ಜಿಲ್ಲೆಯ ರೈತರು 70 ರಿಂದ 75 ಸಾವಿರ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬೆಳೆಯುತ್ತಿದ್ದಾರೆ. ಆದರೆ ಈ ಬಾರಿ ಬಿತ್ತನೆ ಮಾಡಿದ 25 ದಿನಗಳ ನಂತರ ಬಿಳಿಸುಳಿ ರೋಗ ಕಾಣಿಸಿಕೊಂಡಿದೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಕೊಡುವ ಮೆಕ್ಕೆಜೋಳ ಬೆಳೆಯುತ್ತಿದ್ದ ರೈತರು, ಈ ಬಾರಿ ಸಂಕಷ್ಟಕ್ಕೀಡಾಗಿದ್ದಾರೆ.
ಕೃಷಿ ಪ್ರಧಾನ ಜಿಲ್ಲೆಗಳಲ್ಲಿ ಒಂದಾಗಿರುವ ಹಾಸನ ಜಿಲ್ಲೆಯ ರೈತರ ಪಾಡು ಹೇಳತೀರದಾಗಿದೆ. ಶೇಕಡಾ 80ರಷ್ಟು ಜನರು ಕೃಷಿ ಮತ್ತು ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ. ಈ ಜಿಲ್ಲೆ ಮಲೆನಾಡು, ಅರೆ ಮಲೆನಾಡು ಹಾಗೂ ಬಯಲು ಸೀಮೆಯನ್ನು ಹೊಂದಿದೆ. ಈ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿ ಎಲ್ಲ ಭಾಗಗಳಲ್ಲಿಯೂ ಬೆಳೆಯುವ ಬೆಳೆ ಎಂದರೆ ಮೆಕ್ಕೆಜೋಳ.
ಈ ಹಿಂದಿನಿಂದಲೂ ಯಾವುದೇ ಒಂದು ಬೆಳೆಯನ್ನು ಬೆಳೆದು ಕಟಾವಾದ ನಂತರ ಆದ್ಯತೆ ಮೇರೆಗೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಕೊಡುವ ಮೆಕ್ಕೆಜೋಳ ಬೆಳೆಯುವುದು ಇಲ್ಲಿನ ರೈತರ ವಾಡಿಕೆ. ಆದರೆ ಇತ್ತೀಚಿನ ದಿನಗಳಲ್ಲಿ ಮೆಕ್ಕೆಜೋಳಕ್ಕೂ ಕೂಡ ಖರ್ಚು ಹೆಚ್ಚಾಗಿದ್ದು, ಔಷಧಿ ಸಿಂಪಡಣೆ, ರಸಗೊಬ್ಬರ ಹಾಗೂ ಕಾರ್ಮಿಕರ ಸಮಸ್ಯೆ ಹೆಚ್ಚಾಗುತ್ತಲೇ ಇದೆ.
ಈ ನಡುವೆ ಜಿಲ್ಲೆಯಲ್ಲಿ 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದ್ದು, ಇದೀಗ ರೈತರ ಶತ್ರುವಿನಂತೆ ಬಿಳಿಸುಳಿ ರೋಗವೊಂದು ವಕ್ಕರಿಸಿದೆ.
ಮಳೆ ಹಾಗೂ ನೀರಾವರಿ ಆಶ್ರಯದಲ್ಲಿ ಜಿಲ್ಲೆಯಾದ್ಯಂತ ಅದರಲ್ಲಿಯೂ ಆಲೂರು, ಸಕಲೇಶಪುರ, ಹಾಸನ, ಅರಕಲಗೂಡು, ಹೊಳೆನರಸೀಪುರ, ಚನ್ನರಾಯಪಟ್ಟಣ ಹಾಗೂ ಬೇಲೂರು ಭಾಗಗಳಲ್ಲಿ ಬಿಳಿಸುಳಿ ರೋಗ ಹೆಚ್ಚಾಗಿದೆ. ಮುಂಗಾರು ಹಾಗೂ ತಡ ಮುಂಗಾರಿನಲ್ಲಿ ಬಿತ್ತನೆ ಮಾಡುವ ಮುಸುಕಿನ ಜೋಳ ಬೆಳೆಗೆ ಬಿಳಿಸುಳಿ/ಬೂದು ರೋಗ ಭಾದೆ ಕಂಡುಬರುತ್ತದೆ.
