ಜಮಾಅತೆ ಇಸ್ಲಾಮಿ ಹಿಂದ್ ಕಲಬುರಗಿ ವತಿಯಿಂದ ಸಂತ್ರಾಶವಾಡಿಯ ಹಿದಾಯತ್ ಸೆಂಟರ್‌ನಲ್ಲಿ ಭಾನುವಾರ ‘ಕ್ರಾಂತಿಯ ಧ್ವಜವಾಹಕ ಪ್ರವಾದಿ ಮುಹಮ್ಮದ್’ ವಿಷಯದ ಕುರಿತು ವಿಶೇಷ ಸೀರತ್-ಉನ್ನಬಿ ಪ್ರವಚನ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ವತಿಯಿಂದ ಸ್ಥಾಪಿಸಲಾದ ಡಯಾಲಿಸಿಸ್ ಕೇಂದ್ರವನ್ನು ಉದ್ಘಾಟಿಸಲಾಯಿತು. ಕೇಂದ್ರವು ಡಯಾಲಿಸಿಸ್ ಅಗತ್ಯವಿರುವ ರೋಗಿಗಳಿಗೆ ಆರೋಗ್ಯ ಸೇವೆ ಒದಗಿಸುವಲ್ಲಿ ನೆರವಾಗಲಿದೆ ಎಂದು ಆಯೋಜಕರು ತಿಳಿಸಿದರು.
ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ. ಬಲಗಾಮಿ ಮೊಹಮ್ಮದ್ ಸಾದ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಹಾಗೂ ಶಾಂತಿ ಪ್ರಕಾಶನದ ಅಧ್ಯಕ್ಷ ಮೊಹಮ್ಮದ್ ಕನ್ಹಿ ಅವರು ‘ಕ್ರಾಂತಿಯ ಧ್ವಜವಾಹಕ ಪ್ರವಾದಿ ಮುಹಮ್ಮದ್’ ವಿಷಯದ ಕುರಿತು ಪ್ರವಚನ ನೀಡಿದರು.
ಕಲಬುರಗಿ ಸೌತ್‌ನ ಅಮೀರ್ ಮೊಹಮ್ಮದ್