ಸಾಮಾಜಿಕ ಅಸಮಾನತೆ, ಕೋಮುವಾದ, ಪ್ರಾದೇಶಿಕತೆ, ಪ್ರತ್ಯೇಕತಾವಾದ ಹಾಗೂ ಸಾಮಾಜಿಕ ಮಾಧ್ಯಮದ ದುರುಪಯೋಗ ಮುಂತಾದವುಗಳು ಪ್ರಜಾಪ್ರಭುತ್ವಕ್ಕೆ ಪ್ರಮುಖ ಸವಾಲುಗಳಾಗಿವೆ. ಇಂತಹ ಸವಾಲುಗಳನ್ನು ಭಾರತೀಯ ಸಂವಿಧಾನ ಸಮರ್ಪಕವಾಗಿ ನಿಭಾಯಿಸುತ್ತಿದ್ದು, ದೇಶದಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿದೆ ಎಂದು ರಾಜ್ಯಶಾಸ್ತ್ರದ ಪ್ರಾಧ್ಯಾಪಕ ಗುರಣ್ಣಗೌಡ ಪಾಟೀಲ ಹೇಳಿದರು.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಝಳಕಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಝಳಕಿಯ ಐ.ಕ್ಯೂ.ಎ.ಸಿ ಅಡಿಯಲ್ಲಿ ರಾಜ್ಯಶಾಸ್ತ್ರ ವಿಭಾಗ ಹಾಗೂ ಚುನಾವಣಾ ಸಾಕ್ಷರತಾ ಕ್ಲಬ್ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ವಿಶೇಷ ಉಪನ್ಯಾಸ ಹಾಗೂ ಕ್ವಿಜ್ ಸ್ಪರ್ಧೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ವಿದ್ಯಾರ್ಥಿಗಳು ಸಂವಿಧಾನದ ಆಶಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದ ಸಾಮರಸ್ಯ ಕಾಪಾಡುವಲ್ಲಿ ಯುವಕರ ಪಾತ್ರ ಮಹತ್ವದ್ದು. ಯಾವುದೇ ಹಿತಾಸಕ್ತಿಗಳಿಗೆ ಬಲಿಯಾಗದೆ ಜವಾಬ್ದಾರಿಯುತ ನಾಗರಿಕರಾಗಬೇಕು. ಸಂವಿಧಾನ ಪೀಠಿಕೆಯ ಭಾತೃತ್ವ ಪದವನ್ನು ಅರ್ಥೈಸಿಕೊಂಡು ಎಲ್ಲರ ಜೊತೆಯೂ ಭಾರತೀಯರಾಗಿ ಬದುಕಬೇಕು. ಭಾರತೀಯ ಸಂಸ್ಕೃತಿಯಲ್ಲಿ ಸಾಮರಸ್ಯವೇ ಪ್ರಮುಖವಾಗಿದ್ದು, ಶರಣರು ಹಾಗೂ ಸೂಫಿಗಳ ತತ್ವ ಚಿಂತನೆ ಇದಕ್ಕೆ ಭಾರೀ ಕೊಡುಗೆ ನೀಡಿದೆ” ಎಂದು ಹೇಳಿದರು.
ಇದನ್ನೂ ಓದಿ: ಇಂಡಿ | ಕಾರ್ಖಾನೆಗೆ ಆರ್ಥಿಕ ಸಹಾಯ ನೀಡುವಂತೆ ಸರ್ಕಾರಕ್ಕೆ ಮನವಿ: ಶಾಸಕ ಯಶವಂತರಾಯಗೌಡ ಪಾಟೀಲ
ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಗುರಣ್ಣಗೌಡ ಪಾಟೀಲ ಅವರು “ಭಾರತೀಯ ಸಂವಿಧಾನ ಮತ್ತು ಪ್ರಜಾಪ್ರಭುತ್ವ: ಸಮಕಾಲೀನ ಸವಾಲುಗಳು” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿವೇಕಾನಂದ ಉಘಡೆ, ಸಹಾಯಕ ಪ್ರಾಧ್ಯಾಪಕಿ ಸ್ಪೂರ್ತಿ, ಎಲ್ಲಾ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ರಸಪ್ರಶ್ನೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಪ್ರದಾನ ಮಾಡಲಾಯಿತು.