ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಆರನೇ ವಾರ್ಡ್ ಮಹಬೂಬ್ ನಗರದಲ್ಲಿ ಆರು ವರ್ಷದ ಬಾಲಕ ಆಜಾನ್ ದುರ್ಘಟನೆಯಲ್ಲಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಮನೆ ಪಕ್ಕದಲ್ಲಿದ್ದ ದುರ್ಗಮ್ಮನ ಹಳ್ಳದ ಬಳಿ ಆಟವಾಡುತ್ತಿದ್ದ ಆಜಾನ್, ಹಳ್ಳಕ್ಕೆ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಈ ಘಟನೆಯಿಂದ ಗಂಗಾವತಿ ನಗರ ಪ್ರದೇಶದಲ್ಲಿ ಶೋಕಸಾಗರ ಆವರಿಸಿದೆ.
ಇದಕ್ಕೂ ಮುನ್ನ ಮಹಬೂಬ್ ನಗರದ ನಿವಾಸಿಗಳು ಸೇತುವೆಗೆ ತಡೆಗೋಡೆ ನಿರ್ಮಿಸಲು ಹಲವು ಬಾರಿ ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ, ನಗರಸಭೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂತಹ ದುರಂತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ನಗರಸಭೆ ಪೌರಾಯುಕ್ತ ವಿರುಪಾಕ್ಷಮೂರ್ತಿ ಘಟನಾ ಸ್ಥಳಕ್ಕೆ ಆಗಮಿಸಿದಾಗ, ಸ್ಥಳೀಯರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ವಾರ್ಡ್ ಸದಸ್ಯರೂ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ ನಗರಸಭೆಯ ಯುಜಿಡಿ ಸಮಸ್ಯೆಗೆ ಪರಿಹಾರ ಹುಡುಕುವತ್ತ ಹೆಜ್ಜೆ: ನಾಗರಾಜ್ ಜೆ
ಸಾರ್ವಜನಿಕರು ನಗರಸಭೆಯ ವಿರುದ್ಧ ಕಿಡಿಕಾರುತ್ತ, “ತಡೆಗೋಡೆ ನಿರ್ಮಿಸದೇ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಬೀದಿಗೆ ಇಳಿದು ನಗರಸಭೆ ಮುಂದೆ ತೀವ್ರ ಪ್ರತಿಭಟನೆಗೆ ಮುಂದಾಗುತ್ತೇವೆ” ಎಂದು ನಗರಸಭೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.