‘ಧರ್ಮಸ್ಥಳದಲ್ಲಿ ನೂರು ಕಳೇಬರ ಸಿಗೋದು ಪಕ್ಕಾ’: ವಿಠ್ಠಲಗೌಡ ಬಿಚ್ಚಿಟ್ಟ ಸ್ಫೋಟಕ ಸತ್ಯಗಳೇನು?

Date:

Advertisements

“ಇದು ಸರಿಯಾಗಿ ತನಿಖೆಯಾಗಬೇಕು. ಇಲ್ಲ ಅಂದರೆ ಒಂದಲ್ಲ, ಹತ್ತು ಬುರುಡೆಗಳನ್ನು ಸುಪ್ರೀಂಕೋರ್ಟ್ನ ಅಂಗಳದಲ್ಲಿ ಇಡಲು ನಾನು ಸಿದ್ಧವಿದ್ದೇನೆ” ಎಂದು ವಿಠ್ಠಲಗೌಡ ಹೇಳಿದ್ದಾರೆ

“ಅರ್ಧಗಂಟೆಯ ಮಹಜರಿನಲ್ಲಿ ಎಂಟು ಕಳೇಬರ ಸಿಕ್ಕಿವೆ. ಸರಿಯಾಗಿ ತನಿಖೆ ನಡೆಸಿದರೆ ನೂರಕ್ಕೂ ಹೆಚ್ಚು ಕಳೇಬರಗಳು ಸಿಗುವುದು ಖಚಿತ” ಎಂದು ಸೌಜನ್ಯ ಅವರ ಮಾವ, ಹೋರಾಟಗಾರ ವಿಠ್ಠಲಗೌಡ ಹೇಳಿದ್ದಾರೆ.

‘ಕುಡ್ಲಾರಾಮ್ಪೇಜ್’ ಯೂಟ್ಯೂಬ್ ಚಾನೆಲ್ನ ‘ಅಜಯ್ ಅಂಚನ್’ ಅವರು ನಡೆಸಿರುವ ವಿಶೇಷ ಸಂದರ್ಶನದಲ್ಲಿ ಹಲವು ಸ್ಫೋಟಕ ಸಂಗತಿಗಳನ್ನು ಎಳೆಎಳೆಯಾಗಿ ಹಂಚಿಕೊಂಡಿರುವ ವಿಠ್ಠಲಗೌಡರು, ‘ಧರ್ಮಸ್ಥಳದಲ್ಲಾದ ಅಸಹಜ ಸಾವುಗಳ ಪ್ರಕರಣ’ಕ್ಕೆ ದೊಡ್ಡ ತಿರುವು ನೀಡಿದ್ದಾರೆ. ‘ಬುರುಡೆ ಸಿಗಲೇ ಇಲ್ಲ’ ಎಂದು ಅಪಪ್ರಚಾರ ಮಾಡುತ್ತಿದ್ದವರು ಸದ್ಯ ಮೌನಕ್ಕೆ ಸಂದಿದ್ದಾರೆ.

ದೂರುದಾರ ಚಿನ್ನಯ್ಯ ಮರು ಸಂಪರ್ಕಕ್ಕೆ ಬಂದದ್ದು, ಶವ ಹೂತ ಸ್ಥಳಗಳನ್ನು ತೋರಿಸಿದ್ದು, ಹತ್ತಾರು ವರ್ಷಗಳಿಂದ ತಾವು ಕಂಡಿದ್ದು ಎಲ್ಲವನ್ನೂ ಹಂಚಿಕೊಂಡಿರುವ ವಿಠ್ಠಲಗೌಡರು, ತಾವು ಸ್ಥಳ ಮಹಜರಿನ ವೇಳೆ ಕಂಡ ಭೀಕರ ಸಂಗತಿಗಳನ್ನು ಹೊರಗಿಟ್ಟಿದ್ದಾರೆ.

