ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ಹಲ್ಲೆ ಸೇರಿದಂತೆ ಒಟ್ಟು 20 ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆ ರೌಡಿ ಶೀಟರ್ ಅಸ್ಲಂ ಪಟೇಲ್ ಅಲಿಯಾಸ್ ಬಾಂಬೆ ಅಸ್ಲಂನನ್ನು ಗುಂಡಾ ಕಾಯ್ದೆಯಡಿ ಬಂಧಿಸಿ ಮೈಸೂರು ಕೇಂದ್ರ ಕಾರಾಗೃಹದಲ್ಲಿ ಇರಿಸಲು ಆದೇಶಿಸಲಾಗಿದೆ.
ನಗರದ ರಾಘವೇಂದ್ರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಿಲ್ವಾರ ಗ್ರಾಮದ ನಿವಾಸಿ, ಪ್ರಸ್ತುತ ಮಿಜ್ಬಾ ಚೌಕ್‌ನ ಮದೀನಾ ಕಾಲೊನಿಯಲ್ಲಿ ವಾಸವಿರುವ ಅಸ್ಲಂ ಪಟೇಲ್ (32) ವಿರುದ್ಧ 2012ರಿಂದ 2026ರವರೆಗೆ ವಿವಿಧ ಪ್ರಕರಣಗಳು ದಾಖಲಾಗಿವೆ. ಭಾರತೀಯ ದಂಡ ಸಂಹಿತೆಯಡಿ 9, ಭಾರತೀಯ ನ್ಯಾಯ ಸಂಹಿತೆ–2023ರಡಿ 3, ಸಿಆರ್‌ಪಿಸಿ ಅಡಿಯಲ್ಲಿ 7 ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಡಿ 1 ಪ್ರಕರಣ ಸೇರಿದಂತೆ ಒಟ್ಟು 20 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಆರೋಪಿಯನ್ನು ‘ಎ’ ರೌಡಿ ಎಂದು ಗುರುತಿಸಲಾಗಿದ್ದು, ಆತನ ರೌಡಿ ಶೀಟ್ ಪ್ರಸ್ತುತ ಚಾಲ್ತಿಯಲ್ಲಿದೆ. ಕೊಲೆ, ಕೊಲೆ ಯತ್ನ, ಮಾರಕಾಸ್ತ್ರಗಳಿಂದ ಹಲ್ಲೆ, ಸಾರ್ವಜನಿಕ ಸ್ಥಳಗಳಲ್ಲಿ ಹೊಡೆದಾಟ, ಮನೆ ಅತಿಕ್ರಮಣ, ಜೀವ ಬೆದರಿಕೆ, ಸಾರ್ವಜನಿಕ ಶಾಂತಿಗೆ ಭಂಗ ಹಾಗೂ ಮುಚ್ಚಳಿಕೆ ಷರತ್ತುಗಳ ಉಲ್ಲಂಘನೆ ಸೇರಿದಂತೆ ವಿವಿಧ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಆತನ ಮೇಲಿದೆ.
ಆರೋಪಿಯ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ರಾಘವೇಂದ್ರ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಾಜೀದ್ ಪಟೇಲ್ ಅವರು ಗುಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ವರದಿ ಸಲ್ಲಿಸಿದ್ದರು.

ಇದನ್ನು ಓದಿದ್ದೀರಾ? ಕಲಬುರಗಿ | ಬಸ್‌ನಲ್ಲಿ ಮರೆತು ಹೋಗಿದ್ದ ಚಿನ್ನಾಭರಣ ಮರಳಿಸಿದ ಚಾಲಕ, ನಿರ್ವಾಹಕ
ವರದಿಯ ಆಧಾರದ ಮೇಲೆ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಐಪಿಎಸ್ ಅವರು ವಿಚಾರಣೆ ನಡೆಸಿ, ಕರ್ನಾಟಕ ಅಪಾಯಕಾರಿ ಚಟುವಟಿಕೆಗಳ ನಿಗ್ರಹ ಕಾಯ್ದೆ–1985ರ ಕಲಂ 3(1)ರ ಅಡಿಯಲ್ಲಿ ಕ್ರಮಕ್ಕೆ ಮುಂದಾಗಿದ್ದಾರೆ. ಅಪರ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರ ಅಧಿಕಾರದಲ್ಲಿ ಆದೇಶ ಹೊರಡಿಸಲಾಗಿದ್ದು, ಅಸ್ಲಂ ಪಟೇಲ್‌ನನ್ನು ಮೈಸೂರು ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿಡಲು ಸೂಚಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.






