ಗ್ರೇಟರ್ ಬೆಂಗಳೂರು ಪ್ರಾಧಿಕಾರ | ಕರ್ತವ್ಯಕ್ಕೆ ವರದಿ ಮಾಡಿದ ಮುಖ್ಯ ಆಯುಕ್ತರು, 5 ನಗರ ಪಾಲಿಕೆಗಳ ಆಯುಕ್ತರು

Date:

Advertisements

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಇನ್ನು ಮುಂದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಆಗಿ ಅಧಿಕೃತವಾಗಿ ಬದಲಾವಣೆಗೊಂಡಿದ್ದಲ್ಲದೇ, ಐದು ಪಾಲಿಕೆಗಳಾಗಿ ವಿಭಜನೆಗೊಳಿಸಲಾಗಿದೆ.

ಬುಧವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಚೇರಿಯ ನಾಮಫಲಕವನ್ನು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಅನಾವರಣಗೊಳಿಸಿದರು. ಆ ಬಳಿಕ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರ ಸಹಿತ 5 ನಗರ ಪಾಲಿಕೆಗಳ ಆಯುಕ್ತರು ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದಾರೆ.

GBA AYUKTARU 1
ಮಹೇಶ್ವರ್ ರಾವ್, ಡಾ. ರಾಜೇಂದ್ರ ಕೆ.ವಿ ಹಾಗೂ ರಮೇಶ್ ಕೆ ಎನ್

ಹಿರಿಯ ಐಎಎಸ್ ಅಧಿಕಾರಿಯಾಗಿರುವ ಮಹೇಶ್ವರ್ ರಾವ್ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾಗಿ, ಸರ್ಕಾರ ನೇಮಕಗೊಳಿಸಿದೆ. ಆ ಬಳಿಕ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಆಯುಕ್ತರಾಗಿ ಐ.ಎ.ಎಸ್ ಅಧಿಕಾರಿ ಡಾ. ರಾಜೇಂದ್ರ ಕೆ.ವಿ, ಬೆಂಗಳೂರು ಪೂರ್ವ ನಗರ ಪಾಲಿಕೆ‌ಯ ಆಯುಕ್ತರಾಗಿ ಐ.ಎ.ಎಸ್ ಅಧಿಕಾರಿ ರಮೇಶ್ ಡಿ.ಎಸ್, ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾಗಿ ಐ.ಎ.ಎಸ್ ಅಧಿಕಾರಿ ಪೊಮ್ಮುಲ ಸುನೀಲ್ ಕುಮಾರ್, ಬೆಂಗಳೂರು ದಕ್ಷಿಣ ನಗರ ಪಾಲಿಕೆಯ‌ ಆಯುಕ್ತರಾಗಿ ಐ.ಎ.ಎಸ್ ಅಧಿಕಾರಿ ರಮೇಶ್ ಕೆ.ಎನ್ ಹಾಗೂ ಬೆಂಗಳೂರು ಕೇಂದ್ರ ನಗರ ಪಾಲಿಕೆಯ‌ ಆಯುಕ್ತರಾಗಿ ಐ.ಎ.ಎಸ್ ಅಧಿಕಾರಿ ರಾಜೇಂದ್ರ ಚೋಳನ್ ಅವರನ್ನು ಸರ್ಕಾರ ನೇಮಕಗೊಳಿಸಿದೆ.

GBA AYUKTARU 2
ಪೊಮ್ಮುಲ ಸುನೀಲ್ ಕುಮಾರ್, ರಾಜೇಂದ್ರ ಚೋಳನ್ ಹಾಗೂ ರಮೇಶ್ ಡಿ.ಎಸ್

ಸರ್ಕಾರದಿಂದ ಆದೇಶ ಸ್ವೀಕರಿಸಿದ ಹಿನ್ನೆಲೆಯಲ್ಲಿ ಮುಖ್ಯ ಆಯುಕ್ತರ ಸಹಿತ 5 ನಗರ ಪಾಲಿಕೆಗಳ ಆಯುಕ್ತರು ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದಾರೆ.

ನೂತನ ಪಾಲಿಕೆ ಕಚೇರಿಗಳ ನಿರ್ಮಾಣಕ್ಕೆ ನ. 1 ರಂದು ಭೂಮಿಪೂಜೆ: ಡಿಸಿಎಂ ಡಿ.ಕೆ. ಶಿವಕುಮಾರ್

“ಐದು ಪಾಲಿಕೆಗಳ ನೂತನ ಕಚೇರಿಗೆ ಭೂಮಿಪೂಜೆಯನ್ನು ನವೆಂಬರ್ 1 ರಂದು ನೆರವೇರಿಸಲಾಗುವುದು. ಎಲ್ಲಾ ಪಾಲಿಕೆಗಳ ಗಡಿ ಭಾಗಗಳಲ್ಲಿ ಗಡಿ ಗೋಪುರಗಳನ್ನು ನಿರ್ಮಾಣ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

