಿನ ಧ್ವನ್ಯಲೋಕದಲ್ಲಿ ಆಯೋಜಿಸಲಾದ “ಗಾಂಧಿ ಇಂದಿಗೆ ನಾಳೆಗೆ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು, “ಜನಬೆಂಬಲವಿಲ್ಲದೆ ಗಾಂಧಿಗೆ ಅಂದು ಹೋರಾಟ ನಡೆಸುವುದು ಅಸಾಧ್ಯವಾಗುತ್ತಿತ್ತು. ಅವರ ರಾಜಕೀಯ ಆಸಕ್ತಿ ಮತ್ತು ಜನಸಂಪರ್ಕ ಕೌಶಲ್ಯದಿಂದ ಜನರ ವಿಶ್ವಾಸವನ್ನು ಗೆದ್ದು, ಸ್ವಾತಂತ್ರ್ಯ ಚಳವಳಿಯನ್ನು ಜನಚಳವಳಿಯನ್ನಾಗಿ ಪರಿವರ್ತಿಸಲು ಸಾಧ್ಯವಾಯಿತು. ಆದ್ದರಿಂದ ಗಾಂಧಿಯನ್ನು ಕೇವಲ ಸಂತನಾಗಿ ನೋಡಬಾರದು, ರಾಜಕಾರಣಿಯಾಗಿ ವಿಶ್ಲೇಷಿಸಬೇಕಾಗಿದೆ,” ಎಂದು ಹೇಳಿದರು. ಅವರು ಇಂದಿನ ಹೋರಾಟಗಳ ಅಗತ್ಯವನ್ನು ಸ್ಮರಿಸುತ್ತಾ, “ಜನರ ಪ್ರಶ್ನೆಗಳನ್ನು ಜನರೇ ಉಚ್ಛರಿಸಬೇಕಾದ ಕಾಲ ಬಂದಿದೆ. ಗಾಂಧಿಯ ಮಾರ್ಗದಲ್ಲೇ ಸಾಗುವುದರಿಂದ ಮಾತ್ರ ಜನರ ಭರವಸೆ ಪುನಃ ಪಡೆಯಲು ಸಾಧ್ಯ,” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಥಬೀದಿ ಗೆಳೆಯರು ಅಧ್ಯಕ್ಷರಾದ ಉದ್ಯಾವರ ನಾಗೇಶ್ ಕುಮಾರ್ ವಹಿಸಿದ್ದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಶಿ ಕಾರ್ಯಕ್ರಮವನ್ನು ನಿರೂಪಿಸಿದರು.