ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು, ವಿದ್ಯಾರ್ಥಿ ಸಂಘಟನೆಗಳ ಚುನಾವಣೆ ನಡೆಸಲು, ಕೋಮು ಸೌಹಾರ್ದತೆಗಾಗಿ, ಸಂವಿಧಾನದ 371(ಜೆ) ಕಲಂ ಸಮರ್ಪಕವಾಗಿ ಜಾರಿಗಾಗಿ ಕಲಬುರಗಿಯಲ್ಲಿ ನಡೆಯುವ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್.ಎಫ್.ಐ) ಸಂಘಟನೆಯ 17ನೇ ರಾಜ್ಯ ಸಮ್ಮೇಳನದ ಲೋಗೋವನ್ನು ಹಾವೇರಿ ಪಟ್ಟಣದ ಶಿವಾಜಿ ನಗರದಲ್ಲಿರುವ ಎಸ್ಎಫ್ಐ-ಡಿವೈಎಫ್ಐ ಕಚೇರಿ ಎದುರಿಗೆ ಬಿಡುಗಡೆ ಮಾಡಿ ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಬಸವರಾಜ ಎಸ್ ಮಾತನಾಡಿದರು.
ದೇಶದಲ್ಲಿ ಆಳುವ ವರ್ಗಗಳ ಪರವಾದ ಶಿಕ್ಷಣ ನೀತಿಗಳು ರೂಪಗೊಂಡು ಕಾರ್ಪೊರೇಟ್ ಸಂಸ್ಥೆಗಳ ಕೈಗೆ ಶಿಕ್ಷಣ ಸಿಕ್ಕು ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮರೀಚಿಕೆಯಾಗುತ್ತಿದೆ. ಉದ್ಯೋಗವಿಲ್ಲದೆ ನಾಡಿನ ವಿದ್ಯಾರ್ಥಿ-ಯುವಜನರು ಜಾತಿ ಗಲಭೆ, ಕೋಮು ಪ್ರಚೋದನೆ ಮತ್ತು ಮೌಡ್ಯತೆಗಳಿಗೆ ಬಲಿಯಾಗುತ್ತಿದ್ದಾರೆ. ಇದರ ವಿರುದ್ಧ ಎಸ್ಎಫ್ಐ ಬಲಿಷ್ಟ ಚಳುವಳಿ ನಡೆಸುತ್ತಿದೆ ಹಾಗೂ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ GenZ ಗಳ ಹೋರಾಟಕ್ಕೆ ಎಸ್ಎಫ್ಐ ನೇತೃತ್ವ ವಹಿಸಿ ಯಶಸ್ವಿ ಹೋರಾಟ ಮಾಡಿ, ದೇಶಕ್ಕೆ ಮಾದರಿಯನ್ನು ಸೃಷ್ಟಿ ಮಾಡಿದೆ.
NEET, NTA(NET), UGCET, PGCET, KPSC ಪ್ರಶ್ನೆಪತ್ರಿಕಗಳ ಸೋರಿಕೆಯ ವಿರುದ್ಧ ಬೃಹತ್ ಹೋರಾಟವನ್ನು ನಡೆಸಿದೆ. “ಸಾರ್ವಜನಿಕ ಶಿಕ್ಷಣ ಉಳಿಸಿ, ಹಾಸ್ಟೆಲ್ ಬಲಪಡಿಸಿ” ಎನ್ನುವ ಘೋಷಣೆಯೊಂದಿಗೆ ರಾಜ್ಯದಾದ್ಯಂತ ಶೈಕ್ಷಣಿಕ ಜಾಥ ಮಾಡಿ, ಬೆಳಗಾವಿಯ ಸುವರ್ಣಸೌಧ ಚಲೋ ಮಾಡುವ ಮೂಲಕ KPS ಮಾಗ್ನಟ್ ಶಾಲೆಗಳ ಹೆಸರಿನಲ್ಲಿ ಕನ್ನಡ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದರ ವಿರುದ್ಧ, ಶಿಕ್ಷಕರ (GPSTR, HSTR) ನೇಮಕಾತಿ, ಶಿಷ್ಯವೇತನ, ಫೆಲೋಶಿಪ್, ಸಂಶೋಧನಾ ಸಹಾಯಧನ, ಸರ್ಕಾರಿ ಶಾಲೆಗಳ ಆಸ್ತಿಯನ್ನು ಅಕ್ರಮಿಸಿಕೊಂಡಿದ್ದವರ ವಿರುದ್ಧ ರಾಜಿ ಇಲ್ಲದ ಹೋರಾಟವನ್ನು ಮಾಡಿದೆ.
