ಸೌಜನ್ಯ ಸಾವಿಗೆ ನ್ಯಾಯ ಸಿಗಲಿ ಎಂದು ಒತ್ತಾಯಿಸಿ ಭಾರತ ಭೀಮ್ ಸೇನಾ ಸಂಘಟನೆಯ ನೂರಾರು ಪದಾಧಿಕಾರಿಗಳು ಗುಬ್ಬಿಯಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿದರು.
ಗುಬ್ಬಿ ಪಟ್ಟಣದ ಬಸ್ ನಿಲ್ದಾಣದಿಂದ ಪಾದಯಾತ್ರೆಗೆ ಚಾಲನೆ ನೀಡುವ ಮೂಲಕ ನ್ಯಾಯಕ್ಕಾಗಿ ಆಗ್ರಹಿಸಿ ಘೋಷಣೆ ಕೂಗುವ ಮೂಲಕ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ರಸ್ತೆಯಲ್ಲಿ ನಿಂತು ಪ್ರತಿಭಟನೆ ನಡೆಸಿದ ಜೈ ಭೀಮ್ ಕಾರ್ಯಕರ್ತರು ನಿಷ್ಪಕ್ಷಪಾತ ತನಿಖೆ ನಡೆಸಿ ಸೌಜನ್ಯ ಸೇರಿದಂತೆ ಅನ್ಯಾಯಕ್ಕೆ ಒಳಗಾದ ಎಲ್ಲ ಹೆಣ್ಣುಮಕ್ಕಳಿಗೆ ನ್ಯಾಯ ಸಿಗುವಂತೆ ಆಗ್ರಹಿಸಿದರು.
ಜೈ ಭೀಮ್ ಸೇನೆ ರಾಜ್ಯಾಧ್ಯಕ್ಷ ದಿನೇಶ್ ಮಾತನಾಡಿ, “ಸೌಜನ್ಯ ಎಂಬ ಹೆಣ್ಣುಮಗಳ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಹಲವು ವರ್ಷಗಳಿಂದ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದ್ದು, ಇತ್ತೀಚೆಗೆ ಈ ಎಲ್ಲ ಪ್ರಕರಣಕ್ಕೆ ಪೂರಕವಾಗಿ ಸಾಕ್ಷ್ಯಾಧಾರ ಲಭ್ಯವಾಗಿ ಸರ್ಕಾರ ಮಧ್ಯೆ ಪ್ರವೇಶಿಸಿ ಎಸ್‌ಐಟಿ ತನಿಖೆಗೆ ಆದೇಶಿಸಿರುವುದು ಸ್ವಾಗತಾರ್ಹ. ಆದರೆ ಸರ್ಕಾರ ಜನರ ಕಣ್ಣೊರೆಸುವ ಕೆಲಸ ಮಾಡದೆ ಪೊಲೀಸರ ಮೇಲೆ ಒತ್ತಡ ಹಾಕದೆ, ಯಾವುದೇ ರಾಜಕೀಯ ವ್ಯಕ್ತಿಗಳ ಪ್ರಭಾವಕ್ಕೆ ಒಳಗಾಗದಂತೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಪೊಲೀಸರಿಗೆ ಮುಕ್ತ ಅವಕಾಶ ಮಾಡಿಕೊಡಬೇಕು” ಎಂದು ಒತ್ತಾಯಿಸಿದರು.

“ಪೊಲೀಸರ ಪಾರದರ್ಶಕ ತನಿಖೆಯಿಂದ ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡುವ ಜತೆಗೆ ಮುಂದಿನ ದಿನಗಳಲ್ಲಿ ಇಂತಹ ನೀಚ ಕೃತ್ಯಗಳು ನಡೆಯದಂತೆ ಸರ್ಕಾರ ತೆಗೆದುಕೊಳ್ಳುವ ನಿರ್ಧಾರ ಕಿಡಿಗೇಡಿಗಳಿಗೆ ಎಚ್ಚರಿಕೆಯ ಸಂದೇಶ ಸಾರುವಂತಿರಬೇಕು. ಇಲ್ಲವಾದರೆ ನಮ್ಮ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ಜತೆಗೂಡಿ ವಿಧಾನಸೌಧದ ಎದುರು ತಮಟೆ ಚಳವಳಿ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಶಿಕ್ಷಕಿ ಮನೆಯಲ್ಲಿ ಭಾರೀ ಕಳ್ಳತನ: ಆರು ಲಕ್ಷಕ್ಕೂ ಅಧಿಕ ಮೌಲ್ಯದ ಬಂಗಾರ, ನಗದು ಕಳವು
ಪಾದಯಾತ್ರೆಯಲ್ಲಿ ಯುವ ಘಟಕದ ರಾಜ್ಯಾಧ್ಯಕ್ಷ ಸಚಿನ್, ಸಂಘಟನಾ ಕಾರ್ಯದರ್ಶಿ ಮಧು, ರಾಜ್ಯ ಉಪಾಧ್ಯಕ್ಷ ಮಂಜುನಾಥ್, ಅಲ್ಪಸಂಖ್ಯಾತರ ರಾಜ್ಯಾಧ್ಯಕ್ಷ ರಿಜ್ವಾನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಇಮ್ರಾನ್, ರಾಜ್ಯ ಯುವ ಘಟಕದ ಉಪಾಧ್ಯಕ್ಷ ವಿಜಯ ಭಾಸ್ಕರ್, ಜಿಲ್ಲಾಧ್ಯಕ್ಷ ಗಿರೀಶ್, ಮಹಿಳಾ ಅಧ್ಯಕ್ಷೆ ಮಂಜುಳಾ, ಸಾದತ್, ತಾಲೂಕು ಅಧ್ಯಕ್ಷ ರಿಜ್ವಾನ್ ಮತ್ತು ಕಾಂಗ್ರೆಸ್ ಪಕ್ಷದ ನಗರಾಧ್ಯಕ್ಷ ವಾಸುಗೌಡ ಸೇರಿದಂತೆ ಇತರರು ಇದ್ದರು.