ಬಿಳಿಸುಳಿ ರೋಗಕ್ಕೆ ನಿರ್ದಿಷ್ಟ ಔಷಧೋಪಚಾರ ನೀಡುವಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ವಿಫಲವಾಗಿದ್ದು, ರೈತರನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿದೆ.
ಏನಿದು ಬಿಳಿಸುಳಿ/ಬೂದು ರೋಗ?
ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿ ತಾಪಮಾನ ಇಳಿಕೆಯಾಗುವ ಕಾರಣ ಬೂಜು ರೋಗದ ಶಿಲೀಂಧ್ರದ ಬೆಳವಣಿಗೆಗೆ ಪೂರಕವಾದ ವಾತಾವರಣ ಸೃಷ್ಟಿಯಾಗಿ ರೋಗದ ಉಲ್ಬಣಕ್ಕೆ ಕಾರಣವಾಗುತ್ತದೆ. ಈ ಬೂಜು ರೋಗವು ಪೆರಾನೋರೋಸ್ಪಾರಾ ಎಂಬ ಶಿಲೀಂಧ್ರದಿಂದ ಬರುವ ರೋಗವಾಗಿದ್ದು, ಇದು ಮಣ್ಣಿನಿಂದ ಹಾಗೂ ಗಾಳಿಯಿಂದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹರಡಿ ಅತಿ ವೇಗವಾಗಿ ಪ್ರಸರಣಗೊಳ್ಳುವ ಮೂಲಕ ಬೆಳೆಯಲ್ಲಿ ರೋಗದ ತೀವ್ರತೆ ಹೆಚ್ಚಾಗುತ್ತದೆ. ಶಿಲೀಂಧ್ರ ಬೆಳೆದ ಭಾಗದಲ್ಲಿ ಗರಿ ಹಳದಿ ಬಣ್ಣಕ್ಕೆ ತಿರುಗಿ ಗಿಡದ ಬೆಳವಣಿಗೆ ಕುಂಠಿತವಾಗುತ್ತದೆ, ತೆನೆ ವಿಕಾರವಾಗಿ ಪರಾಗ ಉತ್ಪತ್ತಿಯಾಗದೆ ಎಲೆ ಆಕಾರದ ಬೆಳವಣಿಗೆ ಕಂಡುಬರುತ್ತದೆ. ರೋಗದ ಸೋಂಕು ಹೆಚ್ಚಾದರೆ ಶೇ.70 ರಷ್ಟು ಇಳುವರಿ ಕುಂಠಿತವಾಗುವ ಸಾಧ್ಯತೆ ಹೆಚ್ಚಿಸುತ್ತದೆ.

ಬಿಳಿಸುಳಿ/ಬೂದು ರೋಗ ಹತೋಟಿಗೆ ಕ್ರಮಗಳು
- ಬಿತ್ತನೆಗೆ ಮೊದಲು ಬೀಜವನ್ನು Metalaxyl 4wp + Mencozeb 64 wp ಮಿಶ್ರಣ 4gm/kg ಶಿಲೀಂದ್ರ ನಾಶಕದಿಂದ ಬೀಜೋಪಚಾರ ಮಾಡುವುದು.
- ರೋಗ ಭಾದಿತ ಗಿಡಗಳನ್ನು ಕಿತ್ತು ಹಾಕುವುದು.
- ಬಿತ್ತನೆಯಾದ 40 ರಿಂದ 45 ದಿನಗಳ ನಂತರ Metalaxyl 4wp + Mencozeb 64 wp ಮಿಶ್ರಣ ಮಾಡಿ 2gm ಪ್ರತಿ ಲೀಟರ್ ನೀರಿಗೆ ಸೇರಿಸಿ ಸಿಂಪಡಿಸುವುದು.
- ಭೂಮಿಯಿಂದ ನೀರು ಬಸಿಯಲು ಕ್ರಮ ವಹಿಸುವುದು(ನೀರು ಸಂಗ್ರಹವಾಗದಂತೆ ನೋಡಿಕೊಳ್ಳುವುದು)
- ಬೆಳೆ ಪರಿವರ್ತನೆಗೊಳ್ಳುವುದು, ಪ್ರತಿ ವರ್ಷ ಮುಸುಕಿನ ಜೋಳ ಬೆಳೆಯುವುದರಿಂದ ರೋಗ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಏಕದಳ ಬೆಳೆಗಳ ನಂತರ ದ್ವಿದಳ ಧಾನ್ಯ ಬೆಳೆಗಳನ್ನು ಬೆಳೆಯಲು ಕ್ರಮವಹಿಸುವುದು.
ರೈತರು ಈ ಮೇಲ್ಕಂಡ ಹತೋಟಿ ಕ್ರಮಗಳನ್ನು ಅಳವಡಿಸಿಕೊಂಡು ರೋಗ ಭಾದೆಯನ್ನು ತಡೆಗಟ್ಟಲು ಕ್ರಮವಹಿಸಬಹುದಾಗಿದೆ.
ರೈತರು ಬೆಳೆ ಪರಿವರ್ತನೆ ಮಾಡಬೇಕು
ಹಾಸನ ಸಂಸದ ಶ್ರೇಯಸ್ ಪಟೇಲ್ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ, “ಜಿಲ್ಲೆಯಾದ್ಯಂತ ಬಿತ್ತನೆಯಾಗಿರುವ ಮೆಕ್ಕೆಜೋಳದಲ್ಲಿ ಬಿಳಿಸುಳಿ ರೋಗ ಹೆಚ್ಚಾಗಿದೆ. ಈ ಬಗ್ಗೆ ಪರಿಶೀಲನೆಗಾಗಿ ತನಿಖೆ ನಡೆಸಿ ಈ ರೋಗವನ್ನು ನಿಯಂತ್ರಿಸುವುದು ಹಾಗೂ ರೋಗಕ್ಕೆ ಕಾರಣ ಏನೆಂಬುದನ್ನು ತಿಳಿಯಲು ವಿಜ್ಞಾನಿಗಳನ್ನು ಕಳಿಸಬೇಕು” ಎಂದು ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಮನವಿ ಪುರಸ್ಕರಿಸಿದ ಕೃಷಿ ಸಚಿವರು 5 ಜನ ವಿಜ್ಞಾನಿಗಳ ICARನ ತಂಡವನ್ನು ಜಿಲ್ಲೆಗೆ ಕಳುಹಿಸಿದ್ದರು. ಈ ಐದು ಮಂದಿ ವಿಜ್ಞಾನಿಗಳು ಅದರಲ್ಲಿಯೂ ಮೆಕ್ಕೆಜೋಳ ವಿಭಾಗದಲ್ಲಿ ಕೆಲಸ ಮಾಡುವಂತಹ ಮೆಕ್ಕೆಜೋಳದ ರೋಗ ಶಾಸ್ತ್ರಜ್ಞರು ದೆಹಲಿ, ಧಾರವಾಡ ಹಾಗೂ ಮಂಡ್ಯದಿಂದ ಬಂದಿರುವ ತಂಡವಾಗಿತ್ತು. ಈ ತಂಡ ಜಿಲ್ಲೆಯಲ್ಲಿನ ಸಕಲೇಶಪುರ ಹೊರತುಪಡಿಸಿ ಆರು ತಾಲೂಕುಗಳಿಗೆ ಭೇಟಿ ನೀಡಿ ಮಾಹಿತಿ ಹಾಗೂ ಸ್ಯಾಂಪಲ್‌ಗಳನ್ನು ಪಡೆದಿದೆ.
