“ನೀಟ್ ಹಗರಣದ ವಿರುದ್ಧ ನ್ಯಾಯಕ್ಕಾಗಿ ಪ್ರತಿಭಟಿಸಿದ ವಿದ್ಯಾರ್ಥಿ ಯುವಜನರ ಮೇಲಿನ ಅಮಾನುಷ ದಾಳಿಯನ್ನು ಖಂಡಿಸಿ ಹಾಗೂ ನೀಟ್ ಪ್ರಶ್ನೆ ಪತ್ರಿಕೆ ಹಗರಣವನ್ನು ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್ಐ) ವತಿಯಿಂದ ಇಂದು ಹಾವೇರಿ ಪಟ್ಟಣದ ಬಸವೇಶ್ವರ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿಸಿ ಮಾರ್ಕೆಟ್ ರಸ್ತೆ, ಗಾಂಧಿ ಸರ್ಕಲ್, ಹೊಸಮನಿ ಸಿದ್ದಪ್ಪ ಸರ್ಕಲ್ ಮೂಲಕ ಮೈಲಾರ ಮಹದೇವಪ್ಪ ಪ್ರತಿಮೆ ಎದುರು ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, “ನೀಟ್ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ನಿರ್ವಹಣೆ ವೈಫಲ್ಯ, ಅಕ್ರಮ ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ, ನವದೆಹಲಿಯ ಜಂತರ್ ಮಂತರ್‌ನಲ್ಲಿ ಖ್ಯಾತ ಪರಿಸರ, ಶಿಕ್ಷಣ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಹೋರಾಟಗಾರರು ಸೋನಂ ವಾಂಗ್ಚುಕ್ ಮತ್ತು ಹಲವಾರು ವಿದ್ಯಾರ್ಥಿಗಳು ಹಾಗೂ ಯುವಜನರು ಕಳೆದ 22 ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದಾರೆ. ಕೇಂದ್ರ ಬಿಜೆಪಿ ಸರಕಾರ ಇಂತಹ ಗಂಭೀರ ವಿಷಯಕ್ಕಾಗಿ ಅವರೊಂದಿಗೆ ಮಾತುಕತೆ ನಡೆಸುವ ಸೌಜನ್ಯ ತೋರದೆ ಅಸಡ್ಡೆ ತೋರುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಪ್ರಜಾಸತ್ತಾತ್ಮಕ ನೆಲೆಯಲ್ಲಿ ಅನಿರ್ದಿಷ್ಟಾವಧಿ ಉಪವಾಸ ನಿರತರಾಗಿದ್ದ ಸೋನಂ ವಾಂಗ್ಚುಕ್ ಅವರನ್ನು ದಾಷ್ಟ್ಯದಿಂದ ಬಲವಂತವಾಗಿ ವಶಕ್ಕೆ ತೆಗೆದುಕೊಂಡಿತು. ಅಲ್ಲದೇ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿ ಯುವಜನರ ಮೇಲೆ ಪೋಲಿಸರನ್ನು ಛೂ ಬಿಟ್ಟು ಟಿಯರ್ ಗ್ಯಾಸ್, ಮನಬಂದಂತೆ ಲಾಠಿ ಚಾರ್ಜ್ ನಡೆಸಿ ಅತ್ಯಂತ ಅಮಾನುಷವಾಗಿ ಕ್ರೌರ್ಯ ಮೆರೆಯಿತು. ಕೇಂದ್ರ ಬಿಜೆಪಿ ಸರಕಾರದ ಈ ಕ್ರೌರ್ಯವನ್ನು ಎಸ್ಎಫ್ಐ-ಡಿವೈಎಫ್ಐ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ” ಎಂದರು.
“ಹೋರಾಟ ನಡೆಸುತ್ತಿದ್ದ ಅಭಿಜಿತ್ ಚೀಪ್ಕೆ, ಅಶುತೋಷ್ ರಂಕಾ ಹಾಗೂ ಸೌರವ್ ದಾಸ್ ಅವರನ್ನು ಕೇಂದ್ರ ಸಚಿವ ಜಿ.ಪಿ ನಡ್ಡಾ ಅವರ ಮನೆಗೆ ಕುತಂತ್ರದಿಂದ ಮಾತುಕತೆಗೆ ಕರೆದು ಐದು ತಾಸು ಗೃಹ ಬಂಧನದಲ್ಲಿ ಕೂಡಿಹಾಕಿ, ಅದೇ ಸಂದರ್ಭದಲ್ಲಿ ಜಂತರ್ ಮಂತರ್ ನಲ್ಲಿ ಪ್ರತಿಭಟಿಸುತ್ತಿದ್ದವರ ಮೇಲೆ ಬ್ರಿಟೀಷ ಸರಕಾರಕ್ಕಿಂತ ಕಡೆಯಾಗಿ ಕ್ರೂರ ಧಾಳಿ ನಡೆಸಿದ್ದು ಅಕ್ಷಮ್ಯ” ಎಂದು ಕಿಡಿಕಾರಿದರು.
