ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಹೆಸರಲ್ಲಿ ನಡೆಯುವ ಜಾತಿ ಗಣತಿಯಲ್ಲಿ ಒಕ್ಕಲಿಗರು ಒಗ್ಗಟ್ಟು ಪ್ರದರ್ಶನ ಮಾಡಬೇಕಿದೆ. ಯಾವುದೇ ಉಪಜಾತಿ, ಒಳ ಪಂಗಡ ಇದ್ದರೂ ಗಣತಿಯಲ್ಲಿ ಕ್ರಮ ಸಂಖ್ಯೆ 8 ರಲ್ಲಿ ಧರ್ಮ ಹಿಂದೂ ಎಂದು ಹಾಗೂ ಕ್ರಮ ಸಂಖ್ಯೆ 9 ರಲ್ಲಿ ಒಕ್ಕಲಿಗ ಎಂದು ನಮೂದಿಸಿ ನಂತರ ಉಳಿದ ಎಲ್ಲಾ ಪ್ರಶ್ನೆಗಳಿಗೆ ಮಾಹಿತಿ ನೀಡಲು ತಾಲ್ಲೂಕಿನ ಒಕ್ಕಲಿಗ ಒಕ್ಕೂಟದಿಂದ ಎಲ್ಲಾ ಮುಖಂಡರು ಪಕ್ಷಾತೀತ ನಿಲುವು ವ್ಯಕ್ತಪಡಿಸಿದರು.
ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಲ್ಲಾ ಒಕ್ಕಲಿಗ ಮುಖಂಡರು ನಮ್ಮ ಉಪಜಾತಿಗಳು ಕ್ರಮ ಸಂಖ್ಯೆ 10 ರಲ್ಲಿ ಬರೆಸಬಹುದು. ಆದರೆ ಒಗ್ಗಟ್ಟಿನ ಪ್ರದರ್ಶನಕ್ಕೆ ನಮ್ಮ ಮಠಾಧೀಶರು ಕರೆ ನೀಡಿ ಒಕ್ಕಲಿಗ ಎಂದೇ ನಮೂದಿಸಲು ಸೂಚಿಸಿರುವ ಹಿನ್ನಲೆ ಸಾಧ್ಯವಾದಷ್ಟು ತಾಲ್ಲೂಕಿನ ನಮ್ಮ ಜನಾಂಗದ ಎಲ್ಲಾ ಮನೆಗಳಿಗೂ ಜಾಗೃತಿ ಮೂಡಿಸಲು ಒಕ್ಕೂಟದಿಂದ ಪ್ರಕಟವಾದ ಕರ ಪತ್ರ ಹಂಚಲಾಗುತ್ತಿದೆ ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ ದಸರಾ ಹಬ್ಬದ ಈ ಸಮಯದಲ್ಲಿ ತರಾತುರಿ ಜಾತಿ ಗಣತಿ ಮಾಡುತ್ತಿರುವ ಸರ್ಕಾರ ಒಕ್ಕಲಿಗರ ಸಂಖ್ಯೆ ಕ್ಷೀಣಿಸುವ ದುರುದ್ದೇಶ ಹೊಂದಿರುವಂತೆ ಕಾಣುತ್ತಿದೆ. ಸಾಮಾಜಿಕ ಸಮೀಕ್ಷೆ ಹೆಸರಲ್ಲಿ ಜಾತಿಗಳ ಮಧ್ಯೆ ಒಡಕು ಮೂಡಿಸುವ ಈ ತಂತ್ರ ಒಳ್ಳೆಯದಲ್ಲ. ಉಪ ಜಾತಿಗಳನ್ನು ಮುಖ್ಯ ಜಾತಿಯಾಗಿ ಬಿಂಬಿಸಿ ನಮ್ಮಲ್ಲೇ ವಿಂಗಡಿಸುವ ಈ ಕುತಂತ್ರಕ್ಕೆ ಈಗಾಗಲೇ ನಮ್ಮ ಒಕ್ಕಲಿಗ ಸಮಾಜ ಹೈ ವೋಲ್ಟೇಜ್ ಸಭೆ ನಡೆಸಿ ನಮ್ಮ ಮಠಾಧೀಶರು, ಎಲ್ಲಾ ಪಕ್ಷದ ಮುಖಂಡರು ಒಕ್ಕಲಿಗ ಎಂದೇ ನಮೂದಿಸಲು ನಿರ್ಧರಿಸಿರುವ ಹಿನ್ನಲೆ ತಾಲ್ಲೂಕಿನ ಎಲ್ಲಾ ಒಕ್ಕಲಿಗ ಬಂಧುಗಳು ಉಪ ಜಾತಿ ಬಗ್ಗೆ ಹೆಚ್ಚು ಗಮನ ಕೊಡದೆ ಕ್ರಮ ಸಂಖ್ಯೆ 9 ರಲ್ಲಿ ಒಕ್ಕಲಿಗ ಎಂದು ನಮೂದಿಸಲು ಮನವಿ ಮಾಡಿದರು.