ಭೇಟಿ ವೇಳೆ ರೈತರೊಂದಿಗೆ ಮಾತನಾಡಿದ ವಿಜ್ಞಾನಿಗಳು, ಬೆಳೆ ಪರಿವರ್ತನೆ ಮಾಡಲು ತಿಳಿಸಿದ್ದಾರೆ. ಏಕೆಂದರೆ ರೈತರು ಹಿಂಗಾರಿನಲ್ಲಿ ಮೆಕ್ಕೆಜೋಳ, ಮುಂಗಾರಿನಲ್ಲಿ ಮೆಕ್ಕೆಜೋಳ ಬೆಳೆಯಲು ಕಳೆದ ಹತ್ತು ವರ್ಷಗಳಿಂದ ಪ್ರಾರಂಭ ಮಾಡಿದ್ದಾರೆ. ಇನ್ನು ಮೇ ತಿಂಗಳಿನಲ್ಲಿ ವಾಡಿಕೆಯಂತೆ 95 ಮಿಲಿ ಮೀಟರ್‌ನಷ್ಟು ಮಳೆಯಾಗಬೇಕಿತ್ತು. ಆದರೆ 260 ಮಿಲಿ ಮೀಟರ್‌ಗಿಂತಲೂ ಅಧಿಕ ಮಳೆಯಾಗಿದೆ. 21 ಮಳೆ ದಿನಗಳು ಮೇ ತಿಂಗಳಿನಲ್ಲಿಯೇ ಆಗಿವೆ. ಅಧಿಕ ಮಳೆ ಹಾಗೂ ವಾತಾವರಣ ರೋಗಗಳ ವೃದ್ಧಿಗೆ ಅನುಕೂಲಕರವಾಗಿದೆ ಎಂದು ಹೇಳಿದರು.
ಜತೆಗೆ ವಿಜ್ಞಾನಿಗಳು ಮಣ್ಣು ಹಾಗೂ ಬೀಜಗಳ ಮಾದರಿಗಳನ್ನು ಸಂಗ್ರಹ ಮಾಡಿದ್ದಾರೆ. ಇದರ ವಿಸ್ತೃತವಾದ ವರದಿ ಬರಲು 15 ದಿನ ಕಾಲಾವಕಾಶ ಬೇಕು ಎಂದಿದ್ದರು. ಈಗಾಗಲೇ ಜಿಲ್ಲೆಯಲ್ಲಿ 70 ಸಾವಿರ ಹೆಕ್ಟೇರ್‌ನಷ್ಟು ಮೆಕ್ಕೆಜೋಳ ಬಿತ್ತನೆಯಾಗಿದೆ. ಅದರಲ್ಲಿ 13 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ರೀತಿಯ ಬಿಳಿಸುಳಿ ರೋಗ ಕಂಡುಬಂದಿದೆ. ರೈತರು ಯಾವುದೇ ಸಮಯದಲ್ಲಿ ಬೇಕಾದರೂ ಕೃಷಿ ಅಧಿಕಾರಿಗಳನ್ನು ಭೇಟಿ ಮಾಡಬಹುದು ಹಾಗೂ ಅವರಿಂದ ಮಾರ್ಗದರ್ಶನ ಪಡೆಯಬಹುದು. ಅಷ್ಟೇ ಅಲ್ಲದೆ ಅಧಿಕಾರಿಗಳು ಹೆಚ್ಚು ಸ್ಥಳ ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ.

