ಹಲವು ಸರ್ಕಾರೇತರ ಸಂಸ್ಥೆಗಳು ನಮ್ಮ ಸಮಾಜದಲ್ಲಿವೆ. ಆದರೆ ಬೋಧಿ ಸತ್ವ ಗೌತಮ ಬುದ್ಧ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ದೀನದಲಿತರ ಉದ್ಧಾರಕ್ಕಾಗಿಯೇ ನಿರ್ಮಾಣಗೊಂಡಿರುವ ಸಂಸ್ಥೆಯಾಗಿದೆ ಎಂದು ಜಮಖಂಡಿ ನವ ನಗರದ ಬುದ್ಧವಿಹಾರದ ಗುರು ಧಮ್ಮಪಾಲ ಬಂತೇಜಿ ಹೇಳಿದರು.
ಜಮಖಂಡಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಬೋಧಿ ಸತ್ವ ಗೌತಮ ಬುದ್ಧ ನಗರ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, “ಈ ಸಂಸ್ಥೆಯು ಗ್ರಾಮೀಣ ಭಾಗದ ಬಡ ಜನರ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡುವಂತಾಗಲಿ. ಸಂಸ್ಥೆಯು ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನೂ ಸಮಾನವಾಗಿ ನೋಡುವಂತಾಗಲಿ. ಇಂತಹ ಸಂಸ್ಥೆಯೊಂದರ ಉದ್ಘಾಟನೆ ಮಾಡುವುದು ಅತ್ಯಂತ ಹೆಮ್ಮೆಯ ವಿಷಯ” ಎಂದು ಶುಭ ಹಾರೈಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹಾಗೂ ಸಂಸ್ಥೆಯ ಅಧ್ಯಕ್ಷ ಪರಶುರಾಮ ಕಾಂಬಳೆ ಮಾತನಾಡಿ, “ಸರ್ಕಾರೇತರ ಸಂಸ್ಥೆಯಾದ ಈ ಸಂಸ್ಥೆಯನ್ನು ನಾವೆಲ್ಲರೂ ಕೂಡಿ ಬೆಳೆಸಿ ಈ ನಾಡಿನ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡೋಣ ಹಾಗೂ ಸರ್ಕಾರದ ಸಹಾಯಧನ ಮತ್ತು ಯೋಜನೆಗಳನ್ನು ಪಡೆದುಕೊಂಡು ಜನರನ್ನು ಆರ್ಥಿಕವಾಗಿ ಮೇಲೆತ್ತುವ ಕೆಲಸ ಮಾಡೋಣ” ಎಂದು ತಿಳಿಸಿದರು.
ನ್ಯಾಯವಾದಿ ಎಸ್ ಪಿ ದೊಡ್ಡಮನಿ ಮಾತನಾಡಿ, “ಈ ಸಂಸ್ಥೆಯು ಮುಂದಿನ ಯುವ ಪೀಳಿಗೆಗೆ ಶಿಕ್ಷಣ ಮತ್ತು ಆರೋಗ್ಯ ದೃಷ್ಟಿಯಿಂದ ಅನುಕೂಲವಾಗಲಿ” ಶುಭ ಹಾರೈಸಿದರು.
ಇದನ್ನೂ ಓದಿ: ಬಾಗಲಕೋಟೆ | ನವೆಂಬರ್‌ನಲ್ಲಿ ಚಾಲುಕ್ಯ ಉತ್ಸವ ಆಯೋಜನೆ: ಸಚಿವ ಆರ್ ಬಿ ತಿಮ್ಮಾಪೂರ
ದಲಿತ ಸಂಘರ್ಷ ಸಮಿತಿ ಜಿಲ್ಲಾ ಮುಖಂಡರಾದ ಎಚ್ ಎನ್ ನೀಲನಾಯಕ ಮಾತನಾಡಿ, “ಈ ಸಂಸ್ಥೆಯನ್ನು ಪ್ರಾರಂಭಿಸಲು ವಿಚಾರ ಮಾಡಿ ಸಂಸ್ಥೆ ಹುಟ್ಟು ಹಾಕಿದ್ದು ಸಂತೋಷಕರ ಸಂಗತಿ. ಶೋಷಿತ ಸಮುದಾಯಗಳ ಕೇಂದ್ರವಾಗಿ ಅವರ ಉದ್ಧಾರಕ್ಕಾಗಿ ಕೆಲಸ ಮಾಡಲಿ” ಎಂದರು.
ಕನ್ನೊಳ್ಳಿ ಗ್ರಾಮದ ನಿವೃತ್ತ ಶಿಕ್ಷಕಿ ಕೆಪಿ ಮೋಹಿತೆ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಬಕವಿ ಬನಹಟ್ಟಿ ತಾಲೂಕು ಸಂಚಾಲಕ ಹಾಗೂ ಸಂಸ್ಥೆಯ ಕಾರ್ಯದರ್ಶಿ ಬಸವರಾಜ ದೊಡ್ಡಮನಿ, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ಯುವಕರು ಭಾಗವಹಿಸಿದ್ದರು.