“ಈ ವಿಷಯದಲ್ಲಿ ಮಧ್ಯೆಪ್ರವೇಶಿಸಿ ಸಮಸ್ಯೆ ಪರಿಹರಿಸಲು ರಾಷ್ಟ್ರಪತಿಗಳಾದ ಗೌರವಾನ್ವಿತ ದ್ರೌಪದಿಮುರ್ಮು ಅವರಿಗೆ ಜುಲೈ 16ರಂದು ಮತ್ತು ಅದಕ್ಕೂ ಮೊದಲು ರಾಷ್ಟ್ರವ್ಯಾಪಿ ಜನತೆ ಆಗ್ರಹಿಸಿದರೂ ರಾಷ್ಟ್ರಪತಿಯವರು ಕನಿಷ್ಠ ಸಂವೇದನೆಯಿಂದ ಸ್ಪಂದಿಸದ ಅವರ ನಡೆಯನ್ನು ಖಂಡಿಸುತ್ತೇವೆ” ಎಂದರು.
ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, “21 ಜನ ವಿದ್ಯಾರ್ಥಿಗಳ ಪ್ರಾಣಾಹುತಿ ನಡೆದರೂ, ಈ ಅಕ್ರಮ ತಡೆಯಲು ಯಾವುದೇ ಕ್ರಮ ಕೈಗೊಳ್ಳದೇ ಸಂಪೂರ್ಣ ವಿಫಲವಾಗಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸದೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ನೀಟ್ ಹಗರಣದಲ್ಲಿ ತನ್ನ ಸರಕಾರದ ಕೈವಾಡ ಇದೆ ಎಂಬುದನ್ನು ಸಾಬೀತುಗೊಳಿಸಿದ್ದಾರೆ. ಇದೀಗ ನೀಟ್ ಪ್ರಶ್ನೆ ಪತ್ರಿಕೆ ಘೋರ ಪಾಪ ಎಂದು ಅನುಕಂಪದ ಮಾತುಗಳನ್ನಾಡುತ್ತಿರುವುದು ಪ್ರಧಾನಿಯವರ ಆತ್ಮವಂಚನೆಯಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಪದೇ ಪದೇ ಸಂಭವಿಸುತ್ತಿರುವ ನೀಟ್ ಹಗರಣದ ವೈಫಲ್ಯಗಳಿಗೆ ಕೇವಲ ಅಧೀನ ಅಧಿಕಾರಿಗಳು ಅಥವಾ ಪರೀಕ್ಷಾ ಸಂಸ್ಥೆಗಳನ್ನು ಮಾತ್ರ ಹೊಣೆಗಾರರನ್ನಾಗಿ ಮಾಡುವುದು ಕೇಂದ್ರ ಸರಕಾರದ ಆತ್ಮ ವಂಚನೆಯ ನಡೆಯಾಗುತ್ತದೆ. ಆಡಳಿತಾತ್ಮಕ ಮತ್ತು ರಾಜಕೀಯ ಹೊಣೆಗಾರಿಕೆಯನ್ನು ನ್ಯಾಯ ಸಮ್ಮತ ಹಾಗೂ ಪಾರದರ್ಶಕ ಪ್ರಕ್ರಿಯೆಯ ಮೂಲಕ ನಿರ್ಧರಿಸುವಂತಾಬೇಕು. ಹಾಗಾಗಿ ಪರೀಕ್ಷಾ ಅಕ್ರಮಗಳ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪಡೆಯಲೇಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ಪರಿಮಳ ಜೈನ್ ಮಾತನಾಡಿ, “ಶಾಂತಿಯುತವಾಗಿ ಉಪವಾಸ ಧರಣಿ ನಡೆಸುತ್ತದ್ದ ಸೋನಂ ವಾಂಗ್ಚುಕ್ ಅವರನ್ನು ಬಲವಂತವಾಗಿ ವಶಕ್ಕೆ ತೆಗೆದುಕೊಂಡಿದ್ದಕ್ಕೆ ಅವರ ಕುಟುಂಬಕ್ಕೆ ಹಾಗೂ ದೇಶದ ಕ್ಷಮೆಯಾಚಿಸಿ ಕೂಡಲೇ ಅವರನ್ನು ಅವರ ಕುಟುಂಬದ ಸುಪರ್ದಿಗೆ ನೀಡಬೇಕು” ಎಂದರು.
ಎಸ್ಎಫ್ಐ ಕಾಲೇಜ್ ಘಟಕ ಅಧ್ಯಕ್ಷೆ ಚೈತ್ರಾ ಕೊರವರ ಮಾತನಾಡಿದರು. ಪ್ರತಿಭಟನೆಯಲ್ಲಿ ಸಾಮಾಜಿಕ ಹೋರಾಟಗಾರರು ಮುಖಂಡರು ಸಂಜಯ್ ಗಾಂಧಿ, ಖಾದರ್ ಧಾರವಾಡ, ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯೆ ರೇಣುಕಾ ಕಹರ, ಮುಖಂಡರಾದ ಖಲಂದರ್ ಅಲ್ಲಿಗೌಡ್ರು, ಎಸ್ಎಫ್ಐ ಜಿಲ್ಲಾ ಮುಖಂಡ ಅರುಣ್ ಕುಮಾರ ನಗವತ್, ಭವ್ಯ ಓಲೇಕಾರ್, ಸುನೀತಾ ಮಾದರ, ಸಂಗೀತ ಆರ್ ಸಿ, ರಂಜಿತ ಆಲೂರ, ಜಾಸ್ಮಿನ್, ರಕ್ಷಿತಾ ಎಸ್, ರಾಜೇಶ್ವರಿ ಎಸ್ ಎಮ್, ನಾಗಿನ್ ನದಾಫ್, ವಿನಾಯಕ ಲಮಾಣಿ, ಲೋಹಿತ್ ಹರಿಜನ, ಸಂದೀಪ್ ಪವಾರ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.