“ಪ್ರತಿ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗಳ ಸುಧಾರಣೆ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ 500 ಮಂದಿ ಎಂಜಿನಿಯರ್‌ಗಳಿಗೆ ಅನುಮೋದನೆ ನೀಡಲಾಗಿದೆ. ಈ ಹಿಂದೆ 198 ವಾರ್ಡ್ ಗಳಿದ್ದವು. ಈಗ 500 ವಾರ್ಡ್ ಗಳ ರಚನೆಯ ಅನುಮತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪಾಲಿಕೆಗಳ ಆಡಳಿತಾತ್ಮಕ ವೆಚ್ಚ, ಸಂಬಳ ಹಾಗೂ ನಿವೃತ್ತಿ ವೇತನಕ್ಕೆ ಎಂದು ಬಿಬಿಎಂಪಿಯಿಂದ ಸುಮಾರು 300 ಕೋಟಿ ರೂ. ಹಣ ಬಿಡುಗಡೆಗೆ ಮಾಡಲಾಗುವುದು” ಎಂದರು.

“ನಾಗರಿಕರು, ವಾಸ್ತುಶಿಲ್ಪಿಗಳು ಪಾಲಿಕೆ ಕಚೇರಿಗಳ ವಿನ್ಯಾಸ ಹೇಗಿರಬೇಕು ಎಂದು ಸಲಹೆ ನೀಡಬಹುದು. ಜೊತೆಗೆ ವಿನ್ಯಾಸಗಳನ್ನು ಸಹ ನೀಡಬಹುದು. ಇದರಲ್ಲಿ ಅತ್ಯುತ್ತಮ ಮೂರು ಅಥವಾ ಐದು ವಿನ್ಯಾಸಗಳನ್ನು ಆಯ್ಕೆ ಮಾಡಲಾಗುವುದು. ಇದಕ್ಕೆ 5 ಲಕ್ಷ ರೂ. ಬಹುಮಾನ ನೀಡಲಾಗುವುದು” ಎಂದರು.

“ಪ್ರತಿ ಪಾಲಿಕೆಗಳಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳು, ಒಬ್ಬರು ಕೆಎಎಸ್, ಇಬ್ಬರು ಮುಖ್ಯ ಎಂಜಿನಿಯರ್‌ಗಳು ಹಾಗೂ ಅಗತ್ಯ ಕಚೇರಿ ಸಿಬ್ಬಂದಿ ಕೆಲಸ ಮಾಡಲಿದ್ದಾರೆ. ಬೆಂಗಳೂರು ನಗರಕ್ಕೆ ಉತ್ತಮವಾದ ಆಡಳಿತ ಹಾಗೂ ಜನರ ಬಾಗಿಲಿಗೆ ಸರ್ಕಾರವನ್ನು ತೆಗೆದುಕೊಂಡು ಹೋಗಬೇಕು ಎಂದು ನಿರ್ಣಯಗಳನ್ನು ತೆಗೆದುಕೊಂಡು ಪಾಲಿಕೆಗಳು ಕೆಲಸ ಮಾಡಲಿವೆ. ಪಾಲಿಕೆಗಳ ವ್ಯಾಪ್ತಿಗೆ ಬರುವ ರಸ್ತೆ, ಚರಂಡಿ ಸೇರಿದಂತೆ ಇತರೇ ಸಂಗತಿಗಳನ್ನು ಗುರುತಿಸುವ ಕೆಲಸವಾಗಲಿದೆ” ಎಂದು ಹೇಳಿದರು.

ನೂತನ ಆಯುಕ್ತರುಗಳ ಜವಾಬ್ದಾರಿಗಳ ಬಗ್ಗೆ ಕೇಳಿದಾಗ, “ನೂತನ ಆಯುಕ್ತರುಗಳು ಜನರ ನಡುವೆಯಿದ್ದು ಕೆಲಸ ಮಾಡಬೇಕು. ಜಿಬಿಎ ಆಯುಕ್ತರು ಫುಟ್ ಪಾತ್, ನೀರು, ರಸ್ತೆ ಸೇರಿದಂತೆ ಇತರೇ ಕೆಲಸಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ದಿನಕ್ಕೆ 17- 18 ಗಂಟೆ ಕೆಲಸ ಮಾಡಬೇಕಾಗುತ್ತದೆ. ಆದ ಕಾರಣಕ್ಕೆ ಹಿರಿಯ ಅಧಿಕಾರಿಗಳ ಜೊತೆ ಯುವ ಅಧಿಕಾರಿಗಳನ್ನೂ ನಿಯೋಜನೆ ಮಾಡಲಾಗಿದೆ” ಎಂದರು.

“ಮಹೇಶ್ವರ್ ರಾವ್ ಅವರು ಜಿಬಿಎಗೆ ಮುಖ್ಯ ಆಯುಕ್ತರಾಗಿ ಹಾಗೂ ಆಡಳಿತಾಧಿಕಾರಿಯಾಗಿ ಚುನಾವಣೆ ನಡೆಯುವವರೆಗೂ ಕಾರ್ಯನಿರ್ವಹಣೆ ಮಾಡಲಿದ್ದಾರೆ. ಪ್ರಾಧಿಕಾರದ ಸಮಿತಿಗೆ 75 ಸದಸ್ಯರನ್ನು ನೇಮಕ ಮಾಡಲಾಗಿದೆ” ಎಂದು ತಿಳಿಸಿದರು.

