ಗುಬ್ಬಿ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆ ಚುನಾವಣೆಯಲ್ಲಿ ಒಟ್ಟು 13 ಸ್ಥಾನದ ಪೈಕಿ 8 ನಿರ್ದೇಶಕರ ಅವಿರೋಧ ಆಯ್ಕೆಯಾಗಿ ಉಳಿದ 5 ಸ್ಥಾನಕ್ಕೆ ನಡೆದ ಮತದಾನ ಪ್ರಕ್ರಿಯೆಯಲ್ಲಿ ಕೆಎನ್ಆರ್ ಬಣದ ಐದು ಮಂದಿ ಸಿಂಡಿಕೇಟ್ ಅತ್ಯಧಿಕ ಬಹುಮತದಿಂದ ಗೆಲುವು ಸಾಧಿಸಿದೆ.
ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ಸಹಕಾರ ಇಲಾಖೆಯ ಕೆ.ಎಚ್.ಮಹಂತೇಶಯ್ಯ ನಡೆಸಿಕೊಟ್ಟರು. ಟಿಎಪಿಎಂಎಸ್ ಕಟ್ಟಡದಲ್ಲಿ ನಡೆದ ಮತದಾನ ಪ್ರಕ್ರಿಯೆ ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ ಮತದಾನ ಪ್ರಕ್ರಿಯೆ ನಡೆಸಿ ನಂತರ ಮತ ಎಣಿಕೆ ಕಾರ್ಯ ನಡೆಸಲಾಯಿತು. ಬಿ ವರ್ಗದ ಕೃಷಿಕ ಸದಸ್ಯರ ಕ್ಷೇತ್ರದಿಂದ 5 ಮಂದಿ ಆಯ್ಕೆಯಲ್ಲಿ 2 ಸ್ಥಾನ ಸಾಮಾನ್ಯ ವರ್ಗ, 2 ಸ್ಥಾನ ಮಹಿಳೆ ಮೀಸಲು, 1 ಹಿಂದುಳಿದ ವರ್ಗ ಬಿ ಈ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಒಟ್ಟು 1028 ಮತಗಳ ಪೈಕಿ ಶೇಕಡಾ 92 ರಷ್ಟು ಮತದಾನ ನಡೆದು ಒಟ್ಟು 943 ಮತಗಳು ಚಲಾವಣೆಗೊಂಡವು. ಈ ಪೈಕಿ 16 ಮತಗಳು ಅಸಿಂಧುಗೊಂಡವು.
ಮತ ಎಣಿಕೆ ಕಾರ್ಯ ಮುಗಿದ ಬಳಿಕ ಬಂದ ಫಲಿತಾಂಶದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾರನಹಳ್ಳಿ ಪ್ರಭಣ್ಣ ಅವರ ನೇತೃತ್ವದ ಕೆಎನ್ಆರ್ ಬಣ ಐದಕ್ಕೆ ಐದೂ ಸ್ಥಾನ ಗಳಿಸಿತು. ಸಾಮಾನ್ಯ ಮೀಸಲಿನ ಎನ್.ಸಿ.ಗಿರೀಶ್ 641, ಬಿ.ಎಸ್.ಪಂಚಾಕ್ಷರಿ 638, ಸಾಮಾನ್ಯ ಮಹಿಳಾ ಮೀಸಲಿನ ಎಸ್.ವಸಂತ 602, ಕೆ.ಎನ್.ಸವಿತಾ 633 ಹಾಗೂ ಹಿಂದುಳಿದ ವರ್ಗ ಬಿ ಮೀಸಲಿನ ವೈ.ಜಿ.ತ್ರಿನೇಶ್ 612 ಮತಗಳನ್ನು ಪಡೆದು ಅತ್ಯಧಿಕ ಬಹುಮತದಿಂದ ಭರ್ಜರಿ ಗೆಲುವು ಸಾಧಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾರನಹಳ್ಳಿ ಪ್ರಭಣ್ಣ ಮಾತನಾಡಿ ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಬೆರೆಯಬಾರದಿತ್ತು. ಸಾರ್ವತ್ರಿಕ ಚುನಾವಣೆ ರೀತಿ ಇಂದು ನಡೆದಿದೆ. ಪಕ್ಷಾತೀತ ನಿಲುವು ಸಹಕಾರ ಕ್ಷೇತ್ರದಲ್ಲಿ ಮೊದಲಿನಿಂದಲೂ ಕಂಡಿದೆ. ಆದರೆ ಈ ಬಾರಿ ದೊಡ್ಡ ರಾಜಕಾರಣಿಗಳ ಎಂಟ್ರಿ ಮಾಡಬಾರದಿತ್ತು. ಮತದಾರರ ಮನಸ್ಸು ಗೆದ್ದ ನಮ್ಮ ಮೈತ್ರಿ ಅಭ್ಯರ್ಥಿಗಳ ತಂಡ ಐದೂ ಸ್ಥಾನ ಪಡೆದುಕೊಂಡಿದೆ. ಈ ಗೆಲುವಿಗೆ ನಮ್ಮ ಕೆ.ಎನ್.ರಾಜಣ್ಣ ಹಾಗೂ ಆರ್.ರಾಜೇಂದ್ರ ಅವರ ಮಾರ್ಗದರ್ಶನದಲ್ಲಿ ನಡೆದಿದೆ ಎಂದರು.
ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಜಿ.ಡಿ.ಸುರೇಶಗೌಡ ಮಾತನಾಡಿ ಹಾರನಹಳ್ಳಿ ಪ್ರಭಣ್ಣ ಅವರ ನೇತೃತ್ವದಲ್ಲಿ ನಮ್ಮ ಸಿಂಡಿಕೇಟ್ ಮತದಾರರಿಗೆ ಹತ್ತಿರವಾಗಿದೆ. ಬಹುಮತದಿಂದ ಗೆಲ್ಲಿಸಿದ ಮತದಾರರಿಗೆ ನಮ್ಮ ಧನ್ಯವಾದಗಳು. ಸಂಘವನ್ನು ಅಭಿವೃದ್ದಿ ಪಡಿಸುವ ಜೊತೆಗೆ ಈ ಗೆಲುವನ್ನು ಕೆ.ಎನ್.ರಾಜಣ್ಣ ಅವರಿಗೆ ಅರ್ಪಿಸುತ್ತೇವೆ ಎಂದರು.
ಟಿಎಪಿಸಿಎಂಎಸ್ ನೂತನ ನಿರ್ದೇಶಕ ಬಿ.ಎಸ್.ಪಂಚಾಕ್ಷರಿ ಮಾತನಾಡಿ ಪ್ರಭಣ್ಣ ಅವರ ಮಾರ್ಗದರ್ಶನದಲ್ಲಿ ನಮ್ಮ ತಂಡ ಐದೂ ಮಂದಿ 600 ಕ್ಕೂ ಅಧಿಕ ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದ್ದಾರೆ. ಗೆಲುವಿಗೆ ಕಾರಣರಾದ ಮತದಾರರಿಗೆ ಧನ್ಯವಾದಗಳು ಅರ್ಪಿಸುತ್ತೇವೆ ಎಂದರು.
ಟಿಎಪಿಸಿಎಂಎಸ್ ನೂತನ ನಿರ್ದೇಶಕ ಎನ್.ಸಿ.ಗಿರೀಶ್ ಮಾತನಾಡಿ 13 ಸ್ಥಾನದಲ್ಲಿ 8 ಸ್ಥಾನ ಅವಿರೋಧ ಆಯ್ಕೆಯಾಗಿತ್ತು. ಉಳಿದ 5 ಸ್ಥಾನಕ್ಕೆ ಅನಿವಾರ್ಯ ಮತದಾನ ಪ್ರಕ್ರಿಯೆ ಎದುರಾಯಿತು. ಪ್ರಭಣ್ಣ ಅವರ ನೇತೃತ್ವದಲ್ಲಿ ನಮ್ಮ ಐದು ಜನರ ಸಿಂಡಿಕೇಟ್ ಮತದಾರರ ಮನಸ್ಸು ಗೆದ್ದಿದೆ. ಟಿಎಪಿಸಿಎಂಎಸ್ ಅಭಿವೃದ್ಧಿಗೆ ಎಲ್ಲಾ ಸದಸ್ಯರ ಜೊತೆ ಶ್ರಮಿಸುತ್ತೇವೆ ಎಂದರು.