ಕಾರ್ಖಾನೆಗೆ ಆರ್ಥಿಕ ಸಹಾಯ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೇನೆ. ಆರ್ಥಿಕ ಸಹಾಯ ನೀಡಿದರೆ ಸಹಕಾರಿ ಸಂಘದಲ್ಲಿಯೇ ಮುಂದುವರೆಸೋಣ, ಇಲ್ಲದಿದ್ದರೆ ಮತ್ತೊಮ್ಮೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳೋಣ ಎಂದು ಕಾರ್ಖಾನೆಯ ಅಧ್ಯಕ್ಷ ಹಾಗೂ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಕಾರ್ಖಾನೆಯ ಆವರಣದಲ್ಲಿ 2024-25ನೇ ಸಾಲಿನ 7ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, “ಇದೇ ರೀತಿ ಮುಂದುವರೆದರೆ ಕಾರ್ಖಾನೆಗೆ ಹೆಚ್ಚಿನ ಆರ್ಥಿಕ ಸಂಕಷ್ಟ ಬರುವುದು ನಿಶ್ಚಿತ. ಆದಕಾರಣ ಇದನ್ನು ಯಾರಿಗಾದರೂ ಲೀಸ್ ಮೂಲಕ ನಡೆಸಲು ಕೊಡುವುದು ಸೂಕ್ತ” ಎಂದು ಹೇಳಿದರು.
ಸಭೆಗೆ ಹಾಜರಾಗಿದ್ದ ಷೇರುದಾರ ರೈತ ಶ್ರೀಮಂತ ಇಂಡಿ ಮಾತನಾಡಿ, “ಕಾರ್ಖಾನೆಯನ್ನು ಲೀಸ್‌ಗೆ ಕೊಡುವ ವಿಚಾರಕ್ಕೆ ನಮ್ಮ ಸಹಮತವಿಲ್ಲ. ಇದನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ” ಎಂದಾಗ, ಅದಕ್ಕೆ ಷೇರುದಾರ ರೈತ ಗುರುನಾಥ ಬಗಲಿ ಅನುಮೋದಿಸಿದರು. ಇದಕ್ಕೆ ರೈತರೆಲ್ಲರೂ ಚಪ್ಪಾಳೆ ತಟ್ಟಿ ಅಂಗೀಕರಿಸಿದರು.
ಸಭೆಯಲ್ಲಿದ್ದ ಷೇರುದಾರ ರೈತ ಸಂಗಣ್ಣ ಇರಾಬಟ್ಟಿ ಮಾತನಾಡಿ, “ಪ್ರತಿ ಷೇರುದಾರ ರೈತರಿಂದ ಎರಡು ಟನ್ ಕಬ್ಬಿಗೆ ಹಣ ಕೊಡದೆ ಅದನ್ನು ಕಾರ್ಖಾನೆಗೆ ಷೇರು ಎಂದು ತೆಗೆದುಕೊಂಡು ಕಾರ್ಖಾನೆಯನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಿ, ಸಹಕಾರಿ ಸಂಘದಲ್ಲಿಯೇ ನಡೆಸಿ” ಎಂದು ಸಲಹೆ ನೀಡಿದರು.
ರೈತ ಮಹಾದೇವ ಇರ ಕುರುಬರ ಮಾತನಾಡಿ, “ರೈತರಿಂದ ಷೇರು ಹಣ ಸಂಗ್ರಹಿಸಿ, ಇದನ್ನು ಸಹಕಾರಿ ಸಂಘದಲ್ಲಿಯೇ ನೀವೇ ನಡೆಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ರಸ್ತೆ ಬದಿಯಲ್ಲೇ ಆಸ್ಪತ್ರೆ ತ್ಯಾಜ್ಯ ಸುರಿದ ಹಿನ್ನೆಲೆ ಸ್ಥಳೀಯರು ಆಕ್ರೋಶ
ಶ್ರೀಮಂತ ಇಂಡಿ ಮಾತನಾಡಿ, ರೈತರು ಕಾರ್ಖಾನೆಗೆ ಕಳುಹಿಸುವ ಪ್ರತಿ ಟನ್ ಕಬ್ಬಿನಿಂದ ನೂರು ಷೇರು ಪಡೆದುಕೊಳ್ಳಲು ಸಲಹೆ ನೀಡಿದರು.
ಉಪಾಧ್ಯಕ್ಷ ಎಂ ಆರ್ ಪಾಟೀಲ, ನಿರ್ದೇಶಕ ಸಿದ್ದಣ್ಣ ಬಿರಾದಾರ, ಜಟ್ಟಪ್ಪ ರವಳಿ, ಸುರೇಶ ಗೌಡ ಪಾಟೀಲ, ಅಶೋಕ ಗಜಕೋಶ, ರೇವ ಗುಂಡಪ್ಪಗೌಡ ಪಾಟೀಲ, ಬಸವರಾಜ ಧನಶ್ರೀ, ವಿಶ್ವನಾಥ ಬಿರಾದಾರ, ದುಂಡಪ್ಪ ಖೇಡ, ಸಿದ್ದುಗೌಡ ಪಾಟೀಲ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಎಸ್ ಕೆ ಭಾಗ್ಯಶ್ರೀ ಇದ್ದರು.