ಸರ್ಕಾರಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಸತಿಯುತ ಪ್ರಥಮ ದರ್ಜೆ ಕಾಲೇಜಿಗೆ ವಸತಿ ಸೌಲಭ್ಯ ವಂಚನೆ: ಜಿಲ್ಲಾಧಿಕಾರಿಗಳ ಮಧ್ಯೆ ಪ್ರವೇಶಕ್ಕಾಗಿ ಆಗ್ರಹಿಸಿ ಎಸ್ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನ ನಡೆಸಿದರು.
ಹಾವೇರಿ ಜಿಲ್ಲೆಯ ಹಾವೇರಿ ತಾಲ್ಲೂಕಿನ ಕಳ್ಳಿಹಾಳ ಗ್ರಾಮದ ಗುಡ್ಡದಲ್ಲಿರುವ ಸರ್ಕಾರಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಸತಿಯುತ ಪ್ರಥಮ ದರ್ಜೆ ಕಾಲೇಜಿಗೆ “ಹಾಸ್ಟೆಲ್ ಸೌಲಭ್ಯ” ವಂಚನೆ ವಿರೋಧಿಸಿ ಶೀಘ್ರವಾಗಿ ವಸತಿ ಸೌಲಭ್ಯಕ್ಕಾಗಿ ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾಧಿಕಾರಿ ಕಛೇರಿ ಎದುರು ಧರಣಿ ನಡೆಸಿ, ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, “ಕಳ್ಳಿಹಾಳ ಗ್ರಾಮದ ಗುಡ್ಡದಲ್ಲಿರುವ ಸರ್ಕಾರಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಸತಿಯುತ ಪ್ರಥಮ ದರ್ಜೆ ಕಾಲೇಜು ಪ್ರಾರಂಭವಾಗಿ ಏಳು ವರ್ಷಗಳು ಕಳೆದರು ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯದಿಂದ ವಂಚಿತರಾಗಿ ಮಾಡಿರುವುದನ್ನು ಎಸ್‌ಎಫ್‌ಐ ಹಾವೇರಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಹಾಗೂ ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಭಾಗಗಳಲ್ಲಿನ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಕಾರಣಕ್ಕೆ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಗ್ರಾಮೀಣ ಭಾಗದಲ್ಲಿ ವಸತಿಯುತ ಶಿಕ್ಷಣಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ೨೦೧೭ ೧೮ರಲ್ಲಿ ವಸತಿಯುತ ಸರ್ಕಾರಿ ಎಸ್ಸಿ/ಎಸ್ಟಿ ವಸತಿಯುತ ಪ್ರಥಮ ದರ್ಜೆ ಕಾಲೇಜುಗಳನ್ನು ರಾಜ್ಯದ ಹತ್ತು ಜಿಲ್ಲೆಗಳಿಗೆ ಮಂಜೂರು ಮಾಡಲಾಗಿತ್ತು” ಎಂದರು.
“ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗಿದ್ದ ಮೊದಲಿನ ಅವಧಿಯ ಕೊನೆ ವರ್ಷದಲ್ಲಿ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ೬೦% ಮತ್ತು ಹಿಂದುಳಿದ ವರ್ಗಗಳ ೪೦% ವಿದ್ಯಾರ್ಥಿಗಳಿಗಾಗಿ ಇಡೀ ರಾಜ್ಯಗಳ ಪೈಕಿ ಆರ್ಥಿಕವಾಗಿ ಹಿಂದುಳಿದ ೧೦ ಜಿಲ್ಲೆಗಳಾದ ಹಾವೇರಿ, ಕೊಪ್ಪಳ, ಕೋಲಾರ, ಚಿತ್ರದುರ್ಗ, ಯಾದಗಿರಿ, ಕಲಬುರಗಿ, ಬೀದರ್, ವಿಜಯಪುರ, ಚಾಮರಾಜನಗರ, ರಾಯಚೂರುಗಳಲ್ಲಿ ವಸತಿಯುಕ್ತ ಪದವಿ ಕಾಲೇಜುಗಳನ್ನ ಆರಂಭಿಸಲು ತಿರ್ಮಾನಿಸಲಾಗಿತ್ತು. ಅದರಂತೆ ಎಸ್‌ಇಪಿ ಹಾಗೂ ಟಿಎಸ್‌ಪಿ ಅನುದಾನದಲ್ಲಿ ಪ್ರತಿ ಕಾಲೇಜಿಗೆ ೨೫ ಕೋಟಿಯಂತೆ ಒಟ್ಟು ೨೫೦ ಕೋಟಿ ಅನುದಾನ ವಿನಿಯೋಗಿಸಿ ಹಾವೇರಿ ಸೇರಿದಂತೆ ರಾಜ್ಯದ ೧೦ ಜಿಲ್ಲೆಗಳಲ್ಲಿ ಕಾಲೇಜು ಆರಂಭಿಸಲಾಯಿತು” ಎಂದರು.
“ಹಾವೇರಿಯಲ್ಲಿ ಈ ಮೊದಲು ಬೇರೆ ಬೇರೆ ಕಡೆಗಳಲ್ಲಿ ತರಗತಿ ನಡೆಸಿದ ಕಾಲೇಜು ಈಗ ತನ್ನದೇ ಆದ ಸುಸಜ್ಜಿತ ಕ್ಯಾಂಪಸ್‌ನಲ್ಲಿ ತರಗತಿ ಆರಂಭಿಸಿದೆ. ಆದರೆ, ಸರಿಯಾದ ನಿಯಮಗಳನ್ನ ರೂಪಿಸದ ಕಾರಣ ಏಳು ವರ್ಷ ಕಳೆದರೂ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆಯಾಗಿಲ್ಲ. ಈಗಂತೂ ಹಾವೇರಿ ತಾಲೂಕಿನ ಭೂವೀರಾಪುರದಲ್ಲಿ ನಿರ್ಮಾಣವಾಗಿರುವ ಕಾಲೇಜು ಕ್ಯಾಂಪಸ್‌ನಲ್ಲಿ ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕ ಹಾಸ್ಟೆಲ್ ಕಟ್ಟಡಗಳು ಸಿದ್ಧವಾಗಿ ಎರಡು ವರ್ಷ ಕಳೆದಿದೆ. ಆದರೂ ಸರ್ಕಾರ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗಿಲ್ಲ. ಅಲ್ಲದೇ ಈ ಕುರಿತು ಸರ್ಕಾರದಲ್ಲಿಯೇ ಇನ್ನೂ ಗೊಂದಲದಲ್ಲಿದೆ” ಎಂದು ಹೇಳಿದರು.
“ಒಂದು ಯೋಜನೆ ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ಘೋಷಣೆಯಾಗಿರುವ ಯೋಜನೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಎರಡನೇ ಬಾರಿ ಅಧಿಕಾರಕ್ಕೆ ಬಂದರೂ ಈಡೇರದಿರುವುದು ವಿಪರ್ಯಾಸವೇ ಸರಿ” ಅಸಮಾಧಾನ ವ್ಯಕ್ತಪಡಿಸಿದರು
ಕೂಡಲೇ ಸರ್ಕಾರ ನಿರ್ಮಾಣವಾಗಿರುವ ಸರ್ಕಾರಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಸತಿಯುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಯೀ ಶೀಘ್ರವಾಗಿ ಅಗತ್ಯ ಮೂಲಭೂತ ಸೌಕರ್ಯಗಳು, ಖಾಯಂ ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೆತರ ಸಿಬ್ಬಂದಿ ನೇಮಕಾತಿ ಸೇರಿದಂತೆ ಸ್ವಂತ ಕಟ್ಟಡದಲ್ಲಿಯೇ ವಸತಿ ಸೌಲಭ್ಯ ಪ್ರಾರಂಭಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶ ಮಾಡಿ ವಿದ್ಯಾರ್ಥಿಗಳ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕೆಂದು” ಆಗ್ರಹಿಸಿದರು.
