ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಿ ಸತತ ಒಂದು ವಾರ ಕಳೆದಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಈಗಾಗಲೇ ಬಿತ್ತನೆ ಮಾಡಿರುವ ರೈತರು ತಮ್ಮ ಬೆಳೆಗಳಿಗೆ ರಸಗೊಬ್ಬರ ಹಾಕಲು ಗೊಬ್ಬರದ ಕೇಂದ್ರಗಳಿಗೆ ತೆರಳುತ್ತಿದ್ದಾರೆ. ರೈತರಿಗೆ ಗೊಬ್ಬರ ಸಿಗದೇ ಪರದಾಡುವಂಥ ಪರಿಸ್ಥಿತಿ ಎದುರಾಗಿದೆ ಎಂದು ರೈತ ಮುಖಂಡ ಹನುಮಂತಪ್ಪ ಕಬ್ಬಾರ್ ಅಸಮಾಧಾನ ವ್ಯಕ್ತಪಡಿಸಿದರು.
ಹಾವೇರಿ ಜಿಲ್ಲೆಯ ರಾಣೇಬೆನ್ನೂರ ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ಮಾಡಿ, ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅತಿ ಶೀಘ್ರದಲ್ಲಿ ರಸ ಗೊಬ್ಬರ ಪೂರೈಸಬೇಕೆಂದು ಒತ್ತಾಯಿಸಿ ಅಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದರು.
“ಹಾವೇರಿ ಜಿಲ್ಲಾದ್ಯಂತ ಮುಂಗಾರು ಬಿತ್ತನೆ ಪ್ರಕೃತಿ ವಿಕೋಪಕ್ಕೆ ಸಿಲುಕಿ ನಷ್ಟವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಜಿಲ್ಲೆಯಲ್ಲಿ 6 ಶಾಸಕರು ಇದ್ದರೂ ರೈತರ ಪರ, ರೈತರಿಗೆ ಆದ ನಷ್ಟದ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಜಿಲ್ಲೆಯ ರೈತರಿಗೆ ಸರಿಯಾಗಿ ಕಾಲ ಕಾಲಕ್ಕೆ ಗೊಬ್ಬರ ಸಿಗುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಒಂದು ಕಡೆ ರಾಜ್ಯದ ಕೃಷಿ ಸಚಿವರು ಯಾವುದೇ ಮೂಲೆಯಲ್ಲಿ ಕೂತು, ʼಎಲ್ಲ ಸರಿ ಇದೆ. ಯಾವುದೇ ರೀತಿ ಗೊಬ್ಬರ ಮತ್ತು ಬಿತ್ತನೆಬೀಜದ ಕೊರತೆ ಇಲ್ಲʼ ಅಂತಾ ಹೇಳುತ್ತಾರೆ. ಹಾಗಾದರೇ ಒಂದು ಕಡೆ ಕೇಂದ್ರ ಸರ್ಕಾರ ಕಳುಹಿಸಿಲ್ಲ ಅಂತ ಆರೋಪ ಮಾಡುತ್ತಾರೆ. ಒಂದು ಕಡೆ ಬಿಜೆಪಿ ರೈತರಿಗೆ ಸರಿಯಾಗಿ ಗೊಬ್ಬರ ಕೊಟ್ಟಿಲ್ಲ ಅಂತ ಹೇಳಿಕೆ ಜತೆ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಹಾಗಾದರೆ ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎನ್ನುವ ರೀತಿಯಲ್ಲಿ ರೈತರಿಗೆ ಸರಿಯಾದ ರೀತಿ ಮೂಲ ಸೌಕರ್ಯಗಳಿಲ್ಲದೇ ಸಾಲದಿಂದ ಬೇಸತ್ತ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ರೈತರೊಡನೆ ಚಲ್ಲಾಟವಾಡುತ್ತಿದ್ದು, ರೈತರಿಗೆ ಪ್ರಾಣ ಸಂಕಷ್ಟ ನೀಡಿದಂತಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆ ವಿರುದ್ಧ ಹೋರಾಟಕ್ಕೆ ಎಸ್ಎಫ್ಐ ಕರೆ
“ರೈತರು ಬೆಳೆದ ಬೆಳೆಗಳು ಸತತ ಮಳೆಗೆ ಸಿಲುಕಿ ಪ್ರಕೃತಿ ವಿಕೋಪಕ್ಕೆ ಗುರಿಯಾಗಿವೆ. ಹೀಗಾಗಿ ಸಂಪೂರ್ಣ ಬೆಳೆ ಹಾಳಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ಪ್ರಕೃತಿ ವಿಕೋಪಕ್ಕೆ ಒಳಗಾದ ರೈತರಿಗೆ ಒಂದು ಎಕರೆಗೆ 40-50 ಸಾವಿರ ರೂಪಾಯಿ ಪರಿಹಾರ ನೀಡಬೇಕು. ಮುಂಗಾರು ಬೆಳೆಗೆ ಬೆಳೆವಿಮೆ ತುಂಬಿದ ರೈತರಿಗೆ ಶೇ.25ರಷ್ಟು ಬೆಳೆ ವಿಮೆ ನೀಡಬೇಕು” ಎಂದು ರೈತ ಸಂಘಟನೆಗಳು ಆಗ್ರಹಿಸಿದವು.
ಇದೆ ವೇಳೆ ಮಲ್ಲಿಕಾರ್ಜುನ್ ತೆಗ್ಗಿನ, ರಾಜೇಶ್ ಅಂಗಡಿ, ಮಂಜುನಾಥ್ ಸಂಬೋಜಿ, ಸೋಮರೆಡ್ಡಿ ಹಾದಿಮನಿ ಮಂಜುನಾಥ್ ಗುಡಣ್ಣನವರ, ಸಂತೋಷ್ ಕುಮಾರ್ ಮುದ್ದಿ ಸೇರಿದಂತೆ ಇನ್ನೂ ಹಲವು ರೈತ ಮುಖಂಡರು ಇದ್ದರು.