ಮಾಲಿನ್ಯದತ್ತ ಸಾಗುತ್ತಿರುವ ಪ್ರಕೃತಿಯನ್ನು ರಕ್ಷಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಪ್ರತಿ ಮನೆ ಮನೆಯಲ್ಲಿ ಗಿಡಗಳನ್ನು ನೆಡುವ ಮೂಲಕ ಕಲುಷಿತ ವಾತಾವರಣವನ್ನು ಬಗ್ಗು ಬಡಿದು ಸ್ವಚ್ಛ ಹಾಗೂ ಸುಂದರ ಪರಿಸರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಶಾಸಕ ಸ್ವರೂಪ್ ಪ್ರಕಾಶ್ ಕರೆ ನೀಡಿದರು.
ಹಾಸನ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯಿತಿ, ಯಗಚಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಎಕೋ ಕ್ಲಬ್ ವತಿಯಿಂದ ಎಗಚಿ ಪ್ರೌಢಶಾಲೆ ಆವರಣದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಮೊದಲೆಲ್ಲ ಎಲ್ಲೆಂದರಲ್ಲಿ ಹಣ್ಣಿನ ಹೂವಿನ ಗಿಡಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಮರ-ಗಿಡಗಳು ಮಾಯವಾಗುತ್ತಿವೆ. ಆದುದರಿಂದ ಮುಂದಿನ ಪೀಳಿಗೆಗೆ ಸುಂದರ ಪರಿಸರ ಉಳಿಸಲು ಎಲ್ಲರೂ ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸಬೇಕು” ಎಂದರು.
ಕಾರ್ಯಕ್ರಮಕ್ಕೂ ಮೊದಲು ಶಾಲೆಯ ಆವರಣದಲ್ಲಿ ವಿವಿಧ ಸಂಘ-ಸಂಸ್ಥೆಗಳ ಮುಖಂಡರ ಸಹಯೋಗದಲ್ಲಿ ಸಸಿಗಳನ್ನು ನೆಡುವ ಮೂಲಕ ಹಸಿರು ಉಳಿಸಿ ಪ್ರಕೃತಿ ಬೆಳೆಸಿ ಎಂಬ ಸಂದೇಶ ಸಾರುವ ಮೂಲಕ ಪೌಷ್ಟಿಕವನ ನಿರ್ಮಾಣ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕೋಲಾರ | ಅಕ್ರಮವಾಗಿ ಗಣಿಗಾರಿಕೆ: ರಾಜಕೀಯ ಒತ್ತಡಕ್ಕೆ ಮಣಿಯದೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಮನವಿ
ಪರಿಸರ ಸಂರಕ್ಷಣೆ ಸಲುವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹೀಗೆ ವಿವಿಧ ಸಂಘ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಅವರಂತೆ ಎಲ್ಲರೂ ಪರಿಸರ ಕಾಳಜಿ ಹೊಂದುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗೋಣ ಎಂದು ಕರೆ ನೀಡಿದರು.