ಬರದ ನಾಡು ಎನಿಸಿರುವ ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಭೀಮಾ ನದಿಯ ತೀರದಲ್ಲಿದ್ದರೂ ಇಲ್ಲಿ ಬರ ಎನ್ನುವುದು ಶಾಶ್ವತ ಅತಿಥಿ. ಈ ಭೂಭಾಗದಲ್ಲಿ ಹಸಿರು ಬೆಳೆಯುವುದೂ ಕಷ್ಟ ಎನಿಸಿರುವಾಗ ಜಿಲ್ಲೆಯ ನಾದ ಕೆಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ತನ್ನ ಹಸಿರು ಆವರಣದಿಂದ ಕಣ್ಮಣ ಸೆಳೆಯುತ್ತಿದೆ. ಖಾಸಗಿ ಶಾಲೆಗಳ ಪೈಪೋಟಿಯಲ್ಲಿ ಸರ್ಕಾರಿ ಶಾಲೆಗಳು ಹಿಂದುಳಿದಿವೆ ಎನ್ನುವ ಕಲ್ಪನೆಗೆ ಈ ಶಾಲೆ ತಕ್ಕ ಉತ್ತರ ನೀಡಿದೆ.
ಶಿಕ್ಷಣ ವ್ಯಾಪಾರೀಕರಣಗೊಂಡಿರುವ ಇಂದಿನ ದಿನಗಳಲ್ಲಿ ಖಾಸಗಿ ಶಾಲೆಗಳು ವಿದ್ಯಾರ್ಥಿಗಳನ್ನು ಸೆಳೆಯಲು ವಿವಿಧ ಮಾರ್ಗಗಳನ್ನು ಅನುಸರಿಸುತ್ತಿವೆ. ಆದರೆ ನಾದ ಗ್ರಾಮದ ಸರ್ಕಾರಿ ಪ್ರೌಢಶಾಲೆ ಸರ್ಕಾರದ ಯೋಜನೆಗಳ ಸಂಪೂರ್ಣ ಸದುಪಯೋಗ ಮಾಡಿಕೊಂಡು ಮಾದರಿ ಶಾಲೆಯಾಗಿ ಗುರುತಿಸಿಕೊಂಡಿದೆ. 2012–13ರಲ್ಲಿ ಹಳದಿ ಶಾಲೆ ಪ್ರಶಸ್ತಿ, 2016–17 ಹಾಗೂ 2017–18ರಲ್ಲಿ ಹಸಿರು ಶಾಲೆ ಪ್ರಶಸ್ತಿ ಮತ್ತು 2018–19ರಲ್ಲಿ ತಾಲೂಕಿನ ಅತ್ಯುತ್ತಮ ಶಾಲೆ ಪ್ರಶಸ್ತಿಗಳನ್ನು ಗಳಿಸಿ ಈ ಶಾಲೆ ತನ್ನ ಶ್ರಮ ಮತ್ತು ನಿಸ್ವಾರ್ಥ ಸೇವೆಯ ಗುರುತು ಮೂಡಿಸಿದೆ.

ನಾಡು ಬರದ ಹಾದಿಯಲ್ಲಿದ್ದರೂ ಈ ಶಾಲೆಯಲ್ಲಿ ಹಸಿರು ಪರಿಸರಕ್ಕೆ ಮಾತ್ರ ಬರ ತೋರಿಲ್ಲ. ದೈಹಿಕ ಶಿಕ್ಷಕ ಸಂಗನಗೌಡ ಹಚಡದ, ಹಿರಿಯ ಶಿಕ್ಷಕ ಸಂಜೆಯ ಬುಲಬುಲೆ, ಮುಖ್ಯಗುರು ಹಾಗೂ ಎಸ್‌ಡಿಎಂಸಿ ಸದಸ್ಯರ ಸಹಕಾರದಿಂದ ಬೇಸಿಗೆಯಲ್ಲಿಯೂ ಶಾಲೆಯ ವಾತಾವರಣ ತಂಪಾಗಿ, ಹಸಿರಾಗಿ ಕಂಗೊಳಿಸುತ್ತಿದೆ. ಗ್ರಾಮ ಪಂಚಾಯಿತಿ ಮತ್ತು ಸ್ಥಳೀಯ ಶಿಕ್ಷಣ ಪ್ರೇಮಿಗಳ ಸಹಾಯದಿಂದ ಈ ಶಾಲೆ ನಿಜವಾದ ಅರ್ಥದಲ್ಲಿ ಹಸಿರನ್ನೇ ಹೊದ್ದು ನಿಂತಿದೆ. ಶಾಲೆಯ ಆವರಣದಲ್ಲಿ ಏಳು ನೂರಕ್ಕೂ ಹೆಚ್ಚು ಗಿಡಮರಗಳು, ಬಳ್ಳಿಗಳು ಮತ್ತು ತರಕಾರಿಗಳು ಬೆಳೆಯುತ್ತಿವೆ. ಬಿಸಿ ಊಟಕ್ಕೆ ಬೇಕಾದ ತರಕಾರಿಗಳನ್ನೂ ಇಲ್ಲಿಯೇ ಬೆಳೆಸಲಾಗುತ್ತದೆ. ಪರಿಸರದ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿಯೂ ಶಾಲೆ ಜಿಲ್ಲಾ, ವಿಭಾಗ ಮತ್ತು ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದೆ.