ಇನ್ನು ಬಿತ್ತನೆ ಪ್ರಾರಂಭಕ್ಕೂ ಮೊದಲೇ ಕೃಷಿ ವಿಕಸಿತ ಅಭಿಯಾನ ಮಾಡಿದ್ದೇವೆ. ಅದರಿಂದಲೂ ಸಹ ರೈತರಿಗೆ ಅನುಕೂಲವಾಗಿದೆ. ಹಾಗೂ ಯಾವ ರೈತರು ಬಹಳ ಪವರ್ ಫುಲ್ ಕೆಮಿಕಲ್ ಮೆಯಲಾಗ್ಜಿಲ್ ಮತ್ತು ಮೆನ್ಕೊಜೆಪ್ ಅನ್ನು ಸಮಯೋಚಿತವಾಗಿ ಉಪಯೋಗಿಸಿದವರು ಯಶಸ್ವಿಯಾಗಿದ್ದಾರೆ. ತಜ್ಞರ ವರದಿ ನಂತರ ನಿಖರ ಕಾರಣ ತಿಳಿಯಲಿದೆ ಎಂದು ಹಾಸನ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
“ಎಲ್ಲರ ಸಲಹೆಯಂತೆ ಸಂಶೋಧನಾ ತಂಡವನ್ನು ಕಳಿಸಲಾಗಿದೆ. ಕೆಲ ತಾಲೂಕುಗಳಿಗೆ ಭೇಟಿ ನೀಡಿ ಮಣ್ಣು ಹಾಗೂ ಬಿತ್ತನೆ ಬೀಜಗಳ ಸ್ಯಾಂಪಲ್ ಪಡೆದಿದ್ದಾರೆ. ಅದರ ವರದಿ ಬಂದ ನಂತರ ಕೇಂದ್ರ ಸಚಿವರನ್ನು ಭೇಟಿಯಾಗಿ ಮನವಿ ಮಾಡಿ ಅನುಸರಿಸಬೇಕಾದ ಸೂಕ್ತ ಕ್ರಮಗಳನ್ನು ಕೇಂದ್ರ ಹಾಗೂ ರಾಜ್ಯ ಕೃಷಿ ಇಲಾಖೆಗಳ ಸಮನ್ವಯತೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಇದಲ್ಲದೆ ಕೇಂದ್ರ ಕೃಷಿ ಸಚಿವರಲ್ಲಿ ಮನವಿ ಮಾಡುವುದೇನೆಂದರೆ ಮೆಕ್ಕೆಜೋಳದ ರೀಜನಲ್ ಸೆಂಟರ್ ಫಾರ್ ಮೈಜ್(ಪ್ರಾದೇಶಿಕ ಕೇಂದ್ರ) ಅನ್ನು ನಮ್ಮ ಜಿಲ್ಲೆಯಲ್ಲಿ ಪ್ರಾರಂಭ ಮಾಡಲು ಅವಕಾಶ ಮಾಡಿಕೊಡಲು ಮನವಿ ಮಾಡುತ್ತೇವೆ. ಇದರಿಂದ ಮುಂದಿನ ದಿನಗಳಲ್ಲಿ ಜೋಳ ಬೆಳೆಗಾರರಿಗೆ ಅನುಕೂಲವಾಗಲಿದೆ” ಎಂದು ಸಂಸದ ಶ್ರೇಯಸ್ ಪಟೇಲ್ ಅಭಿಪ್ರಾಯಪಟ್ಟರು.
ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ತಂದುಕೊಡುವ ಬೆಳೆ ಮೆಕ್ಕೆಜೋಳ
ರೈತರು ಎಂದರೆ ಸಾಲ ಮಾಡಿಕೊಂಡು ಬೆಳೆದ ಬೆಳೆಯಿಂದ ಸಾಲ ತೀರಿಸಲು ಸಾಧ್ಯವಾಗದೆ ಸದಾ ಸಂಕಷ್ಟದಲ್ಲೇ ಇರುವವರಾಗಿದ್ದಾರೆ. ಆದರೆ ಮೆಕ್ಕೆಜೋಳ ಬೆಳೆಯಲು ಪ್ರಾರಂಭ ಮಾಡಿದಾಗಿನಿಂದ ಅತಿ ಕಡಿಮೆ ಸಮಯ ಹಾಗೂ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡೆದುಕೊಳ್ಳುವ ಮೆಕ್ಕೆಜೋಳ ಇತ್ತೀಚಿನ ದಿನಗಳಲ್ಲಿ ಆರ್ಥಿಕ ಸಂಕಷ್ಟ ತಂದೊಡ್ಡುವ ಬೆಳೆಯಾಗುತ್ತಿದೆ. ಎಂದೂ ಕಾಣದ ರೋಗಗಳು ಬರುತ್ತಿವೆ. ಔಷಧಿ ಸಿಂಪಡಿಸದೆ ಬೆಳೆ ಬೆಳೆಯಲು ಸಾಧ್ಯವೇ ಆಗುತ್ತಿಲ್ಲವೆಂಬುದು ಅರಸೀಕೆರೆಯ ಯುವರೈತ ದರ್ಶನ್ ಅವರ ಮನದಾಳದ ನೋವಿನ ಮಾತುಗಳಾಗಿವೆ.
