ಹಾಸನ ತಾಲೂಕಿನ ಮೊಸಳೆ ಹೊಸಳ್ಳಿಯಲ್ಲಿ ಸಂಭವಿಸಿದ ಟ್ರಕ್ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳ ಸದಸ್ಯರಿಗೆ ಸಂಸದ ಶ್ರೇಯಸ್ ಪಟೇಲ್ ತಲಾ ಒಂದೊಂದು ಲಕ್ಷ ಪರಿಹಾರ ವಿತರಣೆ ಮಾಡಿದ್ದಾರೆ.
ಕಟ್ಟಾಯ ಹೋಬಳಿ ಶಿವಯ್ಯನ ಕೊಪ್ಪಲು ಗ್ರಾಮದ ಚಂದನ್ ಎಂಬುವರ ಮನೆಗೆ ತೆರಳಿ 1 ಲಕ್ಷ ಪರಿಹಾರ ನೀಡಿ ನೊಂದಿರುವ ಕುಟುಂಬವನ್ನು ಸಂತೈಸಿದರು. ಇದೇ ರೀತಿ ದುರಂತದಲ್ಲಿ ಮಡಿದ ಎಲ್ಲ 10 ಮಂದಿಯ ಕುಟುಂಬಗಳಿಗೂ ತಲಾ 1 ಲಕ್ಷ ನೆರವು ನೀಡುವುದಾಗಿ ತಿಳಿಸಿರುವ ಅವರು, ಗಾಯಾಳು ಕುಟುಂಬಗಳಿಗೆ ತಲಾ 25 ಸಾವಿರ ರೂ. ಪರಿಹಾರ ನೀಡುವುದಾಗಿ ಹೇಳಿದರು.
“ಭೀಕರ ಅಪಘಾತದಲ್ಲಿ ಮೃತಪಟ್ಟವರ ಮನೆಗೆ ತೆರಳಿ ವೈಯಕ್ತಿಕವಾಗಿ 1 ಲಕ್ಷ ರೂ.ಪರಿಹಾರ ನೀಡಿದ್ದೇನೆ. ಹೋದ ಜೀವನಕ್ಕೆ ಎಂದೂ ಬೆಲೆ ಕಟ್ಟಲು ಆಗಲ್ಲ. ಜೊತೆಯಲ್ಲಿದ್ದವರನ್ನು ಕಳೆದುಕೊಂಡು ನೋವಿನಲ್ಲಿರುವವರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ” ಎಂದರು.
ಇದನ್ನೂ ಓದಿ: ಹಾಸನ | ಕೀಳರಿಮೆ ಬಿಟ್ಟು ಮೂಲ ಜಾತಿಯನ್ನು ಗೌರವಿಸಿ: ಲೋಕೇಶ್
ಕಳೆದ ಶುಕ್ರವಾರ ರಾತ್ರಿ ಗಣೇಶ ವಿಸರ್ಜನೆ ಮೆರವಣಿಗೆ ಸಾಗುವಾಗ ವೇಗವಾಗಿ ಬಂದ ಟ್ರಕ್ ಮೆರವಣಿಗೆ ಮೇಲೆಯೇ ಹರಿದು 9 ಮಂದಿ ಮೃತಪಟ್ಟು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಮರುದಿನ ಮತ್ತೊಬ್ಬ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದ. ಗಾಯಾಳುಗಳು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರನ್ನು ಮೈಸೂರು ಮತ್ತು ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿದೆ.