ಮಹಾತ್ಮಗಾಂಧಿ ನರೇಗಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಲು ಯುಕ್ತದಾರ ತಂತ್ರಾಂಶ ಸಹಕಾರಿಯಾಗಿದೆ ಎಂದು ತಾ.ಪಂ ಸಹಾಯಕ ನಿರ್ದೇಶಕ ಜೆ.ಬಿ.ರಂಗನಾಥ್ ತಿಳಿಸಿದರು.
ಗುಬ್ಬಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಅನುಷ್ಟಾನ ಇಲಾಖೆಗಳ ಅಧಿಕಾರಿಗಳು, ನರೇಗಾ ತಾಂತ್ರಿಕ ಸಿಬ್ಬಂದಿಗೆ ತಂತ್ರಾಂಶ ಕುರಿತ ತರಬೇತಿ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಅವರು ಗ್ರಾಮೀಣಾಭಿವೃದ್ದಿ ಮಂತ್ರಾಲಯದ ನಿರ್ದೇಶನದಂತೆ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಜಿಐಎಸ್ ಆಧಾರಿತ ಕಾಮಗಾರಿಗಳನ್ನು ಯುಕ್ತದಾರ ತಂತ್ರಾಂಶದಲ್ಲಿ ವೈಜ್ಞಾನಿಕವಾಗಿ ತಯಾರಿಸಬೇಕಾಗುತ್ತದೆ ಎಂದರು.
ಮಹಾತ್ಮಗಾಂಧಿ ನರೇಗಾ ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಕಾಮಗಾರಿಗಳು ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಗಳಂತಹ ವಿವಿಧ ಕಾರ್ಯಕ್ರಮಗಳಡಿ ನಿರ್ಮಿಸಲಾದ ಸ್ವತ್ತುಗಳೊಂದಿಗೆ ಇದು ಕಾರ್ಯನಿರ್ವಹಿಸುತ್ತದೆ. ಯುಕ್ತದಾರ ತಂತ್ರಾಂಶವು ವಿಶ್ಲೇಷಣ ಸಾಧನೆಗಳನ್ನು ಒಳಗೊಂಡಿದ್ದು ಹಿಂದಿನ ಸ್ವತ್ತುಗಳನ್ನು ವಿಶ್ಲೇಷಿಸಲು ಮತ್ತು ಹೊಸ ಯೋಜನೆಗಳನ್ನು ಗುರುತಿಸಲು ಸಹಾಯ ಮಾಡುತ್ತದೆ ಎಂದರು.
ತರಬೇತಿಗೆ ಕೃಷಿ ಇಲಾಖೆಯ ಎಲ್ಲಾ ಹೋಬಳಿ ಮಟ್ಟದ ಕೃಷಿ ಅಧಿಕಾರಿಗಳು, ಹೋಬಳಿ ಮಟ್ಟದ ಸಹಾಯಕ ತೋಟಗಾರಿಕಾ ಅಧಿಕಾರಿಗಳು, ಸಹಾಯಕ ರೇಷ್ಮೆ ಅಧಿಕಾರಿಗಳು, ವಲಯ ಅರಣ್ಯ ಇಲಾಖೆ ಅಧಿಕಾರಿಗಳೂ, ತಾಲ್ಲೂಕಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಐ.ಇ.ಸಿ ಸಂಯೋಜಕರು, ನರೇಗಾ ತಾಂತ್ರಿಕ ಸಿಬ್ಬಂದಿ , ಡಾಟಾ ಎಂಟ್ರಿ ಆಪರೇಟರ್ ಗಳು ಹಾಜರಿದ್ದರು.