ಸುಮಾರು ಎರಡು ಎಕರೆ ಜಾಗದಲ್ಲಿ ಹರಡಿರುವ ಈ ಶಾಲೆಯಲ್ಲಿ ಪ್ರಸ್ತುತ ಹನ್ನೆರಡು ಶಿಕ್ಷಕರು, ಇಬ್ಬರು ಸಿಬ್ಬಂದಿ ಮತ್ತು 358 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮಕ್ಕಳ ಕಲಿಕೆಯ ಹಿತಕ್ಕಾಗಿ ಶಾಲೆಯಲ್ಲಿ ಸಮಾಜ ವಿಜ್ಞಾನ, ಗಣಿತ, ವಿಜ್ಞಾನ, ಕ್ರೀಡೆ, ಚಿತ್ರಕಲೆ, ಭಾಷೆ ಮತ್ತು ವಿಷಯ ಪ್ರತ್ಯೇಕ ಪ್ರಯೋಗಾಲಯಗಳು, ಸಮೃದ್ಧ ಗ್ರಂಥಾಲಯ ಮತ್ತು ಎರಡು ಏಲ್‌ಸಿಡಿ ಪ್ರೊಜೆಕ್ಟರ್‌ಗಳು ಅಳವಡಿಸಲ್ಪಟ್ಟಿವೆ. ಈ ಶಾಲೆಯಿಂದ ವ್ಯಾಸಂಗ ಮಾಡಿದ ಅನೇಕ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ ಎಂಬುದು ಹೆಮ್ಮೆಯ ಸಂಗತಿ.
ಪರಿಸರದ ಹಿತಕ್ಕಾಗಿ ಮತ್ತು ಮಕ್ಕಳ ಬೆಳವಣಿಗೆಯ ಹಿತಕ್ಕಾಗಿ ಕೆಲಸ ಮಾಡುವ ಸಂಗನಗೌಡ ಹಚಡದ ಅವರಂತಹ ಶಿಕ್ಷಕರು ನಮ್ಮ ಊರಿಗೆ ದೊರೆತದ್ದು ನಮ್ಮ ಪುಣ್ಯ ಎಂದು ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಸಿದ್ದರಾಯ ಐರೋಡಗಿ ಹೆಮ್ಮೆಯಿಂದ ಹೇಳುತ್ತಾರೆ.
“ಶಾಲೆ 2007ರಲ್ಲಿ ಪ್ರಾರಂಭವಾಯಿತು. ನಾನು 2013ರಲ್ಲಿ ಸೇರಿದ ನಂತರ ಎಲ್ಲರ ಸಹಕಾರದಿಂದ ಇಂದು ಇದು ತಾಲೂಕಿನಲ್ಲಿ ಅತ್ಯುತ್ತಮ ಶಾಲೆಯಾಗಿ ಗುರುತಿಸಿಕೊಂಡಿದೆ” ಎಂದು ನಿವೃತ್ತ ಮುಖ್ಯಗುರು ಬಿ.ವಿ. ಪಾಟೀಲ ನೆನಪಿಸಿಕೊಳ್ಳುತ್ತಾರೆ.



