ಗೋಸಲ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ನೂತನವಾಗಿ ವೆಬ್ ಸೈಟ್ ಮೂಲಕ ದೇವಾಲಯದ ಎಲ್ಲಾ ವಿಚಾರ ಹರಿಬಿಟ್ಟು ದೇಶವಿದೇಶದಲ್ಲಿನ ಭಕ್ತರಿಗೆ ಅವಶ್ಯ ಮಾಹಿತಿ ರವಾನಿಸುವ ಕೆಲಸ ನಡೆದಿದೆ. ಈ ಜೊತೆಗೆ ದೇವಾಲಯಕ್ಕೆ ದೇಣಿಗೆಯನ್ನು ನೇರ ಖಾತೆಗೆ ನೀಡಿ ದೇವಾಲಯದ ಅಭಿವೃದ್ದಿಗೆ ಸಹಕರಿಸಲು ಅವಕಾಶ ಮಾಡಲಾಗಿದೆ. ಒಟ್ಟಾರೆ ದೇವಾಲಯದ ಪಾರದರ್ಶಕ ರೀತಿ ವೆಬ್ ಸೈಟ್ ಕೆಲಸ ಮಾಡಲಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಗುಬ್ಬಿ ಪಟ್ಟಣದ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ನೂತನ https://gubbigosalachannabasaveshwara.com/ ವೆಬ್ ಸೈಟ್ ಲೋಕಾರ್ಪಣೆ ಗೊಳಿಸಿ ಮಾತನಾಡಿದ ಅವರು ಈ ವೆಬ್ ಮೂಲಕ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ. ನಂತರದಲ್ಲಿ ಇಲ್ಲಿ ಮೂಲಭೂತ ಸವಲತ್ತುಗಳ ಜೊತೆ ಅತ್ಯವಶ್ಯ ಸೌಕರ್ಯ ಸಿದ್ಧಪಡಿಸಿ ಪ್ರವಾಸಿ ತಾಣವಾಗಿ ಮಾರ್ಪಾಟು ಮಾಡಲಾಗುವುದು ಎಂದರು.
ನೆನೆಗುದಿಗೆ ಬಿದ್ದ ಯಾತ್ರಿ ನಿವಾಸವನ್ನು ಮುಂದುವರೆಸಿ ಭಕ್ತರ ತಂಗುದಾಣಕ್ಕೆ ಅವಶ್ಯ ಕೊಠಡಿ ವ್ಯವಸ್ಥೆ ಮಾಡಲಾಗುವುದು. ಈ ಕಾರ್ಯಕ್ಕೆ 5 ಕೋಟಿ ರೂಗಳ ಮಂಜೂರಾತಿಗೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಜೊತೆಗೆ ಆಕರ್ಷಕ ಉದ್ಯಾನವನ ಕೂಡಾ ನಿರ್ಮಾಣ ಮಾಡಲಾಗುವುದು. ಪೂಜಾ ಕಾರ್ಯಕ್ರಮ ಹಾಗೂ ದೇಣಿಗೆಗೆ ವೆಬ್ ಸೈಟ್ ಮೂಲಕ ಭಕ್ತರು ಮಾಹಿತಿ ಪಡೆಯಬಹುದು. ಆಧುನಿಕತೆಗೆ ತಕ್ಕಂತೆ ದೇವಾಲಯ ಆಡಳಿತ ರೂಪ ಬದಲಿಸಿರುವುದು ಸ್ವಾಗತಾರ್ಹ. ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ ಎಂದ ಅವರು ಯಾವುದೇ ಅನುಮಾನಕ್ಕೆ ಅವಕಾಶ ಇಲ್ಲದೆ ಪಾರದರ್ಶಕ ಆಡಳಿತ ನಡೆಯಲಿದೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಪಪಂ ಉಪಾಧ್ಯಕ್ಷೆ ಶ್ವೇತಾ, ಸದಸ್ಯರಾದ ಮಹಮ್ಮದ್ ಸಾದಿಕ್, ರೇಣುಕಾ ಪ್ರಸಾದ್, ಜಿ.ಆರ್.ಶಿವಕುಮಾರ್, ಜಿ.ಎನ್.ಅಣ್ಣಪ್ಪಸ್ವಾಮಿ, ಕುಮಾರ್, ಜಿಪಂ ಮಾಜಿ ಸದಸ್ಯ ಜಿ.ಎಚ್.ಜಗನ್ನಾಥ್, ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಉಂಡೆ ರಾಮಣ್ಣ, ಕಂದಾಯ ನಿರೀಕ್ಷಕ ವಿನೋದ್, ದೇವಾಲಯ ಸಿಬ್ಬಂದಿ ಕಿರಣ್, ಚೇತನಾ, ಅರ್ಚಕ ರಾಜೇಶ್ ಇತರರು ಇದ್ದರು.