ಗುಬ್ಬಿ ತಾಲೂಕಿನ ಎಲ್ಲಾ 34 ಗ್ರಾಮ ಪಂಚಾಯಿತಿಗಳಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಅ:02 ರವರೆಗೆ ನಡೆದಿರುವ ಸ್ವಚ್ಛತೆಯ ಸೇವೆ -2025 ಅಭಿಯಾನದ ಅಂಗವಾಗಿ ಗ್ರಾಮ ಪಂಚಾಯಿತಿಗಳ ಮುಖ್ಯ ಗ್ರಾಮಗಳಲ್ಲಿ ಸಾರ್ವಜನಿಕ ಸ್ಥಳ, ಬ್ಲಾಕ್ ಸ್ಪಾಟ್ ಗಳು, ಕೆರೆಕಟ್ಟೆ, ಕಲ್ಯಾಣಿ, ನೀರಿನ ಟ್ಯಾಂಕ್ ಹಾಗೂ ದನಗಳು ಕುಡಿಯುವ ನೀರಿನ ತೊಟ್ಟಿಗಳ ಸಹಿತ ಎಲ್ಲವನ್ನೂ ಸ್ವಚ್ಚಗೊಳಿಸುವ ದಿಟ್ಟ ಹೆಜ್ಜೆ ಇಟ್ಟ ಪಂಚಾಯಿತಿ ಕೆಲಸಕ್ಕೆ ಶಾಲಾ ಕಾಲೇಜಿನ ಎನ್ಎನ್ಎಸ್ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಸಾಥ್ ನೀಡಲಿದೆ ಎಂದು ತಾಪಂ ಇಒ ಎಸ್.ಶಿವಪ್ರಕಾಶ್ ತಿಳಿಸಿದರು.
ಗುಬ್ಬಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಮುಖ್ಯರಸ್ತೆ ಬದಿ ಕಸ ತೆಗೆಯುವುದು, ಶಾಲೆ ಹಾಗೂ ಸಾರ್ವಜನಿಕ ಆಸ್ಪತ್ರೆ ಆವರಣ ಮತ್ತು ಅಂಗನವಾಡಿ ಕೇಂದ್ರ, ದೇವಸ್ಥಾನ ಆವರಣ ಕ್ಲೀನ್ ಮಾಡಲು ಸಮುದಾಯ ಸಹಾಯ ಪಡೆಯಲಾಗಿದೆ ಎಂದರು.
ಸ್ವಚ್ಛತೆ ಅರಿವು ಮೂಡಿಸುವ ಜೊತೆಗೆ ಸ್ವಚ್ಚ ಕಾರ್ಯಕ್ಕೆ ಸಾರ್ವಜನಿಕರನ್ನು ಸಹಯೋಗ ಪಡೆದಲ್ಲಿ ಜವಾಬ್ದಾರಿ ಹೆಚ್ಚಿಸಿಕೊಳ್ಳುವ ಜನರು ನಮ್ಮ ಊರಿನ ಸ್ವಚ್ಛತೆ ಬಗ್ಗೆ ವಿಶೇಷ ಕಾಳಜಿ ತೋರುತ್ತಾರೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಅಕ್ಕಪಕ್ಕ, ಸರ್ಕಾರಿ ಕಚೇರಿ, ಗ್ರಾಮ ಪಂಚಾಯತಿ ಪಂಪ್ ಹೌಸ್, ಐತಿಹಾಸಿಕ ಸ್ಥಳಗಳು, ಪುರಾತನ ಸ್ಥಳಗಳು, ಸಂತೆ ಮೈದಾನ ಹೀಗೆ ಅನೇಕ ಸ್ಥಳಗಳ ಸ್ವಚ್ಛತೆಗೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಎನ್ಎಸ್ಎಸ್ ವಿದ್ಯಾರ್ಥಿಗಳ ಭಾಗವಹಿಸುವಿಕೆ ಇರುತ್ತದೆ ಎಂದರು.
ಸ್ವಸಹಾಯ ಸಂಘಗಳ ಮಹಿಳೆಯರು, ವಿದ್ಯಾರ್ಥಿಗಳು, ಆಸಕ್ತ ಸಾಮಾಜಿಕ ಕಳಕಳಿಯ ಯುವಕರನ್ನು ಬಳಸಿ ಅಂಗಡಿ, ಹೋಟೆಲ್, ಬೇಕರಿ ಇನ್ನು ಮುಂತಾದ ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯಾ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಇಂತಹ ಸೇವಾ ಕಾರ್ಯದಲ್ಲಿ ಜನರು ಭಾಗವಹಿಸಿ ಇಡೀ ತಾಲ್ಲೂಕಿನ ಆರೋಗ್ಯ ಕಾಪಾಡೋಣ ಎಂದು ಕರೆ ನೀಡಿದರು.