“ಧರ್ಮಸ್ಥಳ ಸ್ನಾನಘಟ್ಟದಲ್ಲಿ ನಮ್ಮದೊಂದು ಅಂಗಡಿ ಇತ್ತು. ಸ್ವಚ್ಛತಾ ಕಾರ್ಮಿಕರಾದ ಚಿನ್ನಯ್ಯ, ಮಾರ, ತೆನಸಿ, ಸುಬ್ರಮಣ್ಯ ಇವರೆಲ್ಲರೂ ಬರುತ್ತಿದ್ದರು. ಪಂಚಾಯಿತಿಗೂ ಇವರಿಗೂ ಸಂಬಂಧವೇ ಇಲ್ಲ. ಹೆಣ ಹೂತು ಹಾಕಲು ಐವತ್ತು ರೂಪಾಯಿಯನ್ನು ಧರ್ಮಸ್ಥಳದ ಮಾಹಿತಿ ಕಚೇರಿಯವರು ಕೊಡುತ್ತಾರೆ ಅಂತ ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು. ಅಲ್ಲಿ ಹೆಣ ಹೂತು ಹಾಕಿದ್ದೇವೆ, ಇಲ್ಲಿ ಹೆಣ ಹೂತು ಹಾಕಿದ್ದೇವೆ ಎಂದು ತಿಳಿಸುತ್ತಿದ್ದರು. ಅವರು ಹೇಳದಿದ್ದರೂ ಮುಂಚಿನಿಂದಲೂ ಕೆಲವು ವಿಷಯ ಗೊತ್ತಿತ್ತು. ನೇತ್ರಾವತಿ ಸ್ನಾನಘಟ್ಟದಲ್ಲಿದ್ದ ನಮ್ಮ ಅಂಗಡಿ ಓಪನ್ ಮಾಡುತ್ತಿದ್ದದ್ದೇ ಮುಂಜಾನೆ ಮೂರು ಅಥವಾ ನಾಲ್ಕು ಗಂಟೆಗೆ. ರಸ್ತೆ ಬದಿಯಲ್ಲಿ ಮಹಿಳೆಯರದ್ದು, ಯುವತಿಯರದ್ದು ಮೃತ ದೇಹ ಸಿಗುತ್ತಿದ್ದನ್ನು ನೋಡಿದ್ದೇವೆ. ಸೌಜನ್ಯ ಮೃತದೇಹ ಸಿಕ್ಕಲ್ಲೇ ಶವಗಳು ಪತ್ತೆಯಾಗಿದ್ದು ಕಂಡಿದ್ದೇವೆ” ಎಂದಿದ್ದಾರೆ ವಿಠ್ಠಲಗೌಡ.

“ಇವರು ಹೇಳುತ್ತಿದ್ದ ಮಾಹಿತಿ ಕಚೇರಿಯು ಧರ್ಮಸ್ಥಳ ವ್ಯವಸ್ಥಾಪಕರಿಗೆ ಸೇರಿದೆ. ಪಂಚಾಯತಿಯವರು ಹೆಣ ಹೂತು ಹಾಕುವಲ್ಲಿಗೆ ಭೇಟಿ ನೀಡಿದ್ದನ್ನು ಒಮ್ಮೆಯೂ ನೋಡಿಲ್ಲ. ಪೊಲೀಸರು ಒಮ್ಮೊಮ್ಮೆ ಬರುತ್ತಿದ್ದರಷ್ಟೇ. ಹೆಣ ಹೂತು ಹಾಕಿದ್ದನ್ನು ನಾನು ಕಂಡಿದ್ದೇನೆ. ನಾನಷ್ಟೇ ಅಲ್ಲ, ಧರ್ಮಸ್ಥಳದ ನಾಗರಿಕರಿಗೆಲ್ಲ ಗೊತ್ತಿದೆ. ಮುಂದೆ ಬರಲು ಹೆದರುತ್ತಾರಷ್ಟೇ. ಹೆಣ್ಣುಮಕ್ಕಳಿಗೆ, ಸೌಜನ್ಯಳಿಗೆ ನ್ಯಾಯ ದೊರಕಬೇಕು, ಕ್ಷೇತ್ರದ ಹೆಸರು ಹಾಳಾಗಬಾರದು ಎಂಬುದು ನಮ್ಮ ಉದ್ದೇಶ. ಧರ್ಮಸ್ಥಳ ಎಂದಿಗೂ ಧರ್ಮಸ್ಥಳವಾಗಿರಬೇಕು ಎಂಬುದು ನಮ್ಮ ಭಾವನೆ” ಎಂದು ತಿಳಿಸಿದ್ದಾರೆ.

ಚಿನ್ನಯ್ಯ ಮರುಸಂಪರ್ಕಕ್ಕೆ ಬಂದ ಬಗ್ಗೆ ವಿವರಿಸಿರುವ ಅವರು, “2023ರಲ್ಲಿ ಒಂದು ರಾತ್ರಿ ಚಿನ್ನಯ್ಯ ಮೊದಲಿಗೆ ಕರೆ ಮಾಡಿದ. ನನಗೆ ಗುರುತು ಸಿಗಲಿಲ್ಲ. ‘ಧರ್ಮಸ್ಥಳದಲ್ಲಿ ಕೆಲಸ ಮಾಡ್ತಾ ಇದ್ದ ಚಿನ್ನಯ್ಯ ನಾನು. ನೀವು ದೊಡ್ಡ ಹೋರಾಟ ಮಾಡುತ್ತಿರುವುದನ್ನು ಯೂಟ್ಯೂಬ್ಗಳಲ್ಲಿ ನೋಡುತ್ತಿದ್ದೇನೆ. ನಾನು ಸಾಕಷ್ಟು ಹೆಣ್ಣುಮಕ್ಕಳ ಹೆಣಗಳನ್ನು ಹೂತು ಹಾಕಿದ್ದೇನೆ. ನದಿಯ ಮುಂದೆ, ರಸ್ತೆ ಪಕ್ಕದಲ್ಲಿ ಹಾಕೋದನ್ನು ನೀವು ನೋಡಿದ್ದೀರಿ. ನನಗೆ ರಕ್ಷಣೆ ಕೊಟ್ಟರೆ ಬಂದು ಹೇಳುತ್ತೇನೆ. ತನಿಖೆ ಮಾಡಲು ಸಹಕಾರ ಕೊಡುತ್ತೇನೆ’ ಎಂದ. ಹಾಗಾದರೆ ಪೊಲೀಸರಿಗೆ ದೂರು ಕೊಟ್ಟು, ಕೋರ್ಟ್ನಲ್ಲಿ ಹೇಳಿಕೆ ದಾಖಲಿಸಬೇಕು ಎಂದು ತಿಳಿಸಿದ್ದೆ. ಆನಂತರ ದೂರು ನೀಡಿದ” ಎಂದು ಹೇಳಿದ್ದಾರೆ.

“ಯಾವ ಜಾಗಗಳಲ್ಲಿ ಹೂತು ಹಾಕಿರುವುದಾಗಿ ಚಿನ್ನಯ್ಯ ನಿಮಗೆ ತೋರಿಸಿದ್ದಾನೆ. ಬರೀ ಬಂಗ್ಲೆಗುಡ್ಡೆ ಮಾತ್ರವಾ? ಬೇರೆ ಜಾಗ ಇದೆಯೇ?” ಎಂದು ‘ಅಜಯ್ ಅಂಚನ್’ ಪ್ರಶ್ನಿಸುತ್ತಾರೆ. “ಹೆಸರು ಹೇಳಿದರೆ ತನಿಖೆಗೆ ತೊಂದರೆಯಾಗುತ್ತದೆ. ಬಂಗ್ಲೆಗುಡ್ಡ ಬಿಟ್ಟು ಬೇರೆ ಜಾಗಗಳನ್ನೂ ಚಿನ್ನಯ್ಯ ತಿಳಿಸಿದ್ದಾನೆ. ಎಸ್ಐಟಿಯವರು ಕೇಳಿದರೆ ಖಂಡಿತವಾಗಿಯೂ ತೋರಿಸುತ್ತೇನೆ. ಯಾಕೆಂದರೆ ನ್ಯಾಯ ಸಿಗಬೇಕು, ಯಾರು ಈ ಕೃತ್ಯಗಳನ್ನು ಮಾಡಿದ್ದಾರೆಂಬುದು ಗೊತ್ತಾಗಬೇಕು, ಅವರಿಗೆ ಶಿಕ್ಷೆಯಾಗಬೇಕು. ಸೌಜನ್ಯಳನ್ನು ಕಿಡ್ನಾಪ್ ಮಾಡಿ, ರೇಪ್ ಮಾಡಿ, ಕೊಲೆ ಮಾಡಿದವರನ್ನು ಹಿಡಿಯಬೇಕೆಂದು ನಾವು ಹೋರಾಟವನ್ನು ಮುಂದುವರಿಸುತ್ತೇವೆ. ಇಲ್ಲಿಗೆ ಬಿಡುವುದಿಲ್ಲ” ಎಂದು ಎಚ್ಚರಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ದೇಶಾದ್ಯಂತ SIR: ಪ್ರಜಾಪ್ರಭುತ್ವದ ಮೇಲೆ ತೂಗುಗತ್ತಿ

