ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ನಗರ ಸೇರಿದಂತೆ ಜಿಲ್ಲೆಯ ನಾನಾ ಕಡೆ ಅವಾಂತರ ಸೃಷ್ಟಿ ಮಾಡಿದೆ.
ಜೇವರ್ಗಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಅನೇಕ ಕಡೆಗಳಲ್ಲಿ ಹೊಲ, ಮನೆಗಳಲ್ಲಿ ನೀರು ನುಗ್ಗಿ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ. ಪಟ್ಟಣದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಮನೆಗಳು ಜಲಾವೃತಗೊಂಡಿವೆ. ದಿನ ಬಳಕೆಯ ವಸ್ತುಗಳು ಸೇರಿದಂತೆ ವಿವಿಧ ಸಾಮಗ್ರಿಗಳು ನೀರು ಪಾಲಾಗಿವೆ.
ಜೇವರ್ಗಿ ಪಟ್ಟಣ ಅಲೆಮಾರಿ ಜನಾಂಗ ವಾಸಿಸುವ ವಾರ್ಡ್ -16 ಹಾಗೂ ವಾರ್ಡ್-1ರಲ್ಲಿ ಗುಡಿಸಲುಗಳಿ ಅಪಾರ ಪ್ರಮಾಣದಲ್ಲಿ ಮಳೆ ನೀರು ನುಗ್ಗಿ ದವಸ, ಧಾನ್ಯ ಸೇರಿದಂತೆ ಸಾಮಾಗ್ರಿಗಳು ಹಾನಿಯಾಗಿವೆ.

ಈ ವೇಳೆ ಅಲೆಮಾರಿ ಮುಖಂಡರು ಮಾತನಾಡಿ, ʼಭಾರಿ ಮಳೆಯಿಂದ ಗುಡಿಸಲುಗಳಿಗೆ ಮಳೆ ನೀರು ನುಗ್ಗಿ ಅಸ್ತವ್ಯಸ್ತಗೊಂಡಿದ್ದು, ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದೆವು. ಈ ಕುರಿತು ಶಾಸಕ ಅಜಯ ಸಿಂಗ್, ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆʼ ಎಂದು ಜೇವರ್ಗಿಯ ಟಿಪ್ಪು ಸುಲ್ತಾನ್ ಸಮಿತಿಯ ಅಧ್ಯಕ್ಷ ಮೊಹಿಯುದ್ದೀನ್ ಇನಾಮದಾರ ಹೇಳಿದರು,
‘ಅಧಿಕಾರಿಗಳು ಗುಡಿಸಲು ವಾಸಿಗಳ ಸಮಸ್ಯೆ ಆಲಿಸಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು. ಕುಟುಂಬಗಳಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಿಕೊಂಡುವಂತೆ’ ಎಂದು ಅವರು ಆಗ್ರಹಿಸಿದರು.
ಸೇತುವೆ ಕುಸಿತ : ಸಂಪರ್ಕ ಸ್ಥಗಿತ
ಭಾರಿ ಮಳೆಯಿಂದಾಗಿ ಕಮಲಾಪುರ-ಜೀವಣಗಿ ಮಾರ್ಗವಾಗಿ ಚಿಂಚೋಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ರಸ್ತೆ-126 ಮಧ್ಯೆ ತಾತ್ಕಾಲಿಕವಾಗಿ ನಿರ್ಮಿಸಲಾದ ಸೇತುವೆ ಕುಸಿದ ಹಿನ್ನೆಲೆ ಸಂಪರ್ಕ ಕಡಿತಗೊಂಡಿದೆ.

ಕಮಲಾಪುರ ಪಟ್ಟಣ ಹಾಗೂ ಜೀವಣಗಿಗೆ ಸಂಪರ್ಕ ಕಲ್ಪಿಸುವ ಮಾರ್ಗಮಧ್ಯದ ಸೇತುವೆ ಕಳೆದ ವರ್ಷ ಮಳೆಗಾಲದಲ್ಲಿ ಬಿದ್ದು ಸಂಪರ್ಕ ಕಡಿತಗೊಂಡು ಎರಡು ತಿಂಗಳಾದರೂ ಕ್ರಮಕ್ಕೆ ಮುಂದಾಗಲಿಲ್ಲ. ಈ ಕುರಿತು ಈದಿನ.ಕಾಮ್ ವರದಿ ಪ್ರಕಟಿಸಿದ ನಂತರ ತಾತ್ಕಾಲಿಕವಾಗಿ ಸಿಡಿ, ಮುರಮು ಹಾಕಿ ಸೇತುವೆ ನಿರ್ಮಾಣ ಮಾಡಿದರು.
ಇದನ್ನೂ ಓದಿ : ಬೀದರ್ | ಮಳೆ ಅಬ್ಬರ, ನದಿ, ಕೆರೆಗಳಲ್ಲಿ ಉಬ್ಬರ, ಜನಜೀವನ ತತ್ತರ!
ತದನಂತರ ಶಾಶ್ವತ ಸೇತುವೆ ನಿರ್ಮಿಸುವುದಾಗಿ ಅಧಿಕಾರಿಗಳು ಹೇಳಿದರೂ ನಿರ್ಲಕ್ಷ್ಯ ತೋರಿದ ಹಿನ್ನೆಲೆ ಮತ್ತೆ ಸೇತುವೆ ಕುಸಿದಿದ್ದು, ಶಾಶ್ವತ ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.