ಈ ದಿಶೆಯಲ್ಲಿ ದೇಶದ ಅತಿ ದೊಡ್ಡ ವಿದ್ಯಾರ್ಥಿ ಸಂಘಟನೆಯಾದ ಎಸ್ಎಫ್ಐನ 17ನೇ ರಾಜ್ಯ ವಿದ್ಯಾರ್ಥಿಗಳ ಸಮ್ಮೇಳನವು ಅಕ್ಟೋಬರ್ 30, 31 ಮತ್ತು ನವೆಂಬರ್ 01, 2026 ಕಲಬುರಗಿಯ ಕೆಪಿಟಿಸಿಎಲ್ ಭವನ ಕರುಣೇಶ್ವರ ನಗರದಲ್ಲಿ ಮೂರು ದಿನಗಳ ಕಾಲ ನಡೆಯಲಿದೆ. ಅಕ್ಟೋಬರ್ 30, ಶುಕ್ರವಾರದಂದು ಕಲಬುರಗಿ ನಗರದಲ್ಲಿ ಬೃಹತ್ ವಿದ್ಯಾರ್ಥಿಗಳ ಮೆರವಣಿಗೆ ಮತ್ತು ಜಗತ್ ಸರ್ಕಲ್ ನಲ್ಲಿ ಬಹಿರಂಗ ಸಭೆ ನಡೆಯಲಿದೆ
SFI ನ 17ನೇ ರಾಜ್ಯ ಸಮ್ಮೇಳನದ ಬಹಿರಂಗ ಸಭೆಯನ್ನು ರಾಷ್ಟ್ರೀಯ ಅಧ್ಯಕ್ಷರಾದ ಆದರ್ಶ ಎಂ ಸಾಜಿ ಅವರು ಉದ್ಘಾಟಿಸಲಿದ್ದಾರೆ. ಹಾಗೂ ಮುಖ್ಯ ಭಾಷಣಕಾರರಾಗಿ ದೇಶದ ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ ಹೋರಾಟದ ರೂವಾರಿಗಳಲ್ಲಿ ಒಬ್ಬರಾದ ಎಸ್ಎಫ್ಐ ನ ರಾಷ್ಟ್ರೀಯ ಜಂಟಿ ಕಾರ್ಯದರ್ಶಿಯಾದ ಆಯಿಷಿ ಘೋಷ್ ಅವರು ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ .ರಾಜ್ಯಾಧ್ಯಕ್ಷರಾದ ಶಿವಪ್ಪ ಅಂಬ್ಲಿಕಲ್ ಅಧ್ಯಕ್ಷತೆ ವಹಿಸಲಿದ್ದಾರೆ, ಪ್ರಾಸ್ತಾವಿಕವಾಗಿ ರಾಜ್ಯ ಕಾರ್ಯದರ್ಶಿ ವಿಜಯ್ ಕುಮಾರ್ ಮಾತನಾಡಲಿದ್ದಾರೆ. ಪದಾಧಿಕಾರಿಗಳು, ರಾಜ್ಯ ಸಮಿತಿ ಸದಸ್ಯರು ಹಾಗೂ ನಾಡಿನ ಶಿಕ್ಷಣ ತಜ್ಞರು, ಸಾಹಿತಿಗಳು, ಪ್ರಗತಿಪರ ಚಿಂತಕರು ಮತ್ತು ಹೋರಾಟಗಾರರು ಜೊತೆಯಾಗಲಿದ್ದಾರೆ. ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಣ ಪ್ರೇಮಿಗಳು ಈ ಬಹಿರಂಗ ಸಭೆಯ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆಂದು ಮನವಿ ಮಾಡುತ್ತೆವೆ ಎಂದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ನಗವತ್, ಕಾರ್ಯದರ್ಶಿ ಚೈತ್ರಾ ಕೊರವರ, ಉಪಾಧ್ಯಕ್ಷ ಶಂಭುಲಿಂಗ ಸವದತ್ತಿ, ಪರಶುರಾಮ ಎಸ್, ಮುಖಂಡರಾದ ಕಾಂತೇಶ್ ಹಳ್ಳೇರ, ಪ್ರವೀಣ್ ಮಟ್ಟೆರ್, ಧನುಷ್ ದೊಡ್ಡಮನಿ, ಮೈನುದೀನ್ ಇಲಿಬುಡ್ಡಿ ಉಪಸ್ಥಿತರಿದ್ದರು.





