ರಾಜ್ಯದ ಬೇರೆ ಬೇರೆ ಕಡೆ ಪ್ರತಿ ವರ್ಷವೂ ಅತಿವೃಷ್ಟಿ ಇಲ್ಲವೇ ಅನಾವೃಷ್ಟಿ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಇವುಗಳ ಬಗ್ಗೆ ನಿಖರವಾಗಿ ತಿಳಿದುಕೊಳ್ಳಲು ಜಪಾನ್ ದೇಶದ ಮಾದರಿಯಲ್ಲಿ ಒಂದು ಪ್ರತ್ಯೇಕ ಇಲಾಖೆ ಸ್ಥಾಪನೆ ಮಾಡುವುದು ಅಗತ್ಯವಾಗಿದೆ ಎಂದು ಇಂಡಿ ಶಾಸಕ ಯಶವಂತರಾಯ ಗೌಡ ಪಾಟೀಲ ಅಭಿಪ್ರಾಯ ಪಟ್ಟರು.
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಅತಿವೃಷ್ಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಪ್ರಸಕ್ತ ವರ್ಷದಲ್ಲಿ ಸರಾಸರಿ ಪ್ರಮಾಣಕ್ಕಿಂತ ಹೆಚ್ಚಿನ ಮಳೆಯಾಗಿದೆ. ಇದರಿಂದ ಮುಂಗಾರು ಬಿತ್ತನೆಯ ಬೆಳೆಗಳು ಹಾಳಾಗಿವೆ. ಭೀಮಾ ನದಿಗೆ ಮಹಾರಾಷ್ಟ್ರ ಸರ್ಕಾರ ಉಜಿನಿ ಜಲಾಶಯದಿಂದ ಹರಿಬಿಟ್ಟ ನೀರಿನಿಂದ ತಾಲೂಕಿನ ಕೆಲವು ಗ್ರಾಮಗಳ ಜನ, ಜಾನುವಾರ ಮತ್ತು ಬೆಳೆಗಳಿಗೆ ಹಾನಿಯಾಗಿದೆ. ಹೀಗೆ ಪ್ರತಿ ವರ್ಷ ಅತಿವೃಷ್ಟಿ ಇಲ್ಲವೇ ಬರ ಕಂಡೆ ಕಾಣುತ್ತೇವೆ. ಇವುಗಳನ್ನು ಸಮರ್ಪಕವಾಗಿ ಎದುರಿಸಲು ತಾಲೂಕು ಮತ್ತು ಜಿಲ್ಲಾ ಆಡಳಿತ ಸನ್ನದ್ಧವಾಗಬೇಕು. ಅತಿವೃಷ್ಟಿ ಬಗ್ಗೆ ಕೆಲವು ಮಾಧ್ಯಮಗಳು ಅನಾವಶ್ಯಕವಾಗಿ ಸುದ್ದಿ ಮಾಡುತ್ತವೆ. ಅವುಗಳ ಕಡೆಗೂ ಕೂಡ ನಿಗಾ ವಹಿಸಬೇಕು” ಎಂದು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕೆ ಆನಂದ ಮಾತನಾಡಿ, “ತಾಲೂಕಿನ ಭೀಮಾನದಿ ಪ್ರವಾಹದಿಂದ ಉಂಟಾಗುವ ತೊಂದರೆಗಳ ನಿವಾರಣೆಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅವರೆಲ್ಲರೂ ತಮ್ಮ ತಮ್ಮ ಕೇಂದ್ರ ಸ್ಥಳಗಳಲ್ಲಿಯೇ ಇದ್ದು, ಜನರಿಗೆ ಆಗುವ ತೊಂದರೆ ಗಮನಿಸಿ, ಅವರ ನೆರವಿಗೆ ಧಾವಿಸಬೇಕು. ಗ್ರಾಮಗಳಿಗೆ ನೀರು ಬಂದರೆ ತಕ್ಷಣ ಜನರನ್ನು ಸ್ಥಳಾಂತರಿಸಬೇಕು. ತೊಂದರೆ ಒಳಗಾದವರಿಗೆ ತುರ್ತು ವಸತಿ ವ್ಯವಸ್ಥೆ ಮಾಡಿ, ಕಾಳಜಿ ಕೇಂದ್ರ ತೆರೆಯಬೇಕು. ಕಾಳಜಿ ಕೇಂದ್ರಗಳಿಗೆ ಅಗತ್ಯವಿರುವ ಸಾಮಗ್ರಿ ಸಂಗ್ರಹಿಸಿಡಬೇಕು. ಪ್ರಸಕ್ತ ವರ್ಷದ ಬೆಳವಣಿಯಲ್ಲಿ ವಿಜಯಪುರ ಜಿಲ್ಲೆಯ ಪ್ರಥಮ ಸ್ಥಾನದಲ್ಲಿದೆ. ಇಲ್ಲಿಯವರೆಗೆ ಸುಮಾರು ಒಂದು ಲಕ್ಷ ಹೆಕ್ಟರ್ ಪ್ರದೇಶದಲ್ಲಿ ವಿವಿಧ ಬೆಳೆಗಳು ಹಾನಿಗೊಳಗಾಗಿವೆ ಎಂದು ಅಂದಾಜಿಸಲಾಗಿದೆ. ಮಳೆ ನಿಂತ ತಕ್ಷಣವೇ ಪೂರ್ಣ ಪ್ರಮಾಣದ ಬೆಳೆ ಹಾನಿ ಬಗ್ಗೆ ಸಮೀಕ್ಷೆ ಮಾಡಿ ವರದಿ ಒಪ್ಪಿಸಬೇಕು” ಎಂದು ಸೂಚನೆ ನೀಡಿದರು.
ಇದನ್ನೂ ಓದಿ: ಕಲಬುರಗಿ | ರಸ್ತೆ ಗುಂಡಿಗಳನ್ನು ಮುಚ್ಚಲು ಆಗ್ರಹ: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪ್ರತಿಭಟನೆ
ವಿಜಯಪುರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ಮಾತನಾಡಿ, “ತಾಲೂಕಿನಲ್ಲಿ ಸರಾಸರಿಗಿಂತ ಶೇ 75ರಷ್ಟು ಮಳೆ ಹೆಚ್ಚಾಗಿದೆ. ಇದರಿಂದ ಮುಂಗಾರು ಹಂಗಾಮಿನಲ್ಲಿಯ ತೊಗರಿ, ಹತ್ತಿ, ಮೆಕ್ಕೆಜೋಳ ಹಾಳಾಗಿವೆ. ಹಾಳಾಗಿರುವ ಬೆಳೆಗಳ ಬಗ್ಗೆ ಸರ್ವೆ ಮಾಡಲು ಮಳೆ ಅಡ್ಡಿಯಾಗಿದೆ. ಮಳೆ ನಿಂತ ತಕ್ಷಣವೇ ಸಂಪೂರ್ಣ ಸರ್ವೆ ಮಾಡಿ ಸರ್ಕಾರಕ್ಕೆ ವರದಿ ನೀಡಲಾಗುವುದು” ಎಂದರು.
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಚ್ಎಸ್ ಪಾಟೀಲ ಮಾತನಾಡಿ, “ತಾಲೂಕಿನಲ್ಲಿ ತರಕಾರಿ ಬೆಳೆಗಳಾದ ಮೆಣಸು, ಟೊಮೆಟೊ, ಬೆಂಡಿ, ಬದನೆ ಉಳ್ಳಾಗಡ್ಡಿ ಮುಂತಾದ ಬೆಳೆಗಳು ಸಂಪೂರ್ಣ ಹಾಳಾಗಿವೆ. ನಿಂಬೆ ಬೆಳೆಗೆ ಹೂ ಬಿಡುತ್ತಿಲ್ಲ. ದ್ರಾಕ್ಷಿ, ದಾಳಿಂಬೆ ಗಳಿಗೆ ಅತೀವ ತೊಂದರೆಯಾಗಿದೆ. ಎಲ್ಲಾ ವರದಿಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದರು.
ಈ ವೇಳೆ ಉಪವಿಭಾಗಾಧಿಕಾರಿ ಅನುರಾಧ ವಸ್ತ್ರದ, ಜಗದೀಶ ಎಚ್ ಎಸ್, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಬಿ ಎಚ್ ಕನ್ನುರ, ತಹಶೀಲ್ದಾರ್ ಬಿ ಎಸ್ ಕಡಕಬಾವಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.