“ಬೆಂಗಳೂರಿನ ಸಮಸ್ಯೆಗಳು ದಿನ ಬೆಳಗಾಗುವುದರಲ್ಲಿ ಬಗೆಹರಿಯುವುದಿಲ್ಲ. ಆದರೆ ಮುಂದಿನ ದಿನಗಳಲ್ಲಿ ನಾವು ಬಗೆಹರಿಸುವ ವಿಶ್ವಾಸವಿದೆ. ಕುಡಿಯುವ ನೀರು, ರಸ್ತೆ ಗುಂಡಿ, ಸಂಚಾರ ದಟ್ಟಣೆ ವಿಚಾರದಲ್ಲಿ ಉತ್ತಮವಾಗಿ ಕೆಲಸ ಮಾಡಲಾಗುವುದು” ಎಂದರು.

ಜಿಬಿಎಯಿಂದ ಬೆಂಗಳೂರು ಅಭಿವೃದ್ಧಿ ಸಾಧ್ಯವೇ ಎಂದು ಕೇಳಿದಾಗ, “ಖಂಡಿತವಾಗಿಯೂ ಸಾಧ್ಯವಾಗಲಿದೆ. ಸಾರ್ವಜನಿಕರು ಸಹ ಪಾಲಿಕೆಗಳ ಜೊತೆ ಕೈ ಜೋಡಿಸಬೇಕು. ಆಗ ಮಾತ್ರ ಪಾರದರ್ಶಕ ಆಡಳಿತ ನಡೆಸಲು ಸಾಧ್ಯವಾಗುತ್ತದೆ. ಜನರು ಪ್ರಾಮಾಣಿಕವಾಗಿ ತಮ್ಮ ಆಸ್ತಿಗಳನ್ನು ಘೋಷಣೆ ಮಾಡಿಕೊಳ್ಳಬೇಕು, ತೆರಿಗೆ ಪಾವತಿ ಮಾಡಬೇಕು” ಎಂದರು.

ಜಿಬಿಎಯ ಕಾರ್ಯನಿರ್ವಹಣೆ ಏನೆಂದು ಕೇಳಿದಾಗ, “ಬಿಬಿಎ ಕೇವಲ ಉಸ್ತುವಾರಿ ನೋಡಿಕೊಳ್ಳುತ್ತದೆ. ಮಿಕ್ಕ ಎಲ್ಲಾ ಸಂಗತಿಗಳು ಪಾಲಿಕೆಗಳ ವ್ಯಾಪ್ತಿಗೆ ಬರಲಿದೆ” ಎಂದು ತಿಳಿಸಿದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೋಜುಗಾದ ಸೂಜು ಮಲ್ಲಿಗೆ ಹುಡುಗಿ ಹಾಡು : ಇಮ್ಮಡಿಯಾದ ಪ್ರೇಕ್ಷಕರ ಉತ್ಸಾಹ

 ಕಳೆದ 10 ದಿನಗಳಿಂದ ದಸರಾ ಉತ್ಸವ ಸಂಭ್ರಮದಲ್ಲಿ ಮುಳುಗಿದ್ದ ಪ್ರೇಕ್ಷಕರ ಉತ್ಸಾಹ...

ತುಮಕೂರು ದಸರಾ : ಸಚಿವರಿಂದ ವಿಶೇಷ ಪೂಜೆ

ತುಮಕೂರು ದಸರಾ ಉತ್ಸವದ ಕಡೆಯ ದಿನವಾದ ವಿಜಯದಶಮಿಯಂದು ಗೃಹ ಹಾಗೂ ಜಿಲ್ಲಾ...

ಯುವಪರಿವರ್ತನೆ ಯಾತ್ರೆ: ಬಾಗಲಕೋಟೆಯಲ್ಲಿ ಚಾಲನೆ

ಯುವಜನರನ್ನು ರಾಜ್ಯದ ಅಭಿವೃದ್ಧಿಯತ್ತ ಚಿತ್ತಹರಿಸಲು, ಪ್ರಜೆಗಳ ಆರೋಗ್ಯ, ಶಿಕ್ಷಣ, ಸಬಲೀಕರಣ, ಉದ್ಯೋಗದ...

ಕೊಪ್ಪಳ | ಪ್ರವಾದಿ ಮಹಮ್ಮದ್‌ ಸಂದೇಶವನ್ನು ನಾವು ಪಾಲನೆ ಮಾಡಬೇಕು: ಲಾಲ್ ಹುಸೇನ್ ಕಂದ್ಗಲ್

'ಖುರಾನ್' ಬರುವ ಪ್ರವಾದಿ ಮಹಮ್ಮದ್‌ ಅವರು ಹೇಳಿದ ಸತ್ಯವನ್ನೇ ಭಾರತೀಯ ಪುರಾಣಗಳು...

Download Eedina App Android / iOS

X