ಶೌಚಾಲಯ, ಕುಡಿಯುವ ನೀರು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಲಬುರಗಿ ನಗರದ ವಾರ್ಡ-2 ಮತ್ತು 53 ರ ವ್ಯಾಪ್ತಿಯಲ್ಲಿ ಬರುವ ರಾಮನಗರ ಭಾಗ-2ರ ಬುದ್ಧ ನಗರ ಸ್ಲಂ ನಿವಾಸಿಗಳು ಖಾಲಿ ಕೊಡ, ಚೊಂಬು ಹಿಡಿದು ಪ್ರತಿಭಟನೆ ನಡೆಸಿದರು.
ಸೋಮವಾರ ನಗರದ ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕದಿಂದ ನಡೆದ ಪ್ರತಿಭಟನೆಯಲ್ಲಿ ಮಹಿಳೆಯರು ಕೈಯಲ್ಲಿ ಖಾಲಿ ಕೊಡ, ಚೊಂಬು ಹಿಡಿದು ಜಗತ್ ವೃತ್ತದಿಂದ ಮಹಾನಗರ ಪಾಲಿಕೆಯವರೆಗೆ ಪ್ರತಿಭಟನೆ ನಡೆಸಿ ಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಸಂಚಾಲಕಿ ರೇಣುಕಾ ಸರಡಗಿ ಮಾತನಾಡಿ, ‘ಕಲಬುರಗಿ ನಗರದ ಬುದ್ದ ನಗರ ಸ್ಲಂ ಮಹಿಳೆಯರಿಗೆ ಹಲವು ವರ್ಷಗಳಿಂದ ಶೌಚಾಲಯ ಇಲ್ಲದೆ ತೊಂದರೆ ಅನುಭವಿಸುತ್ತಿದ್ದು, ಬಯಲು ಶೌಚಾಲಯವೇ ಗತಿ ಎಂಬಂತಾಗಿದೆ. ನಗರದ ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆ ವ್ಯವಸ್ಥೆ ಕಲ್ಪಿಸದಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಇಲ್ಲಿನ ನಿವಾಸಿಗಳು ಸುಮಾರು ಎರಡ್ಮೂರು ಕಿ.ಮೀ. ದೂರದಿಂದ ಕುಡಿಯುವ ನೀರು ತರಬೇಕಾದ ಸ್ಥಿತಿಯಿದ್ದು, ಇದರಿಂದ ನಿತ್ಯದ ಕೂಲಿ ಕೆಲಸಕ್ಕೆ ತೆರಳುವ ಮಹಿಳೆಯರು ಪರದಾಡುತ್ತಿದ್ದಾರೆ. ಕೂಡಲೇ ಸ್ಲಂ ನಿವಾಸಿಗಳಿಗೆ ಶೌಚಾಲಯ ಮತ್ತು ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು’ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅಧ್ಯಕ್ಷೆ ಗೌರಮ್ಮ ಮಾಕಾ, ಕಾರ್ಯದರ್ಶಿ ಶರಣು ಕಣ್ಣಿ, ಸ್ಲಂ ಜನಾಂದೋಲನ ಕರ್ನಾಟಕ ಸಂಘದ ಮುಖಂಡರು, ಸ್ಲಂ ನಿವಾಸಿಗಳು ಭಾಗವಹಿಸಿದರು.