ಹಿಂದುಳಿದ ವರ್ಗಗಳ ಆಯೋಗದ ಮೂಲಕ ಎಲ್ಲಾ ಜಾತಿಗಳ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ಇದೇ ತಿಂಗಳ 22 ರಿಂದ ಜಾತಿ ಗಣತಿ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ನಮ್ಮ ಜನಾಂಗದ ಜನಸಂಖ್ಯೆ ನಿಖರ ಮಾಹಿತಿ ನೀಡುವ ನಿಟ್ಟಿನಲ್ಲಿ ಗಣತಿದಾರರಿಗೆ ಮಾಹಿತಿ ನೀಡುವಾಗ ಧರ್ಮ ಹಿಂದೂ, ಜಾತಿ ತಿಗಳ ಹಾಗೂ ಉಪಜಾತಿ ಅಗ್ನಿವಂಶ ಕ್ಷತ್ರಿಯ ಎಂದು ನಮೂದಿಸಲು ತಾಲ್ಲೂಕಿನ ತಿಗಳ ಮುಖಂಡರು ಮನವಿ ಮಾಡಿದರು.
ಗುಬ್ಬಿ ಪಟ್ಟಣದ ಎವಿಕೆ ಸಮುದಾಯ ಭವನ ಆವರಣದಲ್ಲಿನ ಶ್ರೀ ಅಗ್ನಿವಂಶ ಕ್ಷತ್ರಿಯ (ತಿಗಳ) ವಿದ್ಯಾಭಿವೃದ್ದಿ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಾಲ್ಲೂಕಿನ ಅಗ್ನಿವಂಶ ಕ್ಷತ್ರಿಯ ಸಮಾಜದ ಎಲ್ಲಾ ಭಾಂದವರು ಗಣತಿದಾರರ ಬಳಿ ಇರುವ 60 ಅಂಶಗಳ ಕ್ರಮ ಸಂಖ್ಯೆ 8 ರಲ್ಲಿ ಧರ್ಮ ಹಿಂದೂ, ಕ್ರಮ ಸಂಖ್ಯೆ 9 ರಲ್ಲಿ ಜಾತಿ ತಿಗಳ, ಕ್ರಮ ಸಂಖ್ಯೆ 10 ರಲ್ಲಿ ಉಪಜಾತಿ ಅಗ್ನಿವಂಶ ಕ್ಷತ್ರಿಯ ಎಂದೇ ಬರೆಸಲು ಮನವಿ ಮಾಡಿದರು.
ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಯೋಗಾನಂದಕುಮಾರ್ ಮಾತನಾಡಿ ಅಖಿಲ ಕರ್ನಾಟಕ ತಿಗಳರ ಕ್ಷೇಮಾಭಿವೃದ್ಧಿ ಸಂಘ ಮತ್ತು ಕರ್ನಾಟಕ ತಿಗಳರ (ಅಗ್ನಿವಂಶ ಕ್ಷತ್ರಿಯ) ಸಾರ್ವಜನಿಕ ವಿದ್ಯಾಭಿವೃದ್ಧಿ ಸಂಘ ಇಡೀ ರಾಜ್ಯದ ತಿಗಳ ಸಮುದಾಯದ ನಮ್ಮ ಜನರಿಗೆ ಮನವಿ ಮಾಡಿ ಯಾವುದೇ ಗೊಂದಲ ಸೃಷ್ಟಿ ಮಾಡದೆ ಒಂದೇ ಮಾದರಿಯಲ್ಲಿ ಧರ್ಮ ಹಿಂದೂ ಎಂದು ಬರೆಸಿ, ಜಾತಿ ತಿಗಳ ಹಾಗೂ ಉಪಜಾತಿ ಅಗ್ನಿವಂಶ ಕ್ಷತ್ರಿಯ, ಮಾತೃಭಾಷೆ ಕನ್ನಡ ನಮೂದಿಸಿ ಎಂದು ಮನವಿ ಮಾಡಿದ ಅವರು ಸರ್ಕಾರ 321 ಹೊಸ ಜಾತಿಗಳ ಹೆಸರು ಸೇರ್ಪಡೆ ಮಾಡಿರುವುದು ಸರಿಯಲ್ಲ. ಆಯೋಗದಲ್ಲಿ ಒಂದು ಜಾತಿಯ ಪದ ಸೇರಿಸಲು ಸಾಕಷ್ಟು ಕಾನೂನು ಪ್ರಕ್ರಿಯೆ ನಡೆಸಬೇಕಿದೆ. ಏಕಾಏಕಿ ಹೊಸ ಜಾತಿಗಳ ಪಟ್ಟಿ ಕಾನೂನು ಬಾಹಿರ ಎಂದು ತಿಳಿಸಿದರು.
