ಹಾವೇರಿ ನಗರದ ಪ್ರವಾಸಿ ಮಂದಿರದಲ್ಲಿ ಶಿವಶರಣ ಮಾದಾರ ಚನ್ನಯ್ಯ ವೇದಿಕೆ ವತಿಯಿಂದ ತೋಂಟದಾರ್ಯ ಮಠದ ಸಿದ್ದಲಿಂಗ ಮಹಾಸ್ವಾಮಿಗಳ 75ನೇ ಹುಟ್ಟುಹಬ್ಬವನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಸರಳವಾಗಿ ಆಚರಿಸಲಾಯಿತು.
ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್. ಮಾಳಗಿ ಮಾತನಾಡಿ, ಪೂಜ್ಯರು ಸರ್ವಧರ್ಮ ಸಮನ್ವಯತೆ ವಿಶ್ವಗುರು ಬಸವಣ್ಣನವರ ತತ್ವ ಸಿದ್ಧಾಂತದ ಪರಪಾಲಕರಾಗಿ ಕರ್ನಾಟಕ ರಾಜ್ಯ ಕನ್ನಡದ ಜಗದ್ಗುರು ಪ್ರಖ್ಯಾತ ನಾಮಪಡೆದು ನೆಲ, ಜಲ, ಭಾಷೆಯ ಬಗ್ಗೆ ದೃಢಸಂಕಲ್ಪ ಹೊಂದಿದ್ದರು. ಇವರ ಕಾರ್ಯವೈಖರಿಯನ್ನು ಕೇಂದ್ರ ಸರ್ಕಾರವು ಮನಗಂಡು ಅಟಲ ಬಿಹಾರಿ ವಾಜಪೇಯಿ ರವರು ಪ್ರಧಾನ ಮಂತ್ರಿ ಇದ್ದ ಸಂದರ್ಭದಲ್ಲಿ ಪೂಜ್ಯರಿಗೆ ರಾಷ್ಟ್ರೀಯ ಕೋಮು ಸೌಹಾರ್ದತೆಯ ಪ್ರಶಸ್ತಿ ನೀಡಿ ಗೌರವಿಸಿದ್ದರು.
ಅದರಲ್ಲೂ, ಪರಮ ಪೂಜ್ಯರು ಶಿವಶರಣ ಮಾದಾರ ಚನ್ನಯ್ಯ ಅವರನ್ನು ಅತ್ಯಂತ ಅಂತಃಕರಣದಲ್ಲಿ ಕಂಡು ಡಂಬಳ ಗ್ರಾಮದಲ್ಲಿ ಮಾದಿಗರಿಗೆ ಮಠದ ವತಿಯಿಂದ ಭೂಮಿ ನೀಡಿ, ಬೋರವೆಲ್ಲ ಹಾಕಿಸಿ, ಮನೆ ಕಟ್ಟಿಕೊಟ್ಟಿದ್ದು ಇಂತಹ ಪೂಜ್ಯರ ಬಗ್ಗೆ ಕೆಲವೊಂದು ಜನ ವಿರೋಧ ಮಾಡುತ್ತಿರುವವರ ವಿರುದ್ಧ ಲಿಡ್ಕರ್ ನಿಗಮದ ಮಾಜಿಉಪಾಧ್ಯಕ್ಷ ಡಿ.ಎಸ್. ಮಾಳಗಿ ಖಂಡಿಸಿದರು. ಪೂಜ್ಯರ ಆಶೀರ್ವಾದ ಈ ಸಮಾಜದ ಮೇಲೆ ಇರಲೆಂದು ಈ ಸಂದರ್ಭದಲ್ಲಿ ಆಶಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾದಿಗರ ಸಮಾಜದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಉಡಚಪ್ಪ ಮಾಳಗಿ, ಮುಖಂಡರಾದ ವಿಜಯಕುಮಾರ ಹುಲಿಕಂತಿಮಠ, ಶೆಟ್ಟಿ ವಿಭೂತಿ, ಜಗದೀಶ ಹರಿಜನ, ಹನಮಂತಪ್ಪ ನಾಗಮ್ಮನವರ, ಮಂಜುನಾಥ ಮಾಳಗಿ, ಜಗದೀಶ ಕರಬಸಣ್ಣನವರ, ಶಿವಾನಂದ ಕರಬಸಣ್ಣನವರ, ಹನುಮೇಶ ಹರಿಜನ, ನಿರಂಜನ ಹಾಗೂ ಇತರರು ಇದ್ದರು.