“ಎಸ್ಐಟಿಯವರು ಕರೆದರು. ಬುರುಡೆ ಬಗ್ಗೆ ಕೇಳಿದರು. ಚಿನ್ನಯ್ಯ ಹೇಳಿದಂತೆ ನೂರು ಹೆಣ ಸಿಗೋದು ಸತ್ಯ. ಅವಕಾಶ ಕೊಟ್ಟರೆ ತೋರಿಸುತ್ತೇನೆ ಎಂದೆ. ಮಹಜರಿಗೆ ಕರೆದುಕೊಂಡು ಬಂದರು. ಬುರುಡೆ ತೆಗೆದ ಜಾಗದಲ್ಲಿ ಇನ್ನೆರಡು ಬುರುಡೆ ಸಿಕ್ಕವು. ಹೆಣ್ಣುಮಕ್ಕಳಿಗೆ ಸಂಬಂಧಿಸಿದ ಉಡುಪುಗಳು ಇದ್ದವು. ಮೊದಲ ದಿನ ಒಂದೇ ಜಾದಲ್ಲಿ ಮೂರು ಬುರುಡೆ ದೊರೆತವು. ಎರಡನೇ ದಿನದ ಮಹಜರಿಗೆ ಬಂದಾಗ ಅಲ್ಲಿ ಹೆಣಗಳ ರಾಶಿಯೇ ಕಾಣಿಸಿತು. ನಮ್ಮ ಕಣ್ಣಿಗೆ ಕಂಡಿದ್ದನ್ನು ಹೇಳುವುದಾದರೆ ಕನಿಷ್ಠ ಐದು ಕಳೇಬರ ಅಲ್ಲಿದ್ದವು. ಒಂದು ಮಗುವಿನ ಕಳೇಬರವು ಸೇರಿತ್ತು. ಅಸ್ತಿಪಂಜರ, ಮಣ್ಣಿನ ಮಡಿಕೆಗಳು ದೊರೆತಿವೆ. ಮಗುವಿನ ಕಳೇಬರ ನೋಡಿದರೆ ಬಹುಶಃ ವಾಮಾಚಾರ ಮಾಡಿ, ನರಬಲಿ ಕೊಟ್ಟಿರಬಹುದು. ನನಗೆ ರಾತ್ರಿಯೆಲ್ಲ ನಿದ್ದೆ ಬರಲಿಲ್ಲ. ಒಂದೇ ಪ್ರದೇಶದಲ್ಲಿ ಅಷ್ಟೊಂದು ಶವ ಸಿಗೋದು ಹೇಗೆ? ನಮಗೆ ತುಂಬಾ ನೋವಾಗಿದೆ. ಇದರ ಹಿಂದೆ ಯಾರಿದ್ದಾರೆ? ಒಂದು ದೊಡ್ಡ ಗ್ಯಾಂಗ್ ಇಲ್ಲದೆ ಈ ಕೃತ್ಯಗಳನ್ನು ಎಸಗಲಾಗದು. ಐದು ಬುರುಡೆ ಸಿಕ್ಕ ಜಾಗದಲ್ಲಿ ಆರೇಳು ಮಡಿಕೆ, ಬ್ಯಾಗ್, ಮೊಬೈಲ್ ಕವರ್, ಲೋಟ, ಕೋಲು ಇದ್ದವು” ಎಂದು ಮಹಜರಿನ ವಿವರಗಳನ್ನು ತಿಳಿಸಿದ್ದಾರೆ.

“ಇದು ಸರಿಯಾಗಿ ತನಿಖೆಯಾಗಬೇಕು. ಇಲ್ಲ ಅಂದರೆ ಒಂದಲ್ಲ, ಹತ್ತು ಬುರುಡೆಗಳನ್ನು ಸುಪ್ರೀಂಕೋರ್ಟ್ನ ಅಂಗಳದಲ್ಲಿ ಇಡಲು ನಾನು ಸಿದ್ಧವಿದ್ದೇನೆ” ಎಂದು ಗುಡುಗಿದ್ದಾರೆ.