ಅದರಲ್ಲಿಯೂ ಕಳಪೆ ಬೀಜದ ಸಮಸ್ಯೆ, ರಸಗೊಬ್ಬರದ ಸಮಸ್ಯೆ, ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡದೆ ಇರುವುದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಈ ಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸಬೇಕು ಎಂಬುದು ಅವರ ಆಗ್ರಹವಾಗಿದೆ.
ಕಳಪೆ ಬಿತ್ತನೆಬೀಜದಿಂದ ಮುಸುಕಿನ ಜೋಳ ಬೆಳೆ ನಾಶ; ಪ್ಯಾಕೇಜ್‌ಗೆ ಆಗ್ರಹ
ಕಳಪೆ ಬಿತ್ತನೆ ಬೀಜ ವಿತರಣೆಯಿಂದಾಗಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಬಿತ್ತನೆ ಮಾಡಲಾಗಿದ್ದ ಮುಸುಕಿನ ಜೋಳದ ಪೈಕಿ ಅರ್ಧದಷ್ಟು ಬೆಳೆ ಹಾಳಾಗಿದೆ. ಎಷ್ಟೋ ಕಡೆ ಜೋಳ ಮೊಳಕೆಯೇ ಬಂದಿಲ್ಲ. ಇನ್ನೂ ಕೆಲವು ಕಡೆ ಭೂಮಿಯಿಂದ ಮೇಲೆ ಬಂದ ಕೆಲವೇ ದಿನಗಳಲ್ಲಿ ಬಿಳಿಸುಳಿ ರೋಗಕ್ಕೆ ಬಲಿಯಾಗಿ ಅಪಾರ ಬೆಳೆ ನಷ್ಟವಾಗಿದೆ. ಕೂಡಲೇ ಸಂಬಂಧಪಟ್ಟವರು ವಿಶೇಷ ಪ್ಯಾಕೇಜ್ ಮೂಲಕ ಪರಿಹಾರ ನೀಡಬೇಕು ಎಂಬುದು ರೈತ ಹಾಗೂ ವಕೀಲ ಚೆನ್ನಂಗಿಹಳ್ಳಿ ಶ್ರೀಕಾಂತ್ ಅವರ ಆಗ್ರಹವಾಗಿದೆ.
ಜಿಲ್ಲೆಯಲ್ಲಿ ಆಲೂಗೆಡ್ಡೆ ಪ್ರಮುಖ ವಾಣಿಜ್ಯ ಬೆಳೆಯಾಗಿತ್ತು. ಅಂಗಮಾರಿ ರೋಗದಿಂದ ಅದು ನೇಪಥ್ಯಕ್ಕೆ ಸರಿದ ನಂತರ ಹೆಚ್ಚು ರೈತರು ಮುಸುಕಿನ ಜೋಳ ಬೆಳೆಯುತ್ತಿದ್ದಾರೆ. ಇಡೀ ಜಿಲ್ಲೆಯಲ್ಲಿ 70 ರಿಂದ 75 ಸಾವಿರ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬೆಳೆಯುತ್ತಿದ್ದಾರೆ. ಆದರೆ ಈ ಬಾರಿ ಬಿತ್ತನೆ ಮಾಡಿದ 25 ದಿನಗಳ ನಂತರ ಜೋಳದ ಗರಿಗಳು ಹಳದಿ ಬಣ್ಣಕ್ಕೆ ತಿರುಗಿ, ಗಿಡವು ನೆಲಕ್ಕೆ ಬಾಗಿ ಬೆಳೆಯ ಬೆಳವಣಿಗೆ ಕುಂಠಿತಗೊಂಡಿದೆ. ಬಳಿಕ ಪೂರ್ತಿ ಗಿಡಗಳು ನೆಲಕ್ಕೆ ಬಿದ್ದು ಹಾಳಾಗಿವೆ.
