ವಿದ್ಯಾರ್ಥಿ ಸಮುದಾಯದ ವಿವಿಧ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕಾಗಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ) ಹಾವೇರಿ ತಾಲೂಕು ಸಮಿತಿಯಿಂದ ಸಭೆ ನಡೆಸಿದ್ದು, ಸರ್ಕಾರದ ವಿರುದ್ಧ ಹೋರಾಟ ಕೈಗೊಳ್ಳುವುದಾಗಿ ಕರೆ ನೀಡಿದೆ.
ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಕೃಷ್ಣ ನಾಯ್ಕ ಮಾತನಾಡಿ, “ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಎರಡು ತಿಂಗಳು ಕಳೆದರೂ ಕೂಡ ಜಿಲ್ಲೆಯಲ್ಲಿ ಹಾಸ್ಟೆಲ್‌ಗಳು, ಬಸ್ಸಿನ ಸಮಸ್ಯೆಗಳು ಪರಿಹಾರವಾಗಿಲ್ಲ. ವಿದ್ಯಾರ್ಥಿಗಳಿಗೆ ಅನುಕೂಲಕ್ಕೆ ತಕ್ಕಂತೆ ಬಸ್‌ಗಳಿಲ್ಲ, ಸಮಯಕ್ಕೆ ಬಸ್ ಬರುವುದಿಲ್ಲವೆಂದು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ವಿದ್ಯಾರ್ಥಿನಿಯರ ಉಚಿತ ಬಸ್ ಪಾಸ್ ಜತೆಗೆ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಬೇಕು” ಎಂದು ಒತ್ತಾಯಿಸಿದರು.
“ಹಾಸ್ಟೆಲ್‌ಗೆ ಅರ್ಜಿ ಹಾಕಿದ ವಿದ್ಯಾರ್ಥಿಗಳಿಗೆ ಇನ್ನೂ ಹಾಸ್ಟೆಲ್ ಪ್ರಾರಂಭವಾಗಿಲ್ಲದಿರುವುದು ದುರಂತವಾಗಿದೆ. ಈ ಹಿಂದೆ ಸರ್ಕಾರದ ವಿರುದ್ಧ ಅರ್ಜಿ ಹಾಕಿದ ಎಲ್ಲ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಒದಗಿಸಬೇಕು ಹಾಗೂ ನೂತನ ಹಾಸ್ಟೆಲ್ ಮಂಜೂರು ಮಾಡಬೇಕೆಂದು ಆಗ್ರಹಿಸಿ ಎಸ್ಎಫ್ಐ ನೇತೃತ್ವದಲ್ಲಿ ರಾಜ್ಯಾದ್ಯಂತ ನೆಡೆದ ವಿದ್ಯಾರ್ಥಿಗಳ ಪ್ರತಿಭಟನೆ ಪರಿಣಾಮವಾಗಿ ಇಡೀ ರಾಜ್ಯದಲ್ಲಿ ಹೆಚ್ಚುವರಿಯಾಗಿ ಹಾಸ್ಟೆಲ್‌ಗಳು ಮಂಜೂರಾಗಿವೆ. ಆದರೂ ರಾಜ್ಯ ಸರ್ಕಾರ, ಅರ್ಜಿ ಹಾಕಿದ ಎಲ್ಲ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಒದಗಿಸಲು ಮುಂದಾಗಿಲ್ಲ” ಎಂದು ಆರೋಪಿಸಿದರು.
“ಕಳೆದ ವರ್ಷದಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಲವರಿಗೆ ಬಂದಿಲ್ಲ. ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳಲ್ಲಿ ಡೊನೇಷನ್ ಹಾವಳಿ ವಿಪರೀತವಾಗಿದ್ದು, ಇದನ್ನು ತಡೆಯುವಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರ ವಿಫಲವಾಗಿದೆ. ಡೊನೇಷನ್ ಹಾವಳಿ ವಿರುದ್ಧ ಹೋರಾಟ ಮಾಡಲು ಹಾಗೂ ಡೊನೇಷನ್ ಹಾವಳಿ ನಿಯಂತ್ರಣ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಂತೆ ಒತ್ತಾಯಿಸಬೇಕು” ಎಂದು ತೀರ್ಮಾನಿಸಲಾಯಿತು.