“ಗ್ರಾಮದಲ್ಲಿ ಹಲವು ಪಕ್ಷಗಳು ಮತ್ತು ಸಂಘಟನೆಗಳಿದ್ದರೂ ಶಾಲೆಯ ವಿಷಯದಲ್ಲಿ ಎಲ್ಲರೂ ಒಂದಾಗಿ ನಿಂತು ಸಹಕಾರ ನೀಡುತ್ತಾರೆ. ಜನಪ್ರತಿನಿಧಿಗಳು, ಎಸ್‌ಡಿಎಂಸಿ ಸದಸ್ಯರು, ಶಿಕ್ಷಣ ಪ್ರೇಮಿಗಳು ಹಾಗೂ ಸಹ ಶಿಕ್ಷಕರು ಸೇರಿದಂತೆ ಎಲ್ಲರ ಸಹಕಾರದಿಂದ ಶಾಲೆ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದೆ” ಎಂದು ದೈಹಿಕ ಶಿಕ್ಷಕ ಸಂಗನಗೌಡ ಹಚಡದ ಹೇಳುತ್ತಾರೆ.
ಶಾಲೆಯ ಮಕ್ಕಳನ್ನು ನಾವು ನಮ್ಮ ಮಕ್ಕಳಂತೆ ನೋಡಿಕೊಳ್ಳುತ್ತೇವೆ. ಅವರ ಅಗತ್ಯ ಪೂರೈಸಲು ಸದಾ ಸಿದ್ಧರಾಗಿರುತ್ತೇವೆ ಎಂದು ಗ್ರಾಮದ ಯುವಕ ಶಿವು ಹೇಳುತ್ತಾರೆ. ಶಾಲೆಗೆ ಯಾವ ಕೆಲಸ ಬೇಕಾದರೂ ಯಾರಿಗಾದರೂ ತಿಳಿಸಿದರೆ ಅರ್ಧ ಗಂಟೆಯೊಳಗೆ ಪೂರ್ಣಗೊಳಿಸುತ್ತಾರೆ. ಈ ಒಗ್ಗಟ್ಟೇ ಶಾಲೆಯನ್ನು ಮಾದರಿ ಮಾರ್ಗದಲ್ಲಿ ಮುನ್ನಡೆಸುತ್ತಿದೆ ಎಂದು ಶಾಲೆಯ ಸಿಬ್ಬಂದಿ ಬಂಡಗರ ವಿವರಿಸುತ್ತಾರೆ.
ಇದನ್ನೂ ಓದಿ: ವಿಜಯಪುರ | ಪ್ರವಾಹದಲ್ಲಿ ಕೊಚ್ಚಿಹೋದ ಬದುಕು, ಕಣ್ಣೀರೊರೆಸುವುದೇ ಸರ್ಕಾರ?
ಶಿಕ್ಷಣ ದುಡ್ಡುಳ್ಳವರ ಹಕ್ಕು ಎಂಬ ಸ್ಥಿತಿಯಲ್ಲಿ ನಾದ ಗ್ರಾಮದ ಸರ್ಕಾರಿ ಶಾಲೆ ಬಡ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಾಧ್ಯವೆಂದು ಸಾಬೀತುಪಡಿಸಿದೆ. ಈ ಶಾಲೆಯ ಹಸಿರು ಪರಿಸರ, ಶ್ರದ್ಧೆಯ ಶಿಕ್ಷಕರು, ಸಹಕಾರಿಯಾದ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳ ಉತ್ಸಾಹ ಎಲ್ಲವೂ ಸೇರಿ ಮಾದರಿ ಶಿಕ್ಷಣ ವ್ಯವಸ್ಥೆಯ ಚೌಕಟ್ಟನ್ನು ನಿರ್ಮಿಸಿವೆ. ಬರದ ನಾಡಿನಲ್ಲೂ ಹಸಿರು ಕನಸು ಬೆಳೆಸಿದ ನಾದ ಗ್ರಾಮದ ಸರ್ಕಾರಿ ಪ್ರೌಢಶಾಲೆ ಕೇವಲ ಶಾಲೆಯಲ್ಲ; ಅದು ಒಗ್ಗಟ್ಟಿನ, ಶ್ರಮದ ಮತ್ತು ನಿಸ್ವಾರ್ಥ ಸೇವೆಯ ಜೀವಂತ ಉದಾಹರಣೆ. ಖಾಸಗಿ ಶಾಲೆಗಳ ಪೈಪೋಟಿಯಲ್ಲಿ ತಲೆ ಎತ್ತಿ ನಿಂತು, ಬಡ ಮಕ್ಕಳಿಗೂ ಉನ್ನತ ಶಿಕ್ಷಣ ಸಾಧ್ಯವೆಂದು ತೋರಿಸಿರುವ ಈ ಶಾಲೆ ರಾಜ್ಯದ ಇತರ ಸರ್ಕಾರಿ ಶಾಲೆಗಳಿಗೂ ಮಾದರಿಯಾಗಿದೆ.