ಆಡಳಿತ ವ್ಯವಸ್ಥೆಗೆ ಅತ್ಯವಶ್ಯ ಸುಸಜ್ಜಿತ ಗ್ರಾಮ ಪಂಚಾಯಿತಿ ಭವನ ಕಟ್ಟಲು ಹತ್ತಾರು ವರ್ಷದ ಪ್ರಯತ್ನ ಗುರುವಾರ ಫಲಿಸಿದ ಹಿನ್ನಲೆ ತ್ಯಾಗಟೂರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಭವನವನ್ನು ಲೋಕಾರ್ಪಣೆ ಗೊಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ರಾಜ್ಯ ತೆಂಗು ನಾರಿನ ಸಹಕಾರ ಮಂಡಳಿ ಅಧ್ಯಕ್ಷ ಟಿ.ಎಸ್.ಕಿಡಿಗಣ್ಣಪ್ಪ ಮಾತನಾಡಿ ಸಾವಿರಕ್ಕೂ ಅಧಿಕ ಜನಸಂಖ್ಯೆಯ ತ್ಯಾಗಟೂರು ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಸುಸಜ್ಜಿತ ಕಟ್ಟಡ ಇಲ್ಲದೆ ಪಂಚಾಯಿತಿ ಆಡಳಿತ ಬೇಸರದಲ್ಲಿತ್ತು. ನೆನೆಗುದಿಗೆ ಬಿದ್ದಿದ್ದ ಕಟ್ಟಡ ಕಾಮಗಾರಿಯನ್ನು ನರೇಗಾ ಯೋಜನೆ ಬಳಸಿ ಈಗಿನ ಆಡಳಿತ ಮಂಡಳಿ ವ್ಯವಸ್ಥಿತವಾಗಿ ಕಟ್ಟಿದೆ. ಇದು ಇಡೀ ಪಂಚಾಯಿತಿಗೆ ಸಲ್ಲಬೇಕಾದ ಗೌರವ ಎಂದ ಅವರು ಸಭೆ, ತರಬೇತಿ, ಕಾರ್ಯಕ್ರಮಗಳು ನಡೆಸಲು ಅವಕಾಶ ಇದ್ದು ಆಡಳಿತ ಕರ್ತವ್ಯಕ್ಕೆ ಅನುವು ಮಾಡಿರುವುದು ಮೆಚ್ಚುವಂತಹದ್ದು ಎಂದರು.
ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಪರಮಶಿವಯ್ಯ ಮಾತನಾಡಿ ಕೃಷಿ ಇಲಾಖೆಯ ಕಟ್ಟಡವನ್ನು ಪಡೆದು ಸಭೆ ನಡೆಸುವ ಅನಿವಾರ್ಯ ಎದುರಾಗಿತ್ತು. ಹತ್ತು ವರ್ಷಗಳ ಹಿಂದೆ 15 ಲಕ್ಷ ಹಣ ಬಳಸಿ ಕಟ್ಟಡ ಒಂದು ಹಂತಕ್ಕೆ ತರಲಾಗಿತ್ತು. ನಂತರ ಕೆಲ ವರ್ಷಗಳ ಸಾಹಸದಿಂದ ಭವನ ನಿರ್ಮಾಣ ಕೈಗೂಡಿದೆ. ಈಗಿನ ಎಲ್ಲಾ ಸದಸ್ಯರ ಮುತುವರ್ಜಿಯಿಂದ ಸುಸಜ್ಜಿತ ಭವನ ನಿರ್ಮಾಣ ಆಗಿದೆ ಎಂದರೆ ತಪ್ಪಿಲ್ಲ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಎನ್.ಓಂಕಾರ ಪ್ರಸಾದ್ ಮಾತನಾಡಿ ಅತ್ಯಂತ ಕಿರಿದಾದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸಭೆ, ತರಬೇತಿ ಇನ್ನಿತರ ಕಾರ್ಯಕ್ರಮ ನಡೆಯಬೇಕಿತ್ತು. ಕಿಷ್ಕಿಂದೆ ಎಂತಹ ಸ್ಥಳದಲ್ಲಿ ನಮ್ಮ ಆಡಳಿತ ಕೆಲಸಕ್ಕೆ ಸಾಕಷ್ಟು ಮುಜುಗರ ಆಗುತ್ತಿತ್ತು. ಪಿಡಿಓ ಮೇಡಂ ಅವರ ಸಹಕಾರದಲ್ಲಿ ನರೇಗಾ ಯೋಜನೆ ಬಳಸಿ ಸುಸಜ್ಜಿತ ಭವನ ಸಾರ್ವಜನಿಕ ಸೇವೆಗೆ ಸಜ್ಜಾಗಿದೆ. ಎಲ್ಲಾ ಸದಸ್ಯರ ಶ್ರಮ ಇದರಲ್ಲಿದೆ ಎಂದರು.
ಇದೇ ಸಂದರ್ಭದಲ್ಲಿ ಭವನ ನಿರ್ಮಾಣಕ್ಕೆ ಸಹಕಾರ ನೀಡಿದ ಎಲ್ಲರಿಗೂ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ನಳಿನಾ ಪ್ರಕಾಶ್, ಬಿಜೆಪಿ ಮುಖಂಡ ಸಾಗರನಹಳ್ಳಿ ನಂಜೇಗೌಡ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಆರ್.ವೆಂಕಟೇಶ್, ಗ್ರಾಪಂ ಸದಸ್ಯರಾದ ಶಿವಕುಮಾರಸ್ವಾಮಿ, ಲಕ್ಷ್ಮೀಪತಿ, ಮಂಜುನಾಥ್, ವಿಜಯಲಕ್ಷ್ಮಿ, ಭವ್ಯ, ಪಂಕಜ, ಜಯಮಾಲಾ, ಭೈರಮ್ಮ, ವಿದ್ಯಾಧರ, ಅಂಬಿಕಾ, ಶಿವನಂಜಯ್ಯ, ತಾಪಂ ಸಹಾಯಕ ನಿರ್ದೇಶಕ ರಂಗನಾಥ್, ಪಿಡಿಓ ವನಜಾಕ್ಷಿ, ಕಾರ್ಯದರ್ಶಿ ಲೋಕೇಶ್ ಇತರರು ಇದ್ದರು.