ಗುಬ್ಬಿ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆ ಚುನಾವಣೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆದು ಸೋಮವಾರ ಹಿಪಡೆಯವ ಪ್ರಕ್ರಿಯೆಯಲ್ಲಿ ಹಲವು ಅಭ್ಯರ್ಥಿಗಳು ಉಮೇದುವಾರಿಕೆ ವಾಪಸ್ ಪಡೆದ ಹಿನ್ನಲೆ ಒಟ್ಟು 13 ಸ್ಥಾನದ ಪೈಕಿ 8 ನಿರ್ದೇಶಕರ ಅವಿರೋಧ ಆಯ್ಕೆ ಘೋಷಣೆಯಾಗಿ ಉಳಿದ 5 ಸ್ಥಾನಕ್ಕೆ 10 ಮಂದಿ ಕಣದಲ್ಲಿದ್ದು, ಮತದಾನ ಇದೇ ತಿಂಗಳ 28 ರಂದು ನಡೆಯಲಿದೆ.
ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ಸಹಕಾರ ಇಲಾಖೆಯ ಕೆ.ಎಚ್.ಮಹಂತೇಶಯ್ಯ ನಡೆಸುತ್ತಿದ್ದಾರೆ. ಟಿಎಪಿಎಂಎಸ್ ನಿರ್ದೇಶಕರ ಆಯ್ಕೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರವನ್ನು ಎ ತರಗತಿ 5 ಸ್ಥಾನಗಳು, ಕೃಷಿಕ ಸದಸ್ಯರ ಕ್ಷೇತ್ರವನ್ನು ಬಿ ತರಗತಿ 8 ಸ್ಥಾನಗಳು ಎಂದು ವಿಂಗಡಿಸಲಾಗಿದೆ. ಬಿ ತರಗತಿ ಸದಸ್ಯರ ಆಯ್ಕೆಗೆ ಮೀಸಲು ನಿಗದಿ ಮಾಡಲಾಗಿದೆ. 2 ಸ್ಥಾನ ಸಾಮಾನ್ಯ ವರ್ಗ, 2 ಸ್ಥಾನ ಮಹಿಳೆ ಮೀಸಲು, 1 ಎಸ್ಸಿ, 1 ಎಸ್ಟಿ, 1 ಹಿಂದುಳಿದ ವರ್ಗ ಎ, 1 ಹಿಂದುಳಿದ ವರ್ಗ ಬಿ, ಈ ಸ್ಥಾನಕ್ಕೆ ಚುನಾವಣೆ ನಾಮಪತ್ರ ಪ್ರಕ್ರಿಯೆ ಮುಗಿದು ಹಿಂಪಡೆಯುವ ಅವಕಾಶ ಸಹ ಮುಗಿದಿದೆ.
ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಮುಗಿದ ನಂತರ ಏಕೈಕ ನಾಮಪತ್ರ ಅಧಿಕೃತವಾದ ಹಿನ್ನಲೆ ಎ ತರಗತಿಯ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದ 5 ಸ್ಥಾನಗಳು ಅವಿರೋಧ ಆಯ್ಕೆಯಾದರು. ಹಾಗಲವಾಡಿ ಎಚ್.ಎಸ್.ಜಯಪ್ರಕಾಶ್, ನಲ್ಲೂರು ಎನ್.ಜಿ.ನಟರಾಜು, ಎಸ್.ಕೊಡಗೀಹಳ್ಳಿ ಪಾಳ್ಯ ಕೆ.ಆರ್.ಬಸವರಾಜು, ಇಡಗೂರು ಜಿ.ಯತೀಶ್(ರವಿ), ಚೇಳೂರು ಸಿ.ಎಂ.ಹಿತೇಶ್ ಇವರು ಆಯ್ಕೆಯಾದವರು. ಬಿ ತರಗತಿಯ ಕೃಷಿಕ ಸದಸ್ಯರ ಕ್ಷೇತ್ರದಿಂದ ಹಿಂದುಳಿದ ವರ್ಗ ಎ ಮೀಸಲಿನ ಸಿಂಗೋನಹಳ್ಳಿ ರಾಮಚಂದ್ರ, ಪರಿಶಿಷ್ಟ ಜಾತಿ ಮೀಸಲಿನ ಲಕ್ಷ್ಮಿನಾರಾಯಣ(ಶಿವಪ್ಪ), ಪರಿಶಿಷ್ಟ ಪಂಗಡ ಮೀಸಲಿನ ಅಳಿಲುಘಟ್ಟ ಎ.ಎನ್.ಜಗದೀಶಯ್ಯ ಇವರು ಅವಿರೋಧ ಆಯ್ಕೆಯಾದರು.
ಇದೇ ತಿಂಗಳ 28 ರಂದು ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ಬಿ ತರಗತಿ ಕೃಷಿಕ ಸದಸ್ಯರ ಕ್ಷೇತ್ರದಿಂದ ಉಳಿದ 5 ಸ್ಥಾನಕ್ಕೆ 10 ಮಂದಿ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಸಾಮಾನ್ಯ ಮೀಸಲಿನ ಎರಡು ಸ್ಥಾನಕ್ಕೆ ನಿಟ್ಟೂರು ಎನ್.ಸಿ.ಗಿರೀಶ್, ಮದನಘಟ್ಟ ಜಿ.ಎಸ್.ಚಂದ್ರಶೇಖರಯ್ಯ, ಗುಬ್ಬಿಯ ಜಗದೀಶ್, ಗಳಗ ಜಿ.ದಿವಾಕರ್, ಬೆಣಚಿಗೆರೆ ಬಿ.ಎಸ್.ಪಂಚಾಕ್ಷರಿ ಕಣದಲ್ಲಿದ್ದಾರೆ. ಹಿಂದುಳಿದ ವರ್ಗ ಬಿ ಮೀಸಲಿನ ಸ್ಥಾನಕ್ಕೆ ಯಲಚಿಹಳ್ಳಿ ವೈ.ಜಿ.ತ್ರಿನೇಶ್, ಬೆಣಚಿಗೆರೆ ಬಿ.ಸಿ.ದಯಾನಂದಕುಮಾರ್ ನೇರ ಪೈಪೋಟಿಯಲ್ಲಿದ್ದಾರೆ. ಮಹಿಳಾ ಮೀಸಲಿನ ಎರಡು ಸ್ಥಾನಕ್ಕೆ ಗುಬ್ಬಿಯ ಕೆ.ಎನ್.ಸವಿತಾ, ಅಡಗೂರು ಎನ್.ವಸಂತ, ಬೊಮ್ಮರಸನಹಳ್ಳಿ ಸಿ.ಬಿ.ತ್ರಿವೇಣಿ ಈ ಮೂವರು ಕಣದಲ್ಲಿದ್ದಾರೆ ಎಂದು ಚುನಾವಣಾಧಿಕಾರಿ ಮಹಂತೇಶಯ್ಯ ತಿಳಿಸಿದ್ದಾರೆ.