ದಿನಕಳೆದಂತೆ ಹೊಲದಲ್ಲಿ ಮುಸುಕಿನ ಜೋಳವೇ ಇಲ್ಲದಂತಾಗಿ ರೈತರು, ತಾವು ಬಿತ್ತಿದ್ದ ಜೋಳವನ್ನು ಟ್ರ್ಯಾಕ್ಟರ್ ಮೂಲಕ ಮತ್ತೆ ಉಳುಮೆ ಮಾಡಿ ನಾಶ ಮಾಡಿದ್ದಾರೆ.
ಇದನ್ನೂ ಓದಿದ್ದೀರಾ? ದೇವನಹಳ್ಳಿ ಭೂ ಸ್ವಾಧೀನ | ಎಕರೆಗೆ ₹3 ಕೋಟಿ ಕೊಟ್ಟರೆ ಜಮೀನು ಕೊಡಲು ಸಿದ್ಧ: ಭೂಸ್ವಾಧೀನ ಬೆಂಬಲ ಸಮಿತಿ
ಹಾಸನ ತಾಲೂಕೊಂದರಲ್ಲೇ 20-30 ಸಾವಿರ ಹೆಕ್ಟೇರ್‌ನಲ್ಲಿ ಬೆಳೆದಿದ್ದ ಜೋಳ ಬಹುತೇಕ ಹಾಳಾಗಿದೆ. ಕೆಲವು ಕಂಪನಿಯವರು ನೀಡಿದ್ದ ಜೋಳವನ್ನು ಬಿತ್ತನೆ ಮಾಡಲಾಗಿತ್ತು. ಆದರೆ ಬೀಜೋಪಚಾರ ಮಾಡದೆ ರೈತರಿಗೆ ವಿತರಣೆ ಮಾಡಿದ್ದು, ಬೆಳೆನಾಶಕ್ಕೆ ಕಾರಣವಾಗಿದೆ.
ಸರ್ಕಾರ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಬೀಜೋಪಚಾರ ಮಾಡದೆ ನಕಲಿ ಬೀಜ ಕೊಟ್ಟಿರುವ ಕಂಪನಿಗಳ ಮೇಲೆ ತನಿಖೆ ಮಾಡಿ, ಕ್ರಮ ಕೈಗೊಂಡು ಪರಿಹಾರ ಕೊಡಿಸಬೇಕು. ಇಲ್ಲವಾದರೆ ನಾವೇ ಗ್ರಾಹಕ ನ್ಯಾಯಾಲಯದಲ್ಲಿ ದಾವೆ ಹೂಡುತ್ತೇವೆ. ಒಂದು ಲಕ್ಷದವರೆಗೆ ಸಾಲ ಮಾಡಿಕೊಂಡು, ಆಭರಣ ಗಿರವಿ ಇಟ್ಟು, ಮುಸುಕಿನ ಜೋಳ ಬೆಳೆದಿದ್ದೇವೆ. ಆದರೀಗ ಮುಸುಕಿನ ಜೋಳವೇ ಹಾಳಾಗಿರುವುದರಿಂದ ವಿನಿಯೋಗಿಸಿದ್ದ ಹಣ ಮಣ್ಣುಪಾಲಾಗಿದೆ. ರೈತರ ಅಳಲು ಕೇಳುವವರೇ ಇಲ್ಲದಾಗಿದ್ದಾರೆ. ನಷ್ಟ ಅನುಭವಿಸಿರುವ ರೈತರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲೇಬೇಕು ಎಂದು ಚೆನ್ನಂಗಿಹಳ್ಳಿ ಶ್ರೀಕಾಂತ್ ಆಗ್ರಹಿಸಿದರು.