“ಪ್ರಸಕ್ತ ವರ್ಷದಿಂದಲೇ ಕಾನೂನು ಮಹಾವಿದ್ಯಾಲಯ 3 ಮತ್ತು 5 ವರ್ಷದ ಕೋರ್ಸ್ ಪ್ರಾರಂಭಿಸಬೇಕು. ಜಿಲ್ಲಾ ಕೇಂದ್ರದ ನಗರದಲ್ಲೇ ಮುನ್ಸಿಪಲ್ ಮೈದಾನದಲ್ಲಿರುವ ಕಾಲೇಜು ಕಟ್ಟಡದಲ್ಲಿ ತರಗತಿಗಳನ್ನು ಪ್ರಾರಂಭ ಮಾಡಬೇಕು. ನೂತನ ಹಾವೇರಿ ವಿಶ್ವವಿದ್ಯಾಲಯ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಮಾಡಲು ಮುಂದಾಗಬೇಕು. ನಗರದ ಸರ್ಕಾರಿ ಮಹಿಳಾ ಕಾಲೇಜಿಗೆ ಬಸ್ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ನಗರ ಸಾರಿಗೆ ವ್ಯವಸ್ಥೆ ಪ್ರಾರಂಭಿಸಬೇಕು” ಎನ್ನುವಂತಹ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ರೂಪಿಸಲು ಎಸ್ಎಫ್ಐ ಕಾರ್ಯಕರ್ತರು ಚರ್ಚೆ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಬೈಂದೂರು ಸೋಮೇಶ್ವರ, ದೊಂಬೆ ಕರಾವಳಿ ಮಾರ್ಗ ಕೆಎಸ್ಸಾರ್ಟಿಸಿ ಬಸ್ಸಿಗಾಗಿ ಪ್ರತಿಭಟನೆ
“ಹಾಸ್ಟೆಲ್ ವಿದ್ಯಾರ್ಥಿಗಳ ಮೂಲಭೂತ ಸೌಕರ್ಯಗಳ ಕೊರತೆ, ಶೈಕ್ಷಣಿಕ ಸಮಸ್ಯೆಗಳ ಹಾಗೂ ಶೈಕ್ಷಣಿಕ ವರ್ಷದ ಶಾಲಾ-ಕಾಲೇಜು ಪ್ರವೇಶದ ಜತೆಗೆ ಏಕಕಾಲಕ್ಕೆ ವಸತಿ ನಿಲಯಗಳನ್ನು ಪ್ರಾರಂಭಿಸುವುದು ಸೇರಿದಂತೆ ವಿದ್ಯಾರ್ಥಿ ಸಮುದಾಯದ ವಿವಿಧ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕಾಗಿ ಎಸ್ಎಫ್ಐ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಕಾಲೇಜು-ಹಾಸ್ಟೆಲ್ ಮುಖಂಡರು ಸುದೀರ್ಘ ಚರ್ಚೆ ನಡೆಸಿ ಹೋರಾಟಕ್ಕೆ ಕರೆ ನೀಡಲಾಗಿದೆ” ಎಂದು ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಮುಖಂಡ ಅರುಣ ಕುಮಾರ ಎನ್, ವೈಶಾಲಿ ಎನ್, ಲಕ್ಷ್ಮೀ, ಅಕ್ಷತಾ ಹೆಚ್, ಸೌಮ್ಯಾ ಪೂಜಾರ್, ಚೈತ್ರ ಕೊರವರ್, ಸ್ಪೂರ್ತಿ ಮಾಳಗಿ, ಅನಿತಾ ಎಂ, ಸೀಮಾ ಬೂದಿಹಾಳ, ಹಜ್ರತ್ ವಿ, ವಿಕಾಸ್ ಗೌಡ, ವಿಮಲ್ ನಾಥ್, ಸಂಪದ ಜಿ, ನಝಮೀನ್ ಎನ್ ಸಭೆಯಲ್ಲಿ ಇದ್ದರು.