ಶ್ರೀ ಅಗ್ನಿವಂಶ ಕ್ಷತ್ರಿಯ (ತಿಗಳ) ವಿದ್ಯಾಭಿವೃದ್ಧಿ ಸಂಘ ಅಧ್ಯಕ್ಷ ಬಲರಾಮಯ್ಯ ಮಾತನಾಡಿ ರಾಜ್ಯದಲ್ಲಿ ಅಂದಾಜು 10 ಲಕ್ಷ ಸಂಖ್ಯೆಯ ಅಗ್ನಿವಂಶ ಕ್ಷತ್ರಿಯ ಸಮುದಾಯದ ಭಾಂದವರು ಜಾತಿ ಗಣತಿ ಸಮಯದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಬೇಕಿದೆ. ರಾಜ್ಯ ಹಾಗೂ ಜಿಲ್ಲಾ ಸಮಿತಿಯ ಆದೇಶದಂತೆ ಧರ್ಮ ಹಿಂದೂ, ಜಾತಿ ತಿಗಳ ಹಾಗೂ ಉಪಜಾತಿ ಅಗ್ನಿವಂಶ ಕ್ಷತ್ರಿಯ ಎಂದು ನಮೂದಿಸಿ ಮಾತೃಭಾಷೆ ಕನ್ನಡ ಎಂದು ಬರೆಸಿ ಕ್ರಮ ಸಂಖ್ಯೆ 30 ರಲ್ಲಿ ಕುಲ ಕಸುಬು ಕೃಷಿ ಸಾಗುವಳಿ ಎಂದು ನಮೂದಿಸಿ, ಜಾತಿಯ ನಮ್ಮ ಸಂಖ್ಯೆ ಮೂಲಕ ಸರ್ಕಾರದ ಸವಲತ್ತು ಪಡೆದುಕೊಳ್ಳೋಣ ಎಂದು ಕರೆ ನೀಡಿದರು.
ತಾಲ್ಲೂಕು ಅಗ್ನಿವಂಶ ಕ್ಷತ್ರಿಯ(ತಿಗಳ) ವಿದ್ಯಾಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷ ರಾಮಯ್ಯ ಮಾತನಾಡಿ ತಿಗಳ ಜನಾಂಗದ ಒಗ್ಗಟ್ಟು ಪ್ರದರ್ಶನಕ್ಕೆ ಈ ಜಾತಿಗಣತಿ ಕೂಡಾ ಒಂದು ಮಾರ್ಗವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸಮಿತಿ ಸೂಚಿಸಿದಂತೆ ಜಿಲ್ಲೆ ಹಾಗೂ ತಾಲ್ಲೂಕು ಘಟಕಗಳು ಪ್ರತಿ ಗ್ರಾಮಕ್ಕೂ ತೆರಳಿ ಜಾತಿ ಗಣತಿಯಲ್ಲಿ ಹಿಂದೂ ಧರ್ಮ, ತಿಗಳ ಜಾತಿ ಹಾಗೂ ಅಗ್ನಿವಂಶ ಕ್ಷತ್ರಿಯ ಉಪಜಾತಿ ಬರೆಸಲು ಮನವಿ ಮಾಡಲಾಗುತ್ತಿದೆ. ಈ ಕಾರ್ಯಕ್ಕೆ ಕುಲದ ಯಜಮಾನರು, ಮುದ್ರೆಯವರು, ಅಣೆಕಾರ್ ಮುಖಂಡರು ಹಾಗೂ ಜನಪ್ರತಿನಿಧಿಗಳು ಸಹಕಾರ ನೀಡಬೇಕಿದೆ. ತಾಲ್ಲೂಕು ಸಮಿತಿ ಕೂಡಾ ಎಲ್ಲಾ ಸದಸ್ಯರಿಗೆ ಮಾಹಿತಿ ರವಾನಿಸಿ ಕರಪತ್ರ ಹಂಚುವ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಅಗ್ನಿವಂಶ ಕ್ಷತ್ರಿಯ (ತಿಗಳ) ವಿದ್ಯಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಎಸ್.ನಂಜೇಗೌಡ, ಉಪಾಧ್ಯಕ್ಷ ಎನ್.ಸಿ.ಶಿವಣ್ಣ, ಕಾರ್ಯದರ್ಶಿ ಜಿ.ಬಿ.ಮಲ್ಲಪ್ಪ, ಖಜಾಂಚಿ ಪಿ .ಟಿ.ಸಣ್ಣರಂಗಯ್ಯ, ಜಂಟಿ ಕಾರ್ಯದರ್ಶಿ ಜಿ.ಬಿ.ನಾಗರಾಜು, ನಿರ್ದೇಶಕರಾದ ಕುಂಬಿ ನರಸಯ್ಯ, ಬಿ.ಆರ್.ನಾಗರಾಜು, ಸಣ್ಣಹನುಮಂತಯ್ಯ, ಚಿಕ್ಕನರಸೇಗೌಡ, ಲಕ್ಕಣ್ಣ, ಸಿ.ಯು.ರಾಜಣ್ಣ, ಗಂಗಣ್ಣ, ವರಲಕ್ಷ್ಮಿ, ರೇಣುಕಮ್ಮ ಇತರರು ಇದ್ದರು.