ಗೊಲ್ಲ ಸಮಾಜದಲ್ಲಿ ಊರು ಕಾಡು ಬೇದ ಸೃಷ್ಟಿಸಿ ನಮ್ಮಲ್ಲಿ ಬಿರುಕು ಕಂಡರೆ ಅದನ್ನೇ ಬಂಡವಾಳ ಮಾಡಿಕೊಳ್ಳುವ ಕೆಲವರು ಕಾದಿದ್ದಾರೆ. ನಮ್ಮಲ್ಲಿ ರಾಜಕೀಯ ಶಕ್ತಿ ಬೆಳೆಸಿಕೊಳ್ಳಲು ಸಂಘಟನೆ ಮೊದಲು ಆಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ಹೇಳಿದರು
ಗುಬ್ಬಿ ಪಟ್ಟಣದ ಎಸ್.ಸಿ.ಎಸ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ಆಯೋಜಿಸಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು
ಕಾಡು ಗೊಲ್ಲರು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಹೋರಾಟ ಮಾಡುವ ಮುನ್ನ ಮೊದಲು ಕೇಂದ್ರದಲ್ಲಿ ಇಬ್ಲ್ಯೂ ಎಸ್ ಪಟ್ಟಿಯಲ್ಲಿ ಇರುವ ಕಾಡು ಗೊಲ್ಲ ಹೆಸರನ್ನು ತೆಗೆದು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕು. ಹಾಗೆಯೇ ಅಲೆಮಾರಿ ಪಟ್ಟಿಯಲ್ಲಿ ಕಾಡು ಗೊಲ್ಲ ನಮೂದಿಸಬೇಕು. ಇದಕ್ಕೆ ಹೋರಾಟ ನಡೆಯಲಿ ಎಂದರು
ದೆಹಲಿಗೆ ನನ್ನ ಜೊತೆ ಬನ್ನಿ. ಇಲ್ಲವಾದರೆ ನಿಮ್ಮ ಜೊತೆ ನಾನೇ ಬರಲು ಸಿದ್ಧ. ಮೀಸಲಾತಿ ಲಭ್ಯ ಮಾಡಲು ಬದ್ಧನಾಗಿ ಕೆಲಸ ಮಾಡುತ್ತೇನೆ. 3 ಲಕ್ಷ, 43 ಲಕ್ಷ ಸಂಖ್ಯೆಯಲ್ಲಿ ಮನ್ನಣೆ ಸಿಗುವುದು 43 ಲಕ್ಷ ಸಂಖ್ಯೆಗೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ರಾಜಕೀಯ ಶಕ್ತಿ ಗಳಿಸಲು ಮೊದಲು ಸಂಘಟನೆ, ಒಗ್ಗಟ್ಟು ಪ್ರದರ್ಶನ ಆಗಬೇಕು. ಈ ಹಿಂದೆ ಎ.ಕೃಷ್ಣಪ್ಪ ಅವರ ಅವಧಿಯಲ್ಲಿದ್ದ ಸಂಘಟನೆ ಈಗಿಲ್ಲ. ಕೆಲವರು ಅವರ ವೈಯಕ್ತಿಕಕ್ಕೆ ಸಮಾಜವನ್ನೇ ಬಲಿಕೊಡುತ್ತಾರೆ. ಸಮಾಜದ ಅಭಿವೃದ್ಧಿಗೆ ಎಲ್ಲರೂ ಒಗ್ಗೂಡಿ ಸರ್ಕಾರದ ಗಮನ ಸೆಳೆಯಬೇಕು. ಅದನ್ನು ಬಿಟ್ಟು ಸಮಾಜ ಒಡೆಯುವ ಕೆಲಸ ಮಾಡಬೇಡಿ ಎಂದು ಸಲಹೆ ನೀಡಿದ ಅವರು ಗುಬ್ಬಿ ಪಟ್ಟಣದಲ್ಲಿ ಸಮಾಜದ ಮಕ್ಕಳಿಗೆ ಶಿಕ್ಷಣ ಒದಗಿಸುವ ಹಾಸ್ಟೆಲ್ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಕೃಷ್ಣ ವಂಶದ ಬಗ್ಗೆ ಸರಿಯಾದ ಮಾಹಿತಿ ತಿಳಿಯದ ಕೆಲವರು ಅಪಪ್ರಚಾರ ಮಾಡುತ್ತಿರುವುದು ಸಂಘಟನೆಯನ್ನು ಸಹಿಸದ ಕೆಟ್ಟ ಮನಸ್ಥಿತಿಗಳು. ಮುಕ್ಕೋಟಿ ದೇವರುಗಳ ಪೈಕಿ ಅಲೆಮಾರಿ ದೇವರಾಗಿರುವ ಶ್ರೀ ಕೃಷ್ಣ ಇಂದಿಗೂ ಮನುಕುಲವೇ ಆರಾಧಿಸುವ ದೈವ ಎನಿಸಿದ್ದಾನೆ. ಇದೆಲ್ಲಾ ತಿಳಿದೂ ಹಾಲು ಮನಸ್ಸಿನ ಗೊಲ್ಲರಲ್ಲಿ ಒಡಕು ಮೂಡಿಸುವ ಕೆಲಸ ಮಾಡಬಾರದು. ನಮ್ಮ ಜನಾಂಗ ಪೂಜೆ ಮಾಡುವ ದೇವರು ಬೇರೆ ಸಮಾಜಕ್ಕೆ ತಲುಪಿಲ್ಲ. ನಮ್ಮ ಬುಡಕಟ್ಟು ಸಂಸ್ಕೃತಿಯ ಅಲೆಮಾರಿ ದೇವರಾದ ಶ್ರೀ ಕೃಷ್ಣ ರಚಿತ ಭಗವದ್ಗೀತೆ ವಿಶ್ವ ಶ್ರೇಷ್ಠತೆ ಪಡೆದಿದೆ. ತಿಳಿದೂ ನಮ್ಮಲ್ಲೇ ಒಡಕು ತರಬೇಡಿ. ಸಂಘಟನೆಗೆ ಕೈ ಜೋಡಿಸಿ ಇಲ್ಲವಾದರೆ ಬಾಯಿಯನ್ನು ಕೈಯಿಂದ ಮುಚ್ಚಿಕೊಳ್ಳಬೇಕು. ಹಾಲಿಗೆ ವಿಷ ಹಾಕುವ ಕೆಲಸ ಮಾಡಬೇಡಿ ಎಂದು ಕಿಡಿಕಾರಿದರು.
ಯಾದವ ಸಂಘದ ತಾಲ್ಲೂಕು ಅಧ್ಯಕ್ಷ ಜಿ.ಎನ್.ಬೆಟ್ಟಸ್ವಾಮಿ ಮಾತನಾಡಿ ಧರ್ಮಸ್ಥಳ ವಿಚಾರ ಎಲ್ಲರೂ ನೋಡುತ್ತಿದ್ದಾರೆ. ಅಲ್ಲಿನ ಬುರುಡೆ ಗ್ಯಾಂಗ್ ನಮ್ಮಲ್ಲಿ ಹುಟ್ಟಿಕೊಂಡಿದೆ. ಶ್ರೀ ಕೃಷ್ಣ ನಮ್ಮ ದೇವರಲ್ಲ. ಆರಾಧನೆ ಮಾಡಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಈ ಹಿಂದೆ ನಡೆದ ಎಲ್ಲಾ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದವರೆ ಮುಂದಿದ್ದರು. ಜಗತ್ತಿಗೆ ಗೀತೋಪದೇಶ ನೀಡಿ ದೈವ ಸ್ವರೂಪಿ ಶ್ರೀ ಕೃಷ್ಣನ ನಮ್ಮವರಲ್ಲ ಎಂದಿದ್ದು ಅವರ ಕೆಟ್ಟ ಮನಸ್ಸುಗಳನ್ನು ಬಿಂಬಿಸುತ್ತದೆ ಎಂದು ವಿಷಾದಿಸಿದರು.
