“ಮಹಾತ್ಮಾ ಗಾಂಧೀಜಿ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರಿಯವರು, ದೇಶ ಕಂಡ ಧೀಮಂತ ನಾಯಕರು. ಅವರ ಆಚಾರ -ವಿಚಾರ, ಜೀವನ ಚರಿತ್ರೆ ಇಂದಿಗೂ ಪ್ರಸ್ತುತ” ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಹೇಳಿದರು.
ಹಾವೇರಿಯ ಗಾಂಧಿಭವನದಲ್ಲಿ ಜಿಲ್ಲಾಡಳಿತದಿಂದ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮ ನಡೆಸಲಾಯಿತು. ನಗರಸಭೆ ಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಮಾತನಾಡಿ, “ಗಾಂಧೀಜಿ ಅವರು ಅಹಿಂಸಾ ಹಾಗೂ ಸತ್ಯಾಗ್ರಹ ಮಾರ್ಗದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು. ಮನುಷ್ಯ ನಿರ್ಮಾಣ ಮಾಡಿದ ಆಯುಧಕ್ಕಿಂತ ಹರಿತವಾದ ಆಯುಧ ಅಹಿಂಸಾ ಮಾರ್ಗವೆಂದು ಸಾರಿದರು. ಆದರೆ, ಇಂದು ಭಯೋತ್ಪಾದನೆ ಹಾಗೂ ಯುದ್ಧದ ಭೀತಿಯಿದೆ. ಇಂಥ ಹಿಂಸಾತ್ಮಕ ಕೃತ್ಯಗಳಿಂದ ಏನನ್ನೂ ಸಾಧಿಸಲಾಗದು” ಎಂದು ಹೇಳಿದರು.
“ಲಾಲ್ ಬಹದ್ದೂರ ಶಾಸ್ತ್ರಿ ಅವರು ದೇಶ ಕಂಡ ಸರಳ ಪ್ರಧಾನ ಮಂತ್ರಿಗಳಾಗಿದ್ದರು. ‘ಜೈ ಜವಾನ್ ಜೈ ಕಿಸಾನ್’ ಎಂಬ ಘೋಷವಾಕ್ಯದೊಂದಿಗೆ ರೈತರು ಹಾಗೂ ಯೋಧರನ್ನು ಹುರಿದುಂಬಿಸಿದವರು. ಗಾಂಧೀಜಿ ಹಾಗೂ ಶಾಸ್ತ್ರಿಯವರ ಆದರ್ಶ ಮಾರ್ಗದಲ್ಲಿ ನಾವೆಲ್ಲರೂ ಮುನ್ನಡೆಯಬೇಕು. ಅವರ ತತ್ವ-ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ರಾಷ್ಟ್ರಭಕ್ತಿ ಹೊಂದಬೇಕು” ಎಂದು ಹೇಳಿದರು.