ಶ್ರೀ ಅಗ್ನಿವಂಶ ಕ್ಷತ್ರಿಯ(ತಿಗಳ) ವಿದ್ಯಾಭಿವೃದ್ಧಿ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ತಮ್ಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪುರಸ್ಕರಿಸಲಾಯಿತು.
ಗುಬ್ಬಿ ಪಟ್ಟಣದ ಎವಿಕೆ ಸಮುದಾಯಭವನದಲ್ಲಿ ಭಾನುವಾರ ಆಯೋಜಿಸಿದ್ದ ಸರ್ವ ಸದಸ್ಯರ ಸಭೆಯಲ್ಲಿ ಪ್ರಸಕ್ತ ಸಾಲಿನ ಎಸ್ಸಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 75 ಕ್ಕಿಂತ ಹೆಚ್ಚು ಅಂಕ ಗಳಿಸಿದ ಅಗ್ನಿವಂಶ ಕ್ಷತ್ರಿಯ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಶ್ರೀ ಅಗ್ನಿವಂಶ ಕ್ಷತ್ರಿಯ(ತಿಗಳ) ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಬಲರಾಮಯ್ಯ ಮಾತನಾಡಿ ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡುವ ನಿಟ್ಟಿನಲ್ಲಿ ಸಂಘ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹ ನೀಡಲಾಗುತ್ತಿದೆ. ಕೃಷಿ ತೋಟಗಾರಿಕೆ ನಂಬಿ ಬದುಕು ಕಟ್ಟಿಕೊಂಡ ನಮ್ಮ ತಿಗಳ ಸಮಾಜ ಕೆಲ ಪ್ರದೇಶದಲ್ಲಿ ಮಾತ್ರ ಕಾಣಸಿಗುತ್ತಾರೆ. ರಾಜ್ಯದಲ್ಲಿ ನಮ್ಮ ಇರುವಿಕೆಯನ್ನು ತೋರಿಸುವ ಕೆಲಸ ಆಗಬೇಕಿದೆ. ನಮ್ಮದೇ ಆಚಾರ ವಿಚಾರ ಜೊತೆಗೆ ಗ್ರಾಮೀಣ ಭಾಗದಲ್ಲಿ ಶಿಕ್ಷಣಕ್ಕೆ ಒತ್ತು ನೀಡಿ ಮುಂದಿನ ಪೀಳಿಗೆಯನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡೋಣ ಎಂದು ಕರೆ ನೀಡಿದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಯೋಗಾನಂದಕುಮಾರ್ ಮಾತನಾಡಿ ಹಿಂದುಳಿದ ವರ್ಗಗಳ ಪೈಕಿ ಅತೀ ಹೆಚ್ಚು ಹಿಂದುಳಿದ ತಿಗಳ ಜನಾಂಗ ಕೇವಲ ಕೃಷಿ ನಂಬಿ ಜೀವನ ನಡೆಸಿಕೊಂಡು ಬಂದಿದೆ. ಆದರೆ ಬದಲಾದ ಸನ್ನಿವೇಶದಿಂದ ಶಿಕ್ಷಣಕ್ಕೆ ಒತ್ತು ನೀಡುವ ಬಗ್ಗೆ ಗಂಭೀರ ನಿಲುವು ನಮ್ಮ ಸಮಾಜ ಕೈಗೊಂಡ ಹಿನ್ನಲೆ ಮಕ್ಕಳು ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಮಹತ್ವ ತಿಳಿದು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಅವರ ಬೆನ್ನು ತಟ್ಟಿ ಪ್ರೋತ್ಸಾಹ ನೀಡುವ ಅಳಿಲು ಸೇವೆ ಸಂಘ ಮಾಡುತ್ತಿದೆ ಎಂದರು.
ಪೊಲೀಸ್ ಉಪ ನಿರೀಕ್ಷಕ ಬಸವರಾಜು ಮಾತನಾಡಿ ಕನಿಷ್ಠ ವಿದ್ಯಾರ್ಹತೆ ಪಡೆಯುವುದು ಕಷ್ಟದ ಕಾಲದಲ್ಲಿ ನಮ್ಮ ಸಮಾಜ ಕೃಷಿ ಕೂಲಿ ಕಾರ್ಮಿಕರಾಗಿ ಜೀವನ ನಡೆಸಿದ್ದರು. ಎಸ್ಎಸ್ಎಲ್ಸಿ ಪಾಸಾದರೆ ಅದೇ ದೊಡ್ಡ ಸಾಧನೆಯಂತೆ ನೋಡುವ ಕಾಲ ಈ ಹಿಂದೆ ಇತ್ತು. ಆದರೆ ಈಗ ಆಧುನಿಕತೆಗೆ ತಕ್ಕಂತೆ ನಮ್ಮ ಮಕ್ಕಳು ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಪಾಲ್ಗೊಂಡು ಸಮಾಜದಲ್ಲಿ ಮುಂದೆ ಬರುತ್ತಿದ್ದಾರೆ. ಶಿಕ್ಷಣ ಮುಂದುವರೆಸಿ ಉನ್ನತ ವ್ಯಾಸಂಗಕ್ಕೆ ಒತ್ತು ನೀಡಬೇಕು. ಜೊತೆಗೆ ಸಂಸ್ಕಾರ ಕಲಿತು ಶ್ರಮಪಟ್ಟು ತಂದೆ ತಾಯಿ, ಗುರು ಹಿರಿಯರ ಬಗ್ಗೆ ಗೌರವದಿಂದ ನಡೆದುಕೊಳ್ಳಿ ಎಂದು ಕರೆ ನೀಡಿದರು.
ಸಂಘದ ಹಿರಿಯ ಸದಸ್ಯರಾದ ಜಿ.ಗೋವಿಂದಯ್ಯ ಸಂಘ ನಡೆದುಬಂದ ಬಗ್ಗೆ ವಿವರಿಸಿದರು.
ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ಎಸ್.ನಂಜೇಗೌಡ, ಉಪಾಧ್ಯಕ್ಷ ಎನ್.ಸಿ.ಶಿವಣ್ಣ, ಕಾರ್ಯದರ್ಶಿ ಜಿ.ಬಿ.ಮಲ್ಲಪ್ಪ, ಖಜಾಂಚಿ ಪಿ.ಟಿ.ಸಣ್ಣರಂಗಯ್ಯ, ಜಂಟಿ ಕಾರ್ಯದರ್ಶಿ ಜಿ.ಬಿ.ನಾಗರಾಜು, ನಿರ್ದೇಶಕರಾದ ರಾಮಯ್ಯ, ಜಿ.ಸಿ.ಲೋಕೇಶ್ ಬಾಬು, ಜಿ.ಸಿ.ಚಂದ್ರಶೇಖರ್, ಯಜಮಾನ್ ಸಣ್ಣಹನುಮಂತಯ್ಯ, ಕುಂಬಿನರಸಯ್ಯ, ಬಿ.ಆರ್.ನಾಗರಾಜ್, ಚಿಕ್ಕನರಸೇಗೌಡ, ಲಕ್ಕೇನಹಳ್ಳಿ ಕೃಷ್ಣಮೂರ್ತಿ, ರಾಮಚಂದ್ರಯ್ಯ, ಲಕ್ಕಣ್ಣ, ಸಿ.ಯು.ರಾಜಣ್ಣ, ಡಿ.ಗಂಗಣ್ಣ, ರೇಣುಕಮ್ಮ, ವರಲಕ್ಷ್ಮಿ ಇತರರು ಇದ್ದರು.