ಚಿಕ್ಕಣ್ಣಸ್ವಾಮಿ ಕ್ಷೇತ್ರದ ಧರ್ಮದರ್ಶಿ ಪಾಪಣ್ಣ ಮಾತನಾಡಿ ನಮ್ಮ ಸಮಾಜದ ಸಂಘಟನೆ ದಿನ ಕಳೆದಂತೆ ಇಳಿಮುಖದತ್ತ ಸಾಗಿದೆ. ಸಭೆಗೆ ಬರುವ ಜನ ಕಾರ್ಯಕ್ರಮ ಅಂದರೆ ಬರುತ್ತಿಲ್ಲ. ಒಗ್ಗಟ್ಟಿನ ಕೊರತೆ ಕಾಣುತ್ತಿದ್ದೆ. ಇದಕ್ಕೆ ಕಾರಣ ನಮ್ಮಲ್ಲೇ ಸ್ವಲ್ಪ ಶಿಕ್ಷಣ ಪಡೆದವರೇ ಹಟ್ಟಿಯಲ್ಲಿರುವ ಮುಗ್ಧ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಮೀಡಿಯಾ ಬ್ಯಾಕ್ ಆಫೀಸ್ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಎಸ್.ರಘು ಮಾತನಾಡಿ ನಮ್ಮ ಸಂಸ್ಕೃತಿ, ಪರಂಪರೆ ಜೊತೆ ಶ್ರೀ ಕೃಷ್ಣ ಬಗ್ಗೆ ತಿಳಿಯಬೇಕಿದೆ. ಕೃಷ್ಣನ ಬಾಲ ಲೀಲೆಗಳು ಎಂದಿಗೂ ಭಕ್ತಿ ಪೂರ್ವಕವಾಗಿದೆ. ಕಾಳಿಂಗ ಮರ್ಧನ, ಗೋವರ್ಧನ ಗಿರಿ, ಭಗವದ್ಗೀತೆ ಹೀಗೆ ಎಲ್ಲವೂ ಧರ್ಮ ಸ್ಥಾಪನೆಗೆ ನಡೆದಿದ್ದು ನಮ್ಮ ಅಲೆಮಾರಿ ಜನಾಂಗದಲ್ಲಿ ಹುಟ್ಟಿದ ಕೃಷ್ಣನ ಬಗ್ಗೆ ನಾವು ಮೊದಲು ಭಕ್ತಿ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ವಸುದೈವ ಕುಟುಂಬಕಂ ಎಂಬಂತೆ ನಮ್ಮಲ್ಲಿ ಒಗ್ಗಟ್ಟು ಮೂಡಲಿ ಎಂದರು.
ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ಶ್ರೀ ಕೃಷ್ಣ ವಿಗ್ರಹದ ಅದ್ದೂರಿ ಮೆರವಣಿಗೆ ಪಟ್ಟಣದ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಾಲಯದಿಂದ ಸಾಗಿ ಊರಿನ ಪ್ರಮುಖ ಬೀದಿಯಲ್ಲಿ ಸಂಚರಿಸಿತು. ಮೆರವಣಿಗೆಗೆ ಚಿತ್ರದುರ್ಗ ಯಾದವ ಸಂಸ್ಥಾನದ ಶ್ರೀ ಕೃಷ್ಣಯಾದವಾನಂದ ಸ್ವಾಮೀಜಿ ಚಾಲನೆ ನೀಡಿದರು.
ವೇದಿಕೆಯಲ್ಲಿ ಜೆಡಿಎಸ್ ಮುಖಂಡರಾದ ಬಿ.ಎಸ್.ನಾಗರಾಜು, ಕಳ್ಳಿಪಾಳ್ಯ ಲೋಕೇಶ್, ಯೋಗಾನಂದ ಕುಮಾರ್, ಜುಂಜಪ್ಪನ ಹಟ್ಟಿ ಪ್ರಧಾನ ಅರ್ಚಕ ಯರ್ರಪ್ಪ, ನೆಟ್ಟೆಕೆರೆ ಕ್ಷೇತ್ರದ ಮಹಲಿಂಗಪ್ಪ, ಚಿಕ್ಕಣ್ಣಸ್ವಾಮಿ ಪ್ರಧಾನ ಅರ್ಚಕ ಶಿವಕುಮಾರಸ್ವಾಮಿ, ಕಾಡುಗೊಲ್ಲ ಜಿಲ್ಲಾಧ್ಯಕ್ಷ ಚಂಗಾವರ ಕರಿಯಪ್ಪ, ಯಾದವ ಸೇನೆ ರಾಜ್ಯಾಧ್ಯಕ್ಷ ಅಮ್ಮನಹಟ್ಟಿ ಹರೀಶ್, ಕಾರ್ಯಕ್ರಮ ಆಯೋಜಕರಾದ ಗುಬ್ಬಿ ಹಟ್ಟಿ ಮಹಾಲಿಂಗಯ್ಯ, ವೀರೇಶ್, ಬೀಡಾ ಜಯರಾಮ್ ಇತರರು ಇದ್ದರು.