ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ‘ಅಲ್ಟ್ರಾಟೆಕ್ ರಾಜಶ್ರೀ ಸಿಮೆಂಟ್ ಕಾರ್ಖಾನೆ’ಯಿಂದ ನಿಯಮಾನುಸಾರ ತೆರಿಗೆ ವಸೂಲಿ ಮಾಡಲಾಗುತ್ತಿಲ್ಲ. ಗ್ರಾಮ ಪಂಚಾಯತಿ ಅಧಿಕಾರಿಗಳು ಅನಧಿಕೃತ ಒಡಂಬಡಿಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿ ಪಂಚಾಯತಿ ಸದಸ್ಯ ಉಮೇಶ್ ಪಾಂಡುಸಿಂಗ್ ಚವ್ಹಾಣ್ ಅವರು ತಾಲೂಕಿನ ಸಹಾಯಕ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
“ನಿಯಮದಂತೆ ಅಲ್ಟ್ರಾಟೆಕ್ ರಾಜಶ್ರೀ ಸಿಮೆಂಟ್ ಕಾರ್ಖಾನೆಯು ವಾರ್ಷಿಕ 43,25,175 ರೂ. ತೆರಿಗೆ ಪಾವತಿಸಬೇಕು. ಆದರೆ, ಇಲ್ಲಿಯವರೆಗೂ ಅವರು ತೆರಿಗೆ ಸಂದಾಯ ಮಾಡಿಲ್ಲ. ಕರ್ನಾಟಕ ಪಂಚಾಯತಿ ಕಾಯ್ದೆ 1993ರ ಭಾಗ 8 ಮತ್ತು ಕಲಂ 202ರ ಪ್ರಕಾರ ಕಾರ್ಕಾನೆ, ಕಟ್ಟಡಗಳಿಗೆ ತೆರಿಗೆಯನ್ನು ನಿಗದಿ ಮಾಡಲಾಗುತ್ತದೆ. ಆದರೆ, ಪಂಚಾಯತಿ ಅಧಿಕಾರಿಗಳು ಈ ನಿಯಮಗಳನ್ನು ಗಾಳಿಗೆ ತೂರಿ ಅಲ್ಟ್ರಾಟೆಕ್ ರಾಜ ಸಿಮೆಂಟ್ ಕಾರ್ಖಾನೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.
“ಕಾರ್ಖಾನೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಇತರೇ ಸದಸ್ಯರುಗಳು ಕಂಪನಿಯಿಂದ ಪ್ರತ್ಯೇಕ್ಷವಾಗಿ ಮತ್ತು ಪರೋಕ್ಷವಾಗಿ ಅನುಕೂಲತ ಪಡೆದಿದ್ದಾರೆ. ಅವರ ಬ್ಯಾಂಕ್ ಖಾತೆಗಳಿಗೆ ಹಣ ಸಂದಾಯವಾಗಿರುವುದು ಕಂಡು ಬಂದಿರುತ್ತದೆ. ಕಾರ್ಖಾನೆಯೊಂದಿಗೆ ಅವ್ಯವಹಾರ ನಡೆಸಿರುವ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಅವ್ಯವಹಾರದ ಬಗ್ಗೆ ತನಿಖೆ ನಡೆಸಬೇಕು” ಎಂದು ಒತ್ತಾಯಿಸಿದ್ದಾರೆ.