ಮುಸ್ಲಿಮರು ಆರಾಧನೆಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೆಯೋ ಅಷ್ಟೇ ಪ್ರಾಮುಖ್ಯತೆ ಸಮಾಜಮುಖಿ ಕೆಲಸಕ್ಕೆ, ಸೌಹಾರ್ದತೆಗೆ, ಸಹೋದರತೆಗೆ, ಮಾನವೀಯತೆಗೆ ಕೊಡಬೇಕು. ದೇವ ಭಯ ಯಾವ ಮನುಷ್ಯನಲ್ಲಿ ಹೆಚ್ಚು ಇರುತ್ತದೋ, ಆತನು ದೇವನ ಬಳಿ ಹೆಚ್ಚು ಶ್ರೇಷ್ಠ ವ್ಯಕ್ತಿಯಾಗಿ ಪರಿಗಣಿಸಲ್ಪಡುತ್ತಾನೆ. ಓರ್ವ ಮುಸ್ಲಿಮನು ಸಮಾಜದಲ್ಲಿರುವ ಇತರ ಜನರ ಹಿತಾಕಾಂಕ್ಷಿ ಆಗಿರಬೇಕು. ಅವರ ಕಷ್ಟ ಸುಖದಲ್ಲಿ ಭಾಗಿಯಾಗಿರಬೇಕು. ಅವರೊಂದಿಗೆ ಉತ್ತಮ ಸಂಭಂದ ಇಟ್ಟುಕೊಳ್ಳಬೇಕು. ಇದು ಕೂಡಾ ಆರಾಧನೆ ಆಗಿರುತ್ತದೆ. ಎಂದು ತೋನ್ಸೆ ಅಬುಲ್ಲೈಸ್ ಮಸ್ಜಿದ್ ನ ಖತೀಬ್ ವ ಇಮಾಮರಾದ ಮೌಲಾನ ಅಬ್ದುಲ್ ಘನಿ ಜಾಮಯೀ ಯವರು ಹೇಳಿದರು.
ಅವರು ಕಾಪು, ಚಂದ್ರನಗರದ ಅಹ್ಯಾ ಉಲ್ ಉಲೂಮ್ ಮದ್ರಸಾದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕಾಪು ವರ್ತುಲವು ಪ್ರವಾದಿ ಮುಹಮ್ಮದ್ (ಸ) ಜೀವನ ಮತ್ತು ಸಂದೇಶ ಎಂಬ ಶೀರ್ಷಿಕೆಯ ಮೇಲೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತಾಡಿದರು. ಮುಂದುವರಿಯುತ್ತಾ ಅವರು, ಪ್ರಸಕ್ತ ಸಮಾಜದಲ್ಲಿ ಕುರ್ ಆನ್ ನ ಬಗ್ಗೆ, ಪ್ರವಾದಿ ಮುಹಮ್ಮದ್ (ಸ ) ರ ಬಗ್ಗೆ, ಮುಸ್ಲಿಮರ ಬಗ್ಗೆ ತಪ್ಪು ಕಲ್ಪನೆ ಇರಲು ಕಾರಣ, ನಾವು ಅವರಿಗೆ ಇದರ ಪರಿಚಯ ಮಾಡಿ ಕೊಡದೆ ಇರುವುದು, ಅವರಿಂದ ಅಂತರ ಕಾಪಾಡಿಕೊಂಡು ಇರುವುದು, ಅವರೊಂದಿಗೆ ಬೆರೆಯದಿರುವುದು ಆಗಿರುತ್ತದೆ. ಆದ್ದರಿಂದ ನಾವು ಸಮಾಜದಲ್ಲಿರುವ ದೇಶಬಾಂಧವ ಸಹೋದರರರೊಂದಿಗೆ ಉತ್ತಮ ಸಂಪರ್ಕ ಇಟ್ಟು ಕೊಳ್ಳಬೇಕು ಮತ್ತು ಉತ್ತಮವಾಗಿ ವ್ಯವಹರಿಸಬೇಕು ಎಂದರು.
ಜಮಾಅತೆ ಇಸ್ಲಾಮೀ ಹಿಂದ್ ಕಾಪು ವರ್ತುಲದ ಅಧ್ಯಕ್ಷರಾದ ಅನ್ವರ್ ಅಲಿ ಯವರು, ಪ್ರವಾದಿ ಮುಹಮ್ಮದ್ (ಸ) ರವರನ್ನು ಸ್ರಷ್ಟಿಕರ್ತನು ಕೇವಲ ಮುಸ್ಲಿಮರಿಗೆ ಮಾತ್ರ ಪ್ರವಾದಿಯಾಗಿ ನೇಮಿಸಿಲ್ಲ. ಬದಲಾಗಿ ಅವರನ್ನು ವಿಶ್ವದ ಸಕಲ ಲೋಕದ ಜನರಿಗಾಗಿ ಪ್ರವಾದಿಯನ್ನಾಗಿ ನೇಮಿಸಿರುವನು. ಮುಸ್ಲಿಮ್ ಆಗಿದ್ದವನು ಸೃಷ್ಟಿಕರ್ತನು ಅವತ್ತೀರ್ಣ ಗೊಳಿಸಿದ ಕುರ್ ಆನ್ ನ ಆದೇಶವನ್ನು ಮತ್ತು ಪ್ರವಾದಿ ಮುಹಮ್ಮದ್ (ಸ) ರವರು ತೋರಿಸಿಕೊಟ್ಟ ಮಾರ್ಗದರ್ಶನದಂತೆ ಜೀವಿಸುತ್ತಾ ಸಮಾಜದಲ್ಲಿ ಜನರಿಗೆ ಮಾದರಿಯಾಗಿರಬೇಕು ಎಂದು ಪ್ರಾಸ್ತವಿಕ ಭಾಷಣ ಮಾಡಿ ಸ್ವಾಗತಿಸಿದರು. ಸಯ್ಯದ್ ಝಹೀನ್ ರವರ ಕುರ್ ಆನ್ ಪಠಣದೊಂದಿಗೆ ಸಭೆಯು ಪ್ರಾರಂಭವಾಯಿತು. ಮುಹಮ್ಮದ್ ಶರೀಫ್ ಶೇಕ್ ರವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದ ನೀಡಿದರು.