ನನ್ನ ಸತತ ಪ್ರಯತ್ನಕ್ಕೆ ನರೇಂದ್ರ ಮೋದಿ ಸರ್ಕಾರದಿಂದ ಸಂಕ್ರಾಂತಿ ಹಬ್ಬದ ಉಡುಗೊರೆಯಾಗಿ ಬೀದರ ಜಿಲ್ಲೆಯಲ್ಲಿ ಎಫ್.ಎಂ.ಕೇಂದ್ರ ಆರಂಭಕ್ಕೆ ಮಂಜೂರಾತಿ ದೊರೆತಿದೆ ಎಂದು ಕೇಂದ್ರ ರಸಾಯನಿಕ ಹಾಗೂ ರಸಗೊಬ್ಬರ ಖಾತೆ ಹಾಗೂ ನೂತನ ಮತ್ತು ನವೀಕರಿಸಬಹುದಾದ ಇಂಧನ ಮೂಲ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
“ಬೀದರನಲ್ಲಿರುವ ದೂರದರ್ಶನ ಕೇಂದ್ರದಲ್ಲಿ 100 ವ್ಯಾಟ್ ಸಾಮರ್ಥ್ಯವುಳ್ಳ ಎಫ್.ಎಂ. ಕೇಂದ್ರಕ್ಕೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಉದ್ಘಾಟನೆ ಮಾಡಲಿದ್ದಾರೆ. ಈ ಎಫ್.ಎಮ್. ಕೇಂದ್ರವು ಸದ್ಯ ಮರುಪ್ರಸಾರಣ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಜಿಲ್ಲೆಯಲ್ಲಿ ಎಫ್.ಎಂ. ಕೇಂದ್ರ ತರಬೇಕೆಂದು ನಿರಂತರವಾಗಿ ಪ್ರಯತ್ನಿಸಿದ್ದೆ, ಆದರೆ ಎಫ್.ಎಂ.ಕೇಂದ್ರದ ಮಂಜೂರಾತಿಗೆ ಅವಶ್ಯಕವಾಗಿರುವ ಎಲ್ಲಾ ಪ್ರಕ್ರಿಯೆಗಳು ಮುಗಿಸಿಕೊಂಡು, ಮಂಜೂರಾತಿ ಪಡೆದುಕೊಂಡಿದ್ದರ ಪರಿಣಾಮ, ಮುಂದಿನ ಎರಡು ವಾರದೊಳಗೆ ಲೋಕಾರ್ಪಣೆಗೊಳ್ಳಲಿದೆ, ಜಿಲ್ಲೆಯ ಜನತೆಯ ಆಸೆ ಈಡೇರಲಿದೆ” ಎಂದಿದ್ದಾರೆ.
“ಸದ್ಯ ಬೆಂಗಳೂರು ಆಕಾಶವಾಣಿ ಕೇಂದ್ರದಿಂದ ಪ್ರಸಾರವಾಗುವ ಎಲ್ಲಾ ಕಾರ್ಯಕ್ರಮಗಳು ಬೀದರನಿಂದ ಮರುಪ್ರಸಾರಗೊಳ್ಳುತ್ತವೆ, ನಂತರ ಮುಂದಿನ ಕೆಲವೇ ದಿನಗಳಲ್ಲಿ ಬೀದರ ಕೇಂದ್ರದಿಂದ ಖಾಸಗಿ ಎಫ್.ಎಂ. ಕೇಂದ್ರಗಳು ಇಲ್ಲಿಂದಲೇ ಕಾರ್ಯಾರಂಭ ಮಾಡಲಿವೆ, ಅದಕ್ಕೆ ಬೇಕಾದ ಸಿದ್ದತೆ ಈಗಾಗಲೇ ನಮ್ಮಲ್ಲಿ ಮಾಡಿಕೊಳ್ಳಲಾಗುತ್ತಿದೆ. ಖಾಸಗಿ ಎಫ್.ಎಂ.ಚಾನೇಲ್‌ಗಳನ್ನು ಪ್ರಾರಂಭಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ, ರಿಲಯನ್ಸ್ ಎಫ್.ಎಂ. ಹಾಗೂ ಇನ್ನೊಬ್ಬರು ಎಫ್.ಎಂ.ಚಾನೆಲ್ ಪ್ರಾರಂಭಿಸಲು ಆಸಕ್ತಿ ತೋರಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.
“ಮೊದಲು ಸರ್ಕಾರದ ಎಫ್.ಎಂ. ಕೇಂದ್ರ ಪ್ರಾರಂಭವಾದ ಮೇಲೆ ಇವುಗಳ ಕಾರ್ಯಾರಂಭಕ್ಕೆ ಅವಕಾಶವಿರುತ್ತದೆ. ಆದ್ದರಿಂದ ಶೀಘ್ರದಲ್ಲಿ ಎಫ್.ಎಂ. ಕೇಂದ್ರ ಪ್ರಾರಂಭವಾದ ಮೇಲೆ ಖಾಸಗಿ ಚಾನೆಲ್ ಪ್ರಾರಂಭವಾಗುತ್ತವೆ. ಈ ಎಫ್.ಎಂ. ಮರುಪ್ರಸಾರಣ ಕೇಂದ್ರದಿಂದ ಸ್ಥಳೀಯ ಕಲಾವಿದರಿಗೆ, ಉದ್ಯಮಗಳ ಪ್ರಚಾರಕ್ಕೆ, ಪ್ರಸರಣಕ್ಕೆ, ವೇಗದ ಮಾಹಿತಿ ಪ್ರಸರಣಕ್ಕೆ ತುಂಬಾ ಅನುಕೂಲವಾಗಲಿದೆ, ಉದ್ಯಮದ ಜೊತೆಗೆ ನಮ್ಮ ಭಾಗದ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಭಾಷೆಗೆ ಪ್ರಾಶಸ್ತ್ಯ ಸಿಗಲಿದೆ” ಎಂದು ಸಚಿವರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಎರಡು ವರ್ಷ ಗತಿಸಿದರೂ ಬದಲಾಗದ ʼಬಸ್ ನಿಲ್ದಾಣʼ ನಾಮಫಲಕ
ಕಳೆದ 10 ವರ್ಷಗಳಲ್ಲಿ ನಾನು ಸಂಸದನಾದ ನಂತರ ಹತ್ತಾರು ಹೊಸ ಯೋಜನೆಗಳು ಬೀದರ ಲೋಕಸಭಾ ಕ್ಷೇತ್ರಕ್ಕೆ ತಂದಿರುವೆ, ಅದಕ್ಕೆ ಹೊಸ ಸೇರ್ಪಡೆ ಈ ಎಫ್.ಎಂ. ಕೇಂದ್ರವೂ ಒಂದಾಗಿದೆ, ಕ್ಷೇತ್ರದ ಜನತೆಯ ಆಸೆಯಂತೆ, ಬೀದರನಲ್ಲಿ ಎಫ್.ಎಂ. ಕೇಂದ್ರ ಪ್ರಾರಂಭಕ್ಕೆ ಮಂಜೂರಾತಿ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ ಠಾಕೂರ್ ಅವರಿಗೆ ಕೇಂದ್ರ ಸಚಿವ ಭಗವಂತ ಖೂಬಾ ಜಿಲ್ಲೆಯ ಜನತೆಯ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.