ವೈಷಮ್ಯ ರೈತನ ಬೆಳೆ ನಾಶ ಮಾಡುವ ಮಟ್ಟಕ್ಕೆ ಬೆಳೆದಿದೆ. ಎರಡು ಬಾರಿ ಅಡಕೆಸಸಿಗಳನ್ನು ಕಡಿದ ದುಷ್ಕರ್ಮಿ ಮನುಷ್ಯನ ತಲೆ ತೆಗೆಯಲೂ ಸಿದ್ದವಿರುತ್ತಾನೆ. ಇಂತಹ ಅಪರಾಧಿಯನ್ನು ಹುಡುಕಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಒತ್ತಾಯಿಸಿದರು.
ಪಟ್ಟಣದ ಗುಬ್ಬಿ ವೀರಣ್ಣ ಸರ್ಕಲ್ ಬಳಿ ಜಮಾಯಿಸಿದ ನೂರಾರು ರೈತಸಂಘದ ಕಾರ್ಯಕರ್ತರು ಮಾರಶೆಟ್ಟಿಹಳ್ಳಿ ರೈತ ಮಹೇಶ್ ಅವರ ಅಡಕೆ ಸಸಿಗಳನ್ನು ಕಡಿದ ಪ್ರಕರಣಕ್ಕೆ ನ್ಯಾಯ ಒದಗಿಸಬೇಕು. ಈ ರೀತಿಯ ಪ್ರಕರಣ ಮರುಕಳಿಸದಂತೆ ತಾಲ್ಲೂಕು ಆಡಳಿತ ಕ್ರಮ ವಹಿಸುವಂತೆ ಒತ್ತಾಯಿಸಿ ಅಡಕೆ ಸಸಿಗಳನ್ನು ಹಿಡಿದು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು ಒಂದು ವರ್ಷದಲ್ಲಿ ಎರಡು ಬಾರಿ 750 ಕ್ಕೂ ಅಧಿಕ ಸಸಿಗಳನ್ನು ಕಡಿದ ಆರೋಪಿಯನ್ನು ಬಂಧಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಮತ್ತೊಬ್ಬರ ಬೆಳೆ ನಾಶ ಮಾಡುತ್ತಾರೆ. ರೈತನ ಬಲಿ ಪಡೆಯಲು ತಯಾರಿರುತ್ತಾರೆ ಎಂದು ಕಿಡಿಕಾರಿದರು.
ರೈತ ವಿರೋಧಿ ನಡವಳಿಕೆಗಳು ಇತ್ತೀಚಿಗೆ ಹೆಚ್ಚುತ್ತಿದೆ. ರೈತರ ಬಗ್ಗೆ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ನಿಗಾವಹಿಸುತ್ತಿಲ್ಲ. ಸರ್ಕಾರ ಕೂಡ ರೈತ ವಿರೋಧಿ ನೀತಿಗಳನ್ನೇ ಅನುಷ್ಠಾನ ಮಾಡುತ್ತಿವೆ. ಎಲ್ಲವನ್ನೂ ಹೋರಾಟ ಮಾಡಿಯೇ ಕೇಳುವ ಸ್ಥಿತಿ ಬಂದಿದೆ. ಈ ನಿಟ್ಟಿನಲ್ಲಿ ಸರ್ಕಾರ ರೈತ ಪರ ಕೆಲಸವನ್ನು ಕೈಗೊಳ್ಳಬೇಕು. ರೈತರನ್ನು ಸಂರಕ್ಷಿಸುವ ಕೆಲಸವನ್ನು ಮಾಡಬೇಕು ಎಂದು ಒತ್ತಾಯಿಸಿದ ಅವರು ಜಿ.ಹೊಸಹಳ್ಳಿ ಸಮೀಪ ಟೋಲ್ ನಿರ್ಮಾಣ ಅವೈಜ್ಞಾನಿಕವಾಗಿದೆ. ಈ ರಸ್ತೆ ಬಹುತೇಕ ಸ್ಥಳೀಯರೇ ಬಳಸುತ್ತಾರೆ. ಯಾವ ಕೈಗಾರಿಕಾ ಪ್ರದೇಶ ಇಲ್ಲಿಲ್ಲ. ರೈತರ ವಾಹನಗಳೇ ಓಡಾಡುವ ರಸ್ತೆಗೆ ಸುಂಕ ಅಗತ್ಯವಿಲ್ಲ. ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ವೆಂಕಟೇಗೌಡ ಮಾತನಾಡಿ ಅಡಕೆಗಿಡಗಳು ರೈತನ ದೈವ ಸ್ವರೂಪವಾಗಿದೆ. ಕಷ್ಟಪಟ್ಟು ಬೆಳೆದ ಅಡಕೆಸಸಿಗಳನ್ನು ನಿರ್ದಾಕ್ಷಿಣ್ಯವಾಗಿ ಕಡಿದ ಮನುಷ್ಯನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಚೆನ್ನಾಗಿ ಬೆಳೆದ ಸಸಿಗಳು ಕಟುಕರಿಗೆ ಕಣ್ಣು ಕುಕ್ಕಿತ್ತು ಎನಿಸಿದೆ. ಏಕಾಏಕಿ ರಾತ್ರಿ ಸಸಿ ಮಣ್ಣು ಪಾಲು ಮಾಡಿದ್ದು ರೈತ ದ್ವೇಷಿ ಅನಿಸುತ್ತಿದೆ. ದ್ವೇಷ ಅಸೂಯೆಗೆ ಈ ರೀತಿ ಬೆಳೆ ನಾಶ ಸರಿಯಲ್ಲ. ಕೂಡಲೇ ಪ್ರಕರಣದ ಆರೋಪಿ ಬಂಧಿಸಬೇಕು ಎಂದು ಆಗ್ರಹಿಸಿದರು.
ರೈತಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್ ಮಾತನಾಡಿ ಮಾರಶೆಟ್ಟಿಹಳ್ಳಿ ರೈತ ಮಹೇಶ್ ಅವರ ಅಡಕೆಸಸಿಗಳನ್ನು ಕಡಿದ ಪ್ರಕರಣ ಎರಡು ಬಾರಿ ನಡೆದಿದೆ. ತಾಲ್ಲೂಕಿನಲ್ಲಿ ಪದೇ ಪದೇ ಇಂತಹ ಘಟನೆ ನಡೆದಿವೆ. ಒಂದೂವರೆ ವರ್ಷದಲ್ಲಿ 6 ಪ್ರಕರಣ ನಮ್ಮಲ್ಲಿ ನಡೆದಿದೆ. ಕಾನೂನು ಸುವ್ಯವಸ್ಥೆ ಹಾಳಾಗುತ್ತಿದೆ. ತಾಲ್ಲೂಕು ಆಡಳಿತ ಎಚ್ಚೆತ್ತು ರೈತರ ಬೆಳೆ ಕಾಪಾಡಬೇಕು. ಬೆಳೆ ನಾಶದಿಂದ ಮನನೊಂದ ರೈತ ಮತ್ತೊಂದು ಆತ್ಮಹತ್ಯೆ ದಾರಿ ಆಯ್ಕೆ ಮಾಡುತ್ತಾನೆ. ಮತ್ತೊಂದು ಪ್ರಕರಣ ನಡೆದರೆ ತಾಲ್ಲೂಕು ಆಡಳಿತವೇ ನೇರ ಹೊಣೆ ಹೊರಬೇಕು ಎಂದು ಒತ್ತಾಯಿಸಿದರು. ರೈತರ ಬಗ್ಗೆ ಯಾವ ಇಲಾಖೆಯು ಕುಂದು ಕೊರತೆಗಳ ಸಭೆ ನಡೆಸುತ್ತಿಲ್ಲ. ಕೂಡಲೇ ರೈತ ಪರ ನಿಲ್ಲದಿದ್ದರೆ ಆಯಾ ಕಚೇರಿ ಮುಂದೆ ಧರಣಿ ನಡೆಸುವುದು ಖಚಿತ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರೈತಸಂಘದ. ಶಿವಕುಮಾರ್, ಯತೀಶ್, ಕುಮಾರಸ್ವಾಮಿ, ಬಸವರಾಜು, ಸತ್ತಿಗಪ್ಪ, ದಲಿತ ಮುಖಂಡ ಬಸವರಾಜು, ಸಂತ್ರಸ್ತ ಮಹೇಶ್ ಇತರರು ಇದ್ದರು.