ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹಳೇಆಲೂರು ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದ ನಿಗೂಢ ಸ್ಫೋಟ ಪ್ರಕರಣದಲ್ಲಿ ದಂಪತಿ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಝೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸುದರ್ಶನ್ ಆಚಾರ್(32) ಮತ್ತು ಅವರ ಪತ್ನಿ ಕಾವ್ಯ(27) ಗಾಯಗೊಂಡವರು.
ತೀವ್ರ ಸ್ವರೂಪದ ಗಾಯಗಳಾಗಿದ್ದ ದಂಪತಿಯನ್ನು ಮೊದಲು ಹಾಸನದ ಹಿಮ್ಸ್ ಆಸ್ಪತ್ರೆಗೆ ಒಯ್ಯಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ.
ಘಟನೆ ಹಿನ್ನೆಲೆ
ಹಳೇ ಆಲೂರು ಗ್ರಾಮದ ದಂಪತಿಯ ಮನೆಯಲ್ಲಿ ರಾತ್ರಿ ಸುಮಾರು 9-10 ಗಂಟೆಯ ನಡುವೆ ಸ್ಫೋಟ ನಡೆದಿದ್ದು, ದಂಪತಿಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರಂಭದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿರಬಹುದೆಂದು ಊಹಿಸಲಾಗಿತ್ತು. ಆದರೆ ಸ್ಥಳದಲ್ಲಿ ಕಂಡುಬಂದ ಲೋಹದ ವಸ್ತುಗಳು(ಮೆಟಲ್ ಐಟಂಗಳು) ಮತ್ತು ಇತರ ಸಂದರ್ಭಗಳು ಇದನ್ನು ನಿಗೂಢಗೊಳಿಸಿವೆ. ಸ್ಫೋಟಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಸ್ಫೋಟದ ಶಬ್ದಕ್ಕೆ ಸುಮಾರು 4 ಕಿ.ಮೀ.ದೂರದ ಜನರು ಬೆಚ್ಚಿ ಬಿದ್ದಿದ್ದಾರೆ. ಮಹಿಳೆಯ ಎರಡು ಕಾಲುಗಳು ತುಂಡಾಗಿವೆ. ಅದೃಷ್ಟವಶಾತ್ ಅದೃಷ್ಟಾವಶಾತ್ ಮಗುವಿಗೆ ಪೆಟ್ಟು ಬಿದ್ದಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಜೀತಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಬೆಂಬಲ ಬೆಲೆಯಡಿ ಭತ್ತ ಖರೀದಿಗೆ ಜಿಲ್ಲಾಡಳಿತ ಸಜ್ಜು; ಡಿಬಿಟಿ ಮೂಲಕ ನಗದು ಜಮಾಕ್ಕೆ ಕ್ರಮ
ಮಂಗಳವಾರ ಬೆಳಗ್ಗೆಯಿಂದ ಪೊಲೀಸರು ಸ್ಫೋಟದ ಬಗ್ಗೆ ಮಾಹಿತಿ ಕಲೆ ಹಾಕುವಲ್ಲಿ ತೊಡಗಿದ್ದಾರೆ. ಬಾಂಬ್ ಡಿಸ್ಪೋಸಲ್ ಸ್ಕ್ವಾಡನ್ನು ಸ್ಥಳಕ್ಕೆ ಕಳುಹಿಸಲಾಗಿದ್ದು, ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ. ದಂಪತಿಯ ಸಂಬಂಧಿಕ ಮೋಹನ್ ಎಂಬುವವರು ಆಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನಾ ಸ್ಥಳಕ್ಕೆ ಇಂದು ಬೆಳಿಗ್ಗೆ ಸ್ಥಳೀಯ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿದ್ದು, ಸ್ಥಳೀಯರ ಮಾಹಿತಿಯ ಪ್ರಕಾರ ರಾತ್ರಿ 8:30ರ ಸುಮಾರಿಗೆ ಘಟನೆ ನಡೆದಿರುವುದಾಗಿ ತಿಳಿಸಿದ್ದಾರೆ.
“ಘಟನೆ ನಡೆದ ಮನೆಯ ಪಕ್ಕದಲ್ಲಿ ಯಾವುದೇ ಮನೆಗಳಿರದ ಪರಿಣಾಮ ಅದೃಷ್ಟವಶಾತ್ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಒಂದುವೇಳೆ ಸುತ್ತಮುತ್ತಲೂ ಮನೆಗಳಿದ್ದಿದ್ದರೆ ಭಾರೀ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಮನೆಯಲ್ಲಿದ್ದ ದಂಪತಿ ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೃಷ್ಟವಶಾತ್ ಮನೆಯಲ್ಲಿದ್ದ ಮಗುವಿಗೆ ಏನೂ ಆಗಿಲ್ಲ. ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ” ಎಂದರು.