ಬಿಜೆಪಿ ಮುಖಂಡ ಎಚ್.ಟಿ.ಭೈರಪ್ಪ ಮಾತನಾಡಿ ಹಿಂದೂ ಧರ್ಮದ ಎಲ್ಲಾ ಜಾತಿಗಳಿಗೆ ಕ್ರಿಶ್ಚಿಯನ್ ಎಂದು ಸೇರಿಸಿ ಹೊಸ ಜಾತಿಗಳ ಸೃಷ್ಟಿ ಮಾಡಿದ್ದು ಕಾನೂನು ಬಾಹಿರ. ಈ ಹೆಸರುಗಳನ್ನು ಕೈ ಬಿಡುವ ಭರವಸೆ ನೀಡಿರುವ ಆಯೋಗ ಜಾತಿಗಳ ಹೆಸರು ಮುಂದುಬರೆಸಿದ್ದಲ್ಲಿ ಈ ಹಿಂದೆ ನಡೆದ ಚಿನ್ನಪ್ಪರೆಡ್ಡಿ ವರದಿ ವಿರುದ್ಧ ಹೋರಾಟದಂತೆ ಮತ್ತೊಂದು ಬೃಹತ್ ಹೋರಾಟ ನಡೆಸಲಾಗುವುದು. ಈ ಜೊತೆಗೆ ನಮ್ಮ ಒಕ್ಕಲಿಗ ಸಮಾಜ ಯಾವುದೇ ಒಳ ಜಾತಿಗೆ ಒತ್ತು ಕೊಡದೆ ಒಕ್ಕಲಿಗ ಎಂದು ನಮೂದಿಸುವುದು ಸೂಕ್ತ ಎಂಬ ಅಭಿಪ್ರಾಯ ಎಲ್ಲಡೆ ಕೇಳಿ ಬಂದಿದೆ. ಈ ನಿಟ್ಟಿನಲ್ಲಿ ತಾಲ್ಲೂಕಿನ ಒಕ್ಕಲಿಗ ಸಮುದಾಯ ಜಾತಿಗಣತಿಯಲ್ಲಿ ಧರ್ಮ ಹಿಂದೂ ಎಂದು ಜಾತಿ ಒಕ್ಕಲಿಗ ಎಂದು ನಮೂದಿಸಿ ಎಂದು ಮನವಿ ಮಾಡಿದರು.
ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ ದಸರಾ ಹಬ್ಬದ ವೇಳೆ ಕೇವಲ ಹದಿನೈದು ದಿನದಲ್ಲಿ ಜಾತಿ ಗಣತಿ ಸಾಧ್ಯವಿಲ್ಲ. 60 ಪ್ರಶ್ನೆಗಳಿಗೆ ಉತ್ತರ ನೀಡಲು ಸಾಕಷ್ಟು ಸಮಯ ಬೇಕಿದೆ. ಈ ಪೈಕಿ ಜಾತಿಗಳ ಹೆಸರು ಬರೆಸಲು ಗೊಂದಲ ಮೂಡಿಸುವ ಪ್ರಯತ್ನ ನಡೆದಿದೆ. ನಮ್ಮ ಸಮುದಾಯದ ಬಂಧುಗಳು ಯಾವುದೇ ಗೊಂದಲ ಮಾಡಿಕೊಳ್ಳದೆ ಕ್ರಮ ಸಂಖ್ಯೆ 8 ರಲ್ಲಿ ಧರ್ಮ ಹಿಂದೂ, ಕ್ರಮ ಸಂಖ್ಯೆ 9 ರಲ್ಲಿ ಜಾತಿ ಒಕ್ಕಲಿಗ ಎಂದು ನಮೂದಿಸಬೇಕಿದೆ. ಈ ಪಟ್ಟಿಯಲ್ಲಿ ಕೆಲ ಉಪಜಾತಿಗಳನ್ನೇ ಮುಖ್ಯ ಜಾತಿಗಳಾಗಿ ಕೋಡ್ ನಂಬರ್ ನೀಡಲಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸಂಖ್ಯೆ ಎ 1541 ಎಂದು ಕೋಡ್ ನಂಬರ್ ಬರೆಸಿ ಒಕ್ಕಲಿಗ ಎಂದು ಬರೆಯಿಸಿ ಎಂದ ಅವರು ಅವಶ್ಯಕತೆ ಇಲ್ಲದ ಈ ಸಮೀಕ್ಷೆಗೆ ಸರಿಯಾದ ಮಾಹಿತಿ ನೀಡಿ ನಮ್ಮ ಸಂಖ್ಯೆ ಹೆಚ್ಚಿಸಿಕೊಂಡು ಸರ್ಕಾರದ ಸವಲತ್ತು ಪಡೆದುಕೊಳ್ಳೋಣ ಎಂದು ಕರೆ ನೀಡಿದರು.
ಬಿಜೆಪಿ ಮುಖಂಡ ಬ್ಯಾಟರಂಗೇಗೌಡ ಮಾತನಾಡಿ ಇಸ್ಲಾಂ ಹಾಗೂ ಕ್ರಿಶ್ಚಿಯನ್ ಧರ್ಮದಲ್ಲಿ ಇಲ್ಲದ ಉಪಜಾತಿಗಳನ್ನು ಹಿಂದೂ ಧರ್ಮದ ಎಲ್ಲಾ ಜಾತಿಗೆ ಸೃಷ್ಟಿ ಮಾಡಿದ್ದಾರೆ. ಅದು ನಮ್ಮ ಜಾತಿಗಳ ಮುಂದೆ ಕ್ರಿಶ್ಚಿಯನ್ ಹೆಸರು ಸೇರಿಸಿದ್ದು ಕಾನೂನು ನಿಯಮಕ್ಕೆ ವಿರೋಧ. ಒಕ್ಕಲಿಗರಲ್ಲಿ ಗೊಂದಲ ಮೂಡಿಸುವ ಗಣತಿ ಇದಾಗಬಾರದು ಎಂಬ ಉದ್ದೇಶದಿಂದ ಆದಿ ಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಅಭಿಯಾನ ಆರಂಭಿಸಿ ಧರ್ಮ ಹಿಂದೂ, ಜಾತಿ ಒಕ್ಕಲಿಗ ಎಂದು ನಮೂದಿಸಲು ಕರೆ ನೀಡಿದ್ದಾರೆ. ಅವರ ಆದೇಶದಂತೆ ತಾಲ್ಲೂಕಿನ ಎಲ್ಲಾ ಒಕ್ಕಲಿಗ ಬಂಧುಗಳು ತಮ್ಮ ಮನೆಗೆ ಬರುವ ಗಣತಿದಾರರಿಗೆ ಮಾಹಿತಿ ನೀಡುವಾಗ ಹಿಂದೂ ಧರ್ಮ, ಒಕ್ಕಲಿಗ ಜಾತಿ ಬರೆಸಿ, ಉಪಜಾತಿಗಳು ಹೆಸರು ಅವರವರ ಇಚ್ಛೆಗೆ ಬಿಟ್ಟಿದ್ದು, ಉಪಜಾತಿ ಕಾಲಂನಲ್ಲೂ ಸಹ ಒಕ್ಕಲಿಗ ಎಂದೇ ಬರೆಸುವುದು ಸೂಕ್ತ ಎಂಬ ಒಕ್ಕೂಟದ ಮನವಿಯಾಗಿದೆ. ಈ ನಿಟ್ಟಿನಲ್ಲಿ ತಾಲ್ಲೂಕಿನ ಒಕ್ಕಲಿಗ ಸಮುದಾಯ ಒಕ್ಕಲಿಗ ಅಷ್ಟನ್ನೇ ನಮೂದಿಸಿ ಒಗ್ಗಟ್ಟು ಪ್ರದರ್ಶನ ಮಾಡುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಒಕ್ಕಲಿಗರ ಸಂಘ ಮಾಜಿ ಜಿಲ್ಲಾಧ್ಯಕ್ಷ ಕರಿಯಪ್ಪ, ಮುಖಂಡರಾದ ತೊರೆಹಳ್ಳಿ ರಂಗನಾಥ್, ನಾಗರಾಜ್, ಸಿಂಗೋನಹಳ್ಳಿ ಸೋಮಣ್ಣ, ಕಳ್ಳಿಪಾಳ್ಯ ನಾಗರಾಜ್, ಕೊಂಡ್ಲಿ ಲೋಕೇಶ್, ಡಿ.ರಘು, ಜಿ.ಆರ್.ರಮೇಶ್ ಗೌಡ ಇತರರು ಇದ್ದರು.