ಎಸ್ಎಫ್ಐ ಮುಖಂಡರಾದ ಚೈತ್ರ ಕೊರವರ ಮಾತನಾಡಿ, “೨೦೧೭-೧೮ನೇ ಸಾಲಿನಲ್ಲಿ ಮಂಜೂರಾದ ಎಸ್ಸಿ/ಎಸ್ಟಿ ವಸತಿಯುತ ಪ್ರಥಮ ದರ್ಜೆ (ಡಿಗ್ರಿ) ಕಾಲೇಜುಗಳಲ್ಲಿ ಶೀಘ್ರವಾಗಿ ವಸತಿ ಸೌಲಭ್ಯ ಪ್ರಾರಂಭಿಸಬೇಕು, ಅಗತ್ಯವಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು, ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿಗಳನ್ನು ಖಾಯಂ ನೇಮಕಾತಿ ಮಾಡಬೇಕು, ಮಾದರಿ ವಸತಿಯುತ ಪದವಿ ಕಾಲೇಜುಗಳನ್ನು ಪ್ರತಿ ಜಿಲ್ಲೆಗೊಂದು ಮಂಜೂರು ಮಾಡಬೇಕು, ಪ್ರತ್ಯೇಕವಾದ ಸುಸಜ್ಜಿತ ಪ್ರಯೋಗಾಲಯಗಳು, ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್ ಸೇರಿದಂತೆ ನಿರ್ವಹಣೆಗಾಗಿ ಸಿಬ್ಬಂದಿ ನೇಮಕ ಮಾಡಬೇಕು, ಕ್ಯಾಂಪಸ್ ಗಳಲ್ಲಿ ಜೆರಾಕ್ಸ್ ಸೆಂಟರ್, ವಿದ್ಯಾರ್ಥಿ ಕ್ಯಾಂಟೀನ್ ಪ್ರಾರಂಭಿಸಬೇಕು” ಎಂದರು.
ವಿದ್ಯಾರ್ಥಿನಿ ಯಶೋಧಾ ಗುಳೇದ ಮಾತನಾಡಿ, “ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸಮಯಕ್ಕೆ ಸರಿಯಾಗಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಬೇಕು, ವಿದ್ಯಾರ್ಥಿನಿಯರ ಸುರಕ್ಷತೆಗಾಗಿ ಸಿ.ಸಿ ಕ್ಯಾಮರಾ ಸೇರಿದಂತೆ ಭದ್ರತೆಯನ್ನು ಒದಗಿಸಬೇಕ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಮುಖಂಡರಾದ ಅರುಣ್ ನಾಗವತ್, ಕಾಲೇಜ್ ಘಟಕ ಅಧ್ಯಕ್ಷ ಮಂಜುನಾಥ ಎಸ್, ಮುಖಂಡರಾದ ರಮೇಶ ತೋಟದ, ಮಹೇಶ್ ಮರೋಳ, ಗುದ್ಲೇಶ ಇಚ್ಚಂಗಿ, ದುರುಗಪ್ಪ ಬಿ, ಪ್ರವೀಣ್ ಪೂಜಾರ, ಹುಲಿಗೆಮ್ಮಕೆ, ಯಲ್ಲಮ್ಮ ಎ ಕೆ, ಮಧು ಎಸ್ ಕೆ, ಭಾಗ್ಯಲಕ್ಷ್ಮಿ ಡಿ ಹೆಚ್, ಜ್ಯೋತಿ ಕರೆಮ್ಮನವರ, ಶಿವನಗೌಡ್ರ, ಕುಸಮಾ ವಡ್ಡರ, ಚೈತ್ರ ಮಲ್ಲಕನಣ್ಣನರ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.