ನಮ್ಮ ಸರ್ಕಾರ ದಲಿತರಿಗೆ ಮೀಸಲಿಟ್ಟ ಎಸ್ಸಿಎಸ್ಪಿ, ಟಿಎಸ್ಪಿ ಅನುದಾನ ನಿಯಮ ಬದ್ಧವಾಗಿಯೇ ಬಳಕೆ ಮಾಡುತ್ತಿದೆ. ಬೇರೆಡೆ ಡೈವೋರ್ಟ್ ಆಗಿದ್ದರೆ ಬಿಜೆಪಿ ದಾಖಲೆ ನೀಡಲಿ. ಆಗ ಅದರ ಬಗ್ಗೆ ಕ್ರಮ ಜರುಗಿಸಲಾಗುವುದು ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼಮಾಜಿ ಪ್ರಧಾನಿ ಇಂದಿರಾಗಾಂಧಿ ಮಾಡಿದ ಕೆಲಸದಲ್ಲಿ ಅರ್ಧದಷ್ಟಾದರೂ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿ ತೋರಿಸಲಿ. ಇಂದಿರಾ ಗಾಂಧಿ ಬ್ಯಾಂಕ್ಗಳ ರಾಷ್ಟ್ರೀಕರಣ, ಭೂಮಿ ಉಳುಮೆಗೆ ತಂದ ಸುಧಾರಣೆ ಹಾಗೂ ಪಾಕಿಸ್ತಾನ ಇಬ್ಬಾಗ ಮಾಡಿದ್ದು ಸೇರಿದಂತೆ ಹಲವಾರು ಕ್ರಾಂತಿಕಾರಿ ಬದಲಾವಣೆ ಮಾಡಿದ್ದಾರೆ. ಇಂದಿರಾ ಗಾಂಧಿ ಅವರು 44 ಬಾರಿ ಪತ್ರಿಕಾಗೋಷ್ಠಿ ಮಾಡಿದ್ದಾರೆ, ಇವರೇನು ಮಾಡಿದ್ದಾರೆʼ ಎಂದು ಪ್ರಶ್ನಿಸಿದರು.
ಕೇಂದ್ರಿಯ ವಿವಿಗಳು ಆರ್ಎಸ್ಎಸ್ ಶಾಖೆಗಳಾಗಿವೆ:
ʼಕೇಂದ್ರಿಯ ವಿಶ್ವವಿದ್ಯಾಲಯಗಳು ಆರೆಸ್ಸೆಸ್ ಶಾಖೆಗಳಾಂತಾಗಿವೆ ಎಂದು ಆರೋಪಿಸಿದ ಖರ್ಗೆ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ಲಾಿಖೆಗೆ ಸಂಬಂಧಿಸಿದ ಕಾರ್ಯಕ್ರಮ ನಡೆಸಲು ನಮಗೆ ಅನುಮತಿ ನಿರಾಕರಿಸಲಾಗಿದೆ. ಮಲ್ಲಿಕಾರ್ಜು ಖರ್ಗೆ ಅವರು ಈ ಭಾಗಕ್ಕೆ ಅನುಕೂಲ ಆಗಲಿ ಎಂದು ಜಿಲ್ಲೆಗೆ ಕೇಂದ್ರೀಯ ವಿವಿ ತಂದರು. ಆದರೆ, ಅದು ಆರ್ಎಸ್ಎಸ್ ಶಾಖೆ ಮಾಡಲು ಅನುಕೂಲ ಮಾಡಿಕೊಟ್ಟಂತಾಗಿದೆʼ ಎಂದು ಟೀಕಿಸಿದರು.
ಮೋದಿ ಕೊಡುಗೆ ನೀಡಿ ಮನ್ ಕಿ ಬಾತ್ ಮಾತಾಡಲಿ:
ʼಪ್ರಧಾನಿ ಮೋದಿ ಅವರ ʼಮನ್ ಕಿ ಬಾತ್’ ಕೇಳಿ ಕೇಳಿ ಸಾಕಾಗಿದೆ. ಏನಾದರೂ ಕೊಡುಗೆ ಕೊಟ್ಟು ಮೋದಿ ಮಾತನಾಡಲಿ. ಈ ಹಿಂದೆ ಕಲಬುರಗಿ ರೊಟ್ಟಿ ಬಗ್ಗೆ ಮಾತನಾಡಿದ್ದಾರೆ. ಮುಂದಿನ ದಿನ ಮತ್ತೊಂದು ವಿಷಯದ ಬಗ್ಗೆ ಮಾತನಾಡುತ್ತಾರೆ. ಕೊಡುಗೆ ನೀಡಿ ಆಮೇಲೆ ಮಾತನಾಡಲಿʼ ಎಂದು ಕುಟುಕಿದರು.
ಬಾಡಿಗೆ ಭಾಷಣಕಾರರ ಬಗ್ಗೆ ಏನು ಹೇಳಲಿ?:
ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಅಯೋಗ್ಯ ಪದ ಬಳಸಿದ್ದಕ್ಕೆ ಚಕ್ರವರ್ತಿ ಸೂಲಿಬೆಲೆ ಅವರ ಮೇಲೆ ದಾಖಲಾದ ಎಫ್ಐಆರ್ಅನ್ನು ಸುಪ್ರೀಂ ಕೊರ್ಟ್ ರದ್ದು ಮಾಡಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಾಡಿಗೆ ಭಾಷಣಕಾರರ ಬಗ್ಗೆಯಾಗಲಿ, ಅವರ ಬಾಸ್ ಗಳ ಬಗ್ಗೆಯಾಗಲಿ ನಾನೇನು ಉತ್ತರಿಸಲಿ. ನಾನು ಯಾವುದಾದರೂ ಎಫ್ಐಆರ್ ಹಾಕಿದ್ದರೆ ತೋರಿಸಲಿ. ಯಾರೋ ಒಬ್ಬರು ಅಲ್ಲಿನ ಸ್ಥಳೀಯ ನಾಯಕರು ಹಾಕಿದ್ದರೆ, ಅದಕ್ಕೆ ನಾನೇನು ಹೇಳಲಿ? ಎಂದು ಪ್ರತಿಕ್ರಿಯಿಸಿದರು.
ಯೂರಿಯಾ ಸರಬರಾಜಿಗೆ ಕೇಂದ್ರಕ್ಕೆ ಮನವಿ :
ʼಯೂರಿಯಾ ಕೊರತೆ ಅಷ್ಟೊಂದು ಕಾಣಿಸುತ್ತಿಲ್ಲ. ಕಳೆದ ಒಂದೂವರೆ ತಿಂಗಳ ಹಿಂದೆ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿದ ಕೃಷಿ ಸಚಿವ ಚೆಲುವರಾಯಸ್ವಾಮಿ ಯೂರಿಯಾ ಗೊಬ್ಬರ ಸರಬರಾಜಿಗೆ ಆದ್ಯತೆ ನೀಡುವಂತೆ ಮನವಿ ಸಲ್ಲಿಸಿದ್ದರು. ಈ ಸಲ ನಮಗೆ ಅಗತ್ಯವಿರುವ ಗೊಬ್ಬರ ಸರಬರಾಜು ಮಾಡಿಲ್ಲ. ರಾಜ್ಯದ ಓಪಿನಿಂಗ್ ಬ್ಯಾಲೆನ್ಸ್ ಅನ್ನು ಬೇಡಿಕೆಯಲ್ಲಿ ಕಡಿತಗೊಳಿಸಿದ ಕೇಂದ್ರ ಸರಕಾರ ಉಳಿದ ರಸಗೊಬ್ಬರ ಸರಬರಾಜು ಮಾಡಿದೆ. ಈ ಹಿಂದೆ ರಾಜ್ಯದ ಓಪಿನಿಂಗ್ ಬ್ಯಾಲೆನ್ಸ್ ನ್ನು ಪರಿಗಣಿಸುತ್ತಿರಲಿಲ್ಲʼ ಎಂದರು.
ಇದನ್ನೂ ಓದಿ : ಆನೆ ದಾಳಿಗೆ ಇಬ್ಬರ ಸಾವು | ಉನ್ನತಾಧಿಕಾರಿಗಳೊಂದಿಗೆ ಸಭೆ, ಆನೆ ಸೆರೆ ಹಿಡಿಯಲು ಸಚಿವ ಈಶ್ವರ ಖಂಡ್ರೆ ಸೂಚನೆ
ʼಕಲಬುರಗಿ ಜಿಲ್ಲೆಯಲ್ಲಿ ಈ ಸಲ ಶೇ100 ರಷ್ಟು ಬಿತ್ತನೆಯಾಗಿದೆ. 500 ಟನ್ ಗೊಬ್ಬರ ಬೇಡಿಕೆ ಇದ್ದು, 200 ಟನ್ ಗೊಬ್ಬರವನ್ನು ಬಾಗಲಕೋಟೆಯಿಂದ ತರಿಸಲಾಗುತ್ತಿದೆ. ಉಳಿದ 300 ಟನ್ ರಸಗೊಬ್ಬರವನ್ನು ಆದಷ್ಟು ಬೇಗ ತರಿಸಲಾಗುವುದು. ರಸಗೊಬ್ಬರ ವಿಚಾರದಲ್ಲಿ ಇಲ್ಲಿ ಪ್ರತಿಭಟನೆ ಮಾಡುವ ಬದಲು ಬಿಜೆಪಿಗರು ದಿಲ್ಲಿಯಲ್ಲಿ ಪ್ರತಿಭಟನೆ ಮಾಡಿ ರಾಜ್ಯಕ್ಕೆ ಗೊಬ್ಬರ ತರಿಸಿಕೊಡಲಿʼ ಎಂದು ಸಲಹೆ ನೀಡಿದರು.