ಕಳೆದ 35 ವರ್ಷ ನಿರಂತರ ಶಿಕ್ಷಣ ಸೇವೆ ಸಲ್ಲಿಸಿದ್ದ ಶಿಕ್ಷಕ ಕೆ.ಎಸ್.ಅಶ್ವತ್ಥ್ ಅವರು ಸೇವೆಯಲ್ಲಿ 23 ವರ್ಷ ವೇತನ ರಹಿತ ಕೆಲಸ ಮಾಡಿ ಸೇವೆಗೆ ಅರ್ಥಕೊಟ್ಟ ಹಿನ್ನಲೆ ವಯೋನಿವೃತ್ತ ಬೀಳ್ಕೊಡುಗೆ ಸಮಾರಂಭಕ್ಕೆ ಸಾವಿರಾರು ಸಂಖ್ಯೆಯಲ್ಲಿ ಅವರ ಶಿಷ್ಯರು ತಂಡೋಪತಂಡವಾಗಿ ಬಂದು ವಿಶೇಷ ಕೊಡುಗೆ ನೀಡಿ ಸನ್ಮಾನಿಸಿ ಗೌರವಿಸಿದ ಅವಿಸ್ಮರಣೀಯ ಕ್ಷಣಗಳು ತಾಲ್ಲೂಕಿನ ಕಡಬ ಹೋಬಳಿ ಕೊಪ್ಪ ಗ್ರಾಮದಲ್ಲಿ ಕಂಡು ಬಂತು.
ಕೊಪ್ಪ ಗ್ರಾಮದ ಜ್ಞಾನಗಂಗ ಗ್ರಾಮಾಂತರ ಪ್ರೌಢಶಾಲೆಯ ಶಿಕ್ಷಕ ಕೆ.ಎಸ್.ಅಶ್ವತ್ಥ್ ಅವರನ್ನು ಬೆಳಿಗ್ಗೆ ಊರಿನ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಸಾವಿರಾರು ಸಂಖ್ಯೆಯಲ್ಲಿದ್ದ ಹಳೇ ವಿದ್ಯಾರ್ಥಿಗಳ ಸಂಘ ಸದಸ್ಯರು 1990 ರಿಂದ ಶೈಕ್ಷಣಿಕ ತಂಡವಾಗಿ ಹಳೇ ವಿದ್ಯಾರ್ಥಿಗಳು ಬೆಳ್ಳಿ ಕಿರೀಟ, ಬೆಳ್ಳಿ ಗಣೇಶ, ಬೆಳ್ಳಿ ದೀಪದ ಕಂಬಗಳು, ನಗದು ಠೇವಣಿ ಪತ್ರ ಹೀಗೆ ವಿಶೇಷ ಕೊಡುಗೆ ನೀಡಿದ್ದು ಈ ಶಿಕ್ಷಕರ ಸೇವೆಗೆ ಸಂದ ಗೌರವ ಎನಿಸಿದೆ.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಡಿಡಿಪಿಐ ರಘುನಾಥ್, ಗ್ರಾಮೀಣ ಭಾಗದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡದ ಸಮಯದಲ್ಲಿ ಖಾಸಗಿ ಶಾಲೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಿರುವ ಅಶ್ವತ್ಥ್ ಅವರು ವೇತನ ಸಿಗದ ಸಮಯದಲ್ಲಿ ಕೆಲಸ ಬಿಡದೆ ಹಳ್ಳಿಗಾಡಿನ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲೇಬೇಕು ಎಂದು ಶಾಲೆಯನ್ನು ಉಳಿಸಲು ಹರಸಾಹಸ ಪಟ್ಟಿದ್ದಾರೆ. ಸರ್ಕಾರದ ಅನುದಾನ ಪಡೆಯಲು ಕಸರತ್ತು ನಡೆಸಿ ಅನುದಾನಿತ ಶಾಲೆ ನಿರ್ಮಾಣಕ್ಕೆ 23 ವರ್ಷ ವೇತನ ಇಲ್ಲದೆ ಕೆಲಸ ಮಾಡಿದ್ದು ನಿಜವಾದ ಸೇವೆ ಎಂದು ಶ್ಲಾಘಿಸಿದರು.
ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಈಶ್ವರಯ್ಯ ಮಾತನಾಡಿ ಶಾಲೆಯನ್ನು ಉಳಿಸಲು ಶಿಕ್ಷಕರೇ ಕಷ್ಟ ಪಟ್ಟು ಕೆಲಸ ಮಾಡಿದ ಅಶ್ವತ್ಥ್ ಶಿಕ್ಷಕನಾಗಿ ಅಲ್ಲದೆ ಸಮಾಜ ಸೇವಕನಾಗಿ, ಬಡ ಮಕ್ಕಳ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದಾರೆ. ಮಕ್ಕಳ ಭವಿಷ್ಯ ನಿರ್ಮಾಣ ಮಾಡುವುದು ಕೂಡ ಒಂದು ಸಾರ್ಥಕ ಕೆಲಸ ಎನಿಸಿದೆ. ಹೆಣ್ಣು ಮಕ್ಕಳಿಗೆ ಕೂಡಾ ಶಿಕ್ಷಣ ಒದಗಿಸಲು ಕೊಪ್ಪ ಗ್ರಾಮದಲ್ಲಿ ಪ್ರೌಢಶಾಲೆ ಕಟ್ಟಿ ಬೆಳೆಸಿದ ಸೇವೆಗೆ ಅರ್ಥ ಬಂದಿದ್ದು ಇವತ್ತಿನ ಕಾರ್ಯಕ್ರಮದಲ್ಲಿ ಶಿಷ್ಯ ಕೋಟಿ ಕಾಣಿಸಿಕೊಂಡಿದ್ದು. ಗುರುಗಳೇ ಬದುಕು ಕಟ್ಟಿಕೊಡುವ ದೈವ ಎಂಬ ಮಾತಿಗೆ ಅಶ್ವತ್ಥ್ ಸಾಕ್ಷಿಯಾಗಿದ್ದಾರೆ ಎಂದರು.
ನಿವೃತ್ತ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಕೆ.ಎಸ್.ಅಶ್ವತ್ಥ್ ಮಾತನಾಡಿ
1990 ರಲ್ಲಿ ಈ ಶಾಲೆ ಆರಂಭವಾಯಿತು. 35 ವರ್ಷ ನಿರಂತರ ಬೆಳೆದುಬಂದ ಈ ಖಾಸಗಿ ಶಾಲೆಗೆ ಊರಿನ ಜನರೇ ಕಾರಣ. 23 ವರ್ಷ ಉಚಿತ ಶಿಕ್ಷಣ ನೀಡಿದ್ದು ಯಾವುದೇ ಕಾರಣಕ್ಕೂ ಕಷ್ಟ ಎನಿಸಲಿಲ್ಲ. ನನ್ನ ಸಹೋದರ ಹಾಗೂ ಗ್ರಾಮಸ್ಥರ ಸಹಕಾರ ಹಾಗೆಯೇ ಇದ್ದ ಕಾರಣ ವೇತನ ರಹಿತ ಶಿಕ್ಷಣ ಸೇವೆ ನಡೆಸಿದ್ದೇನೆ. ಸಾಧನೆಗೆ ಸಿಕ್ಕ ಫಲ ಸಾವಿರಾರು ಶಿಷ್ಯರು ಸಮಾಜದಲ್ಲಿ ಉತ್ತಮ ಸ್ಥಾನಮಾನ ಗಳಿಸಿದ್ದಾರೆ. ಇದೇ ನಮಗೆ ಸಾರ್ಥಕ ಕ್ಷಣ ಎನಿಸಿದೆ. ಈ ಕ್ಷಣ ಬದುಕಿನ ಕೊನೆ ಕ್ಷಣದವರೆಗೂ ನೆನೆಯುತ್ತೇನೆ ಎಂದು ಭಾವುಕರಾಗಿ ನುಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಕೆ.ಎಸ್.ರಮೇಶ್, ಹಳೇ ವಿದ್ಯಾರ್ಥಿಗಳ ಸಂಘದ ಪಟೇಲ್ ದೇವರಾಜ್, ಕೆ.ಎಸ್.ಸುರೇಶ್, ಹರ್ಷ, ವಕೀಲ ಕೆ.ಸಿ.ನಾಗರಾಜ್ ಇತರರು ಇದ್ದರು.