ಗುಬ್ಬಿ ತಾಲ್ಲೂಕಿನ 34 ಗ್ರಾಮ ಪಂಚಾಯಿತಿಗಳಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನೋಂದಾಯಿತ ಸಕ್ರಿಯ ಕುಟುಂಬಗಳ ಉದ್ಯೋಗ ಚೀಟಿಗಳಗೆ ಸೆ.30 ರೊಳಗಾಗಿ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ ಎಂದು ಗುಬ್ಬಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಶಿವಪ್ರಕಾಶ್ ತಿಳಿಸಿದ್ದಾರೆ.
ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಬಿ.ಎಫ್.ಟಿಗಳು, ಜಿ.ಕೆ.ಎಂ ರವರಿಗೆ ತರಬೇತಿ ನೀಡುವ ಮೂಲಕ ಈ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಮೊದಲನೇ ಹಂತದಲ್ಲಿ ಪ್ರಾಯೋಗಿಕವಾಗಿ ತುಮಕೂರು, ಕೊಪ್ಪಳ, ಕೋಲಾರ, ಹಾಸನ ಹಾಗೂ ಹಾವೇರಿ ಜಿಲ್ಲೆಗಳನ್ನು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಆಯುಕ್ತಾಲಯದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.
ನರೇಗಾ ಯೋಜನೆಯಡಿ ಅನುಷ್ಟಾನಗೊಳ್ಳುವ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸುವ ಪ್ರತಿಯೊಬ್ಬರನ್ನು ಏಣಿಕೆ ಮೂಲಕ ಎನ್ಎನ್ಎಂಎಸ್ ಆಪ್ ನಲ್ಲಿ ಹಾಜರಾತಿ ಸಂಖ್ಯೆಯನ್ನು ಆನ್ ಲೈನ್ ನಲ್ಲಿ ತೆಗೆದುಕೊಳ್ಳಲಾಗುತ್ತಿದೆ. ಸಕ್ರಿಯ ಉದ್ಯೋಗ ಚೀಟಿ ಹೊಂದಿರುವ ಕುಟುಂಬಗಳ ಕೂಲಿಕಾರರ ಮುಖ ಚರ್ಯೆ ಗುರುತು ಪಡೆಯಲು ಇ.ಕೆ.ವೈಸಿ ಕಡ್ಡಾಯ ಗೊಳಿಸಿದ್ದು, ಕಾಮಗಾರಿ ಸ್ಥಳದಲ್ಲಿ ಹಾಜರಾತಿ ತೆಗೆದುಕೊಳ್ಳುವಾಗ ಅವರ ಆಧಾರ್ ನಂಬರ್ ಮತ್ತು ಸ್ಥಳದಲ್ಲಿ ಹಾಜರಿದ್ದವರ ಮುಖ ಹೊಂದಾಣಿಕೆಯಾಗಿದ್ದಲ್ಲಿ ಮಾತ್ರ ಅವರ ಎನ್ಎನ್ಎಂಎಸ್ ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು.