ಮಳೆಯಿಂದ ಬೆಳೆ ಹಾನಿಯಾದ ಬಗ್ಗೆ ಸಿಎಂ ಸಂಬಂಧಪಟ್ಟ ಇಲಾಖೆಗಳೊಂದಿಗೆ ಮಾತನಾಡಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಬೆಳೆ ವಿಮೆ ಪರಿಹಾರದ ಬಗ್ಗೆಯೂ ಮಾಹಿತಿ ನೀಡಲಾಗಿದೆ, ಮುಂದಿನ ಒಂದು ವಾರದೊಳಗೆ ಪರಿಹಾರ ರೈತರಿಗೆ ಜಮಾ ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದರು.
ಕಲಬುರಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಎರಡನೆಯ ಸುತ್ತಿನ ಮಳೆ ನಿಲ್ಲದ ಕಾರಣ ಸರ್ವೆ ಮಾಡುವುದು ಕಷ್ಟವಾಗುತ್ತಿದೆ. ಮೊದಲ ಹಂತದಲ್ಲೇ 1.05 ಲಕ್ಷ ಹೆಕ್ಟೇರ್ ಹಾನಿಯಾಗಿದೆ. ಎರಡನೆಯ ಸುತ್ತಿನ ಸರ್ವೆ ಕೂಡ ಮಾಡಲಾಗುವುದು. ಈ ಬಗ್ಗೆ ನಾಳೆ ಸಚಿವ ಸಂಪುಟ ಸಭೆ ನಂತರ ಸಿಎಂ ಗಮನಕ್ಕೆ ತರಲಾಗುವುದುʼ ಎಂದರು.
ʼಕೋಲಿ ಸಮಾಜವನ್ನು ಎಸ್ ಟಿ ಪಟ್ಟಿಗೆ ಸೇರಿಸುವ ಬೇಡಿಕೆ ಬಳಹ ದಿನದಿಂದ ಇತ್ತು. ಕುರುಬ ಸಮಾಜದ ಸಭೆ ಕೂಡಾ ನಡೆಸಲಾಗುತ್ತಿದೆ. ಕುರುಬ ಹಾಗೂ ಕೋಲಿ ಕಬ್ಬಲಿಗ ಸಮಾಜವನ್ನು ಎಸ್ ಟಿ ಸೇರಿಸುವ ವಿಚಾರದಲ್ಲಿ ಎಂಥ್ರಾಪಲಾಜಿ ವರದಿ ಸಲ್ಲಿಸಿದ ಸಮಿತಿಯ ಮುಂದೆ ಚರ್ಚೆ ನಡೆಲಾಗಿದೆ. ಸಾಂಸ್ಕೃತಿಕ ಹಾಗೂ ಐತಿಹಾಸಿಕ ದಾಖಲೆಗಳನ್ನು ಕೇಂದ್ರಕ್ಕೆ ಸಲ್ಲಿಸುವ ವಿಚಾರವಿದೆ. ಇದೇ 20 ರಂದು ವರದಿ ಸಲ್ಲಿಸಲಾಗುವುದು. ಯಾವುದೇ ಸಂಘಟನೆ ಪರ ಅಥವಾ ವಿರೋಧ ಮಾಡಿದ ತಕ್ಷಣ ಪಟ್ಟಿಗೆ ಸೇರಿಸುವುದು ಆಗುವುದಿಲ್ಲ. ಸಂವಿಧಾನದ ಪ್ರಕಾರ ಎಲ್ಲ ನಡೆಯುತ್ತಿದೆʼ ಎಂದು ತಿಳಿಸಿದರು.
ʼಕೋಲಿ ಸಮಾಜವನ್ನು ಎಸ್ ಟಿ ಪಟ್ಟಿಗೆ ಸೇರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಭರವಸೆ ನೀಡಿದ್ದರು ಇದೂವರೆಗೆ ಯಾವುದೇ ಕ್ರಮವಾಗಿಲ್ಲ. ನಾನೇ ಸಮಾಜಕಲ್ಯಾಣ ಸಚಿವನಾಗಿದ್ದಾಗಲೂ ಕೂಡಾ ಕೆಲ ಕ್ಲಾರಿಫಿಕೇಷನ್ ಕೊಟ್ಟು ಬಂದಿದ್ದೆʼ ಎಂದರು.
ʼಸಾಲಮನ್ನಾ ವಿಚಾರ, ಜಂಟಿ ಸರ್ವೆ ನಂತರ ಬೆಳೆಹಾನಿ ಗೊತ್ತಾದಾಗ ಮುಂದಿನ ಕ್ರಮ ಕೈಗೊಳ್ಳಲಾಗುವುದು. 3.08 ಲಕ್ಷ ರೈತರು ಬೆಳೆ ವಿಮೆಗೆ ನೋಂದಣಿ ಆಗಿದ್ದರು ಅವರಲ್ಲಿ 1.36 ಲಕ್ಷ ಜನ (45%) ಜನ ಹಾನಿಗೊಳಗಾಗಿದ್ದಾರೆ. ಮೊದಲಿಗೆ ಅವರಿಗೆ ಪರಿಹಾರ ಒದಗಿಸಬೇಕಿದೆ. ಆನ್ ಲೈನ್ ನೋಂದಣಿ ವಿಚಾರದಲ್ಲಿ ಉದ್ಭವಿಸಿದ್ದ ಕೆಲ ತಾಂತ್ರಿಕ ತೊಂದರೆಗಳನ್ನು ಪರಿಹರಿಸಲಾಗಿದೆ. ಸರ್ವೆ ಸಮಯದಲ್ಲಿ ರೈತರು ಬೆಳೆ ಹಾನಿಯ ಸಂಪೂರ್ಣ ವಿವರನ್ನು ಒದಗಿಸಿದರೆ ಸರ್ವೆಗೆ ಅನುಕೂಲವಾಗುತ್ತದೆʼ ಎಂದರು.
ʼಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಪ್ರತಿ ನಾಲ್ಕು ದಿನಕ್ಕೊಮ್ಮೆ ಸಭೆ ನಡೆಸಿದ ಪರಿಣಾಮ 600 ಕೋಟಿ ಪರಿಹಾರ ಸಿಕ್ಕಿದೆ. ಖಚಿತ ಮಾಹಿತಿ ದೊರಕಿದ ಮೇಲೆ ಪರಿಹಾರ ವಿತರಣೆಗೆ ಸಹಕಾರಿಯಾಗಲಿದೆ. ಎನ್ ಡಿ ಆರ್ ಎಫ್ ನಿಯಮಾವಳಿಗಳ ಬಿಗಿಯಾಗಿದ್ದರಿಂದ ನಮಗೆ ಬೆಳೆ ವಿಮೆ ಮಾಡಿಸುವುದು ಒಂದೇ ಪರಿಹಾರವಾಗಿದೆ. ಜಿಲ್ಲೆಯಲ್ಲಿ ಮಳೆಯಿಂದಾಗಿ ರಸ್ತೆಗಳು ಹಾನಿಯಾಗಿರುವುದರಿಂದ ಗ್ರಾಮೀಣ ರಸ್ತೆಗಳ ರಿಪೇರಿಗೆಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೂ ಕೂಡಾ ಸಿಎಂ ಅವರ ವಿಶೇಷ ಅನುದಾನವನ್ನು ಕೂಡಾ ತೆಗೆದಿರಿಸಲಾಗಿದೆ. ಜಿಲ್ಲೆಯಲ್ಲಿ 40 ಕೋಟಿ ಪಿಡಿ ಖಾತೆಯಲ್ಲಿದೆ. ಅದನ್ನೂ ಕೂಡಾ ಬಳಸಿಕೊಳ್ಳಬಹುದು. ಮಳೆಗಾಲ ಮುಗಿದ ನಂತರ ಜಿಲ್ಲೆಯ ರಸ್ತೆಗಳ ರಿಪೇರಿ ಮಾಡಲಾಗುವುದುʼ ಎಂದು ತಿಳಿಸಿದರು.
ʼಮಳೆಗಾಲದ ನಂತರ ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳ ರಿಪೇರಿಗೆ ಸಂಬಂಧಿಸಿದಂತೆ ರಸ್ತೆ ಆಡಿಟ್ ಮಾಡಲಾಗುವುದು. ರಸ್ತೆ ಗುಂಡಿ ಮುಚ್ಚುವ ಕುರಿತು ಬೆಂಗಳೂರು ಮೂಲಕ ಸಂಸ್ಥೆಯೊಂದಿಗೆ ಮಾತುಕತೆ ನಡೆದಿದ್ದು ಟೆಂಡರ್ ಕರೆಯುವ ಯೋಚನೆಯಿದೆ. ನವೆಂಬರ್ ವೇಳೆಗೆ ರಸ್ತೆ ರಿಪೇರಿ ಕೈಗೆತ್ತಿಕೊಳ್ಳಲಾಗುವುದು. ರಸ್ತೆಗಳ ಗುಣಮಟ್ಟ ಕಂಡುಹಿಡಿಯಲು ರಸ್ತೆ ಆಡಿಟ್ ಮಾಡುವ ಉದ್ದೇಶ ಹೊಂದಲಾಗಿದೆ. ನಗರ ಪ್ಲಾನಿಂಗ್ ಕುರಿತು ಏಜೆನ್ಸಿ ಯನ್ನು ಕೂಡಾ ಗುರುತಿಸಲಾಗಿದ್ದು ಸೆಪ್ಟೆಂಬರ್ 20 ರ ನಂತರ ಕಲಬುರಗಿ ಎಂಪಿ ಅವರು ಈ ಕುರಿತು ತಾವು ತಯಾರಿಸಿದ ನೀಲಿ ನಕ್ಷೆ ಹಾಗೂ ಪ್ಲಾನಿಂಗ್ ಕುರಿತು ವಿವರಿಸಲಿದ್ದಾರೆʼ ಎಂದು ಮಾಹಿತಿ ನೀಡಿದರು.
ʼಹೆಸರು ಹಾಗೂ ಉದ್ದು ಖರೀದಿ ಕೇಂದ್ರ ಸ್ಥಾಪನೆ ಬೇಡಿಕೆ ಹಿನ್ನೆಲೆ, ಜುಲೈ 21 ರಂದು ಬಿತ್ತನೆ ಕಾರ್ಯಮುಗಿದ ನಂತರ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಆದರೆ ಅವರಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಮುಂದಿನ ವಾರ ಮತ್ತೊಮ್ಮೆ ಈ ಬಗ್ಗೆ ಮನವರಿಕೆ ಮಾಡಲಾಗುವುದು. ನಾಳೆ ನಡೆಯಲಿರುವ ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುವುದುʼ ಎಂದು ಹೇಳಿದರು.