“ಚಿನ್ನಯ್ಯ, ರಾಜು ಎಂಬವರೆಲ್ಲ ಹೆಣವನ್ನು ಹೂತು ಹಾಕಿದ್ದಾರೆ. ಅರ್ಧ ಗಂಟೆಯಲ್ಲಿ ಎಂಟು ಕಳೇಬರ ಸಿಗೋದಾದರೆ ಮುಂದೆ ನೂರಾರು ಸಿಗಬಹುದು. ಅವುಗಳು ನಾವು ಹುಡುಕಿಕೊಂಡು ಹೋಗಿದ್ದಕ್ಕೆ ಸಿಕ್ಕಿದ್ದಲ್ಲ. ಸುಮ್ಮನೆ ನಡೆದುಕೊಂಡು ಹೋದಾಗ ದೊರೆತ ಕಳೇಬರಗಳಾಗಿವೆ” ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

“ಸೌಜನ್ಯಳನ್ನು ಅತ್ಯಾಚಾರ ಮಾಡಿದ್ದು ವಿಠ್ಠಲ ಗೌಡ” ಎಂದು ಆರೋಪಿಸಿರುವ ಸ್ನೇಹಮಹಿ ಕೃಷ್ಣ ಅವರಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಅವರು, “ ತಂದೆ- ಮಗಳ ಭಾವನೆ ಏನೆಂಬುದು ಆತನಿಗೆ ಗೊತ್ತಿಲ್ಲ. ಆತನ ಮನೆಯಲ್ಲಿ ತಾಯಿ, ಅಕ್ಕ, ತಂಗಿ ಯಾರು ಇಲ್ಲ ಅನಿಸುತ್ತೆ. ಸೌಜನ್ಯ ಘಟನೆ ನಡೆದು ಹದಿಮೂರು ವರ್ಷ ತುಂಬುತ್ತಿದೆ. ಇಷ್ಟು ದಿನ ಸ್ನೇಹಮಹಿ ಕೃಷ್ಣ ಸತ್ತು ಹೋಗಿದ್ದನಾ? ತಾಯಿ, ಮಗುವಿನ ನೋವು ಗೊತ್ತಿಲ್ಲದವರಿಗೆ ಉತ್ತರ ಕೊಡಲು ಆಗುವುದಿಲ್ಲ. ಆ ಭಗವಂತನೇ ಅಂಥವನಿಗೆ ಶಿಕ್ಷೆ ಕೊಡಬೇಕು. ಅವನ ಹಿಂದೆ ಪ್ರಭಾವಿ ರಾಜಕಾರಣಿ ಇದ್ದಾನೆಂಬ ಮಾಹಿತಿ ಬಂದಿದೆ. ಸ್ನೇಹಮಹಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುವಂತೆ ದೂರು ದಾಖಲಿಸುತ್ತೇವೆ” ಎಂದಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜನಮನ ಗೆದ್ದ ತುಮಕೂರು ದಸರಾ ಉತ್ಸವ : ಡಾ. ಜಿ.ಪರಮೇಶ್ವರ

 ತುಮಕೂರು ದಸರಾ ಉತ್ಸವವು ನಾಡಿನಾದ್ಯಂತ ಜನರ ಮನಸ್ಸನ್ನು ಗೆಲ್ಲುವ ಮೂಲಕ ಐತಿಹಾಸಿಕ...

NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ

ಭಾರತದ ವಿವಿಧ ರಾಜ್ಯಗಳಲ್ಲಿ 2023ರಲ್ಲಿ ನಾನಾ ರೀತಿಯಲ್ಲಿ ನಡೆದಿರುವ ದಾಖಲಿತ ಅಪರಾಧ...

ಸಮಾಜದ ಅಸಮಾನತೆ ಹೋಗಲಾಡಿಸಲು ಸಮೀಕ್ಷೆ ಅಗತ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸಮಾಜದಲ್ಲಿ ಅಸಮಾನತೆಯಿದ್ದು, ಅದನ್ನು ಹೋಗಲಾಡಿಸಲು ಸಮೀಕ್ಷೆಯ ಅಂಕಿಅಂಶಗಳು ಅವಶ್ಯಕ. ಯಾವ ಜಾತಿಯ...

Download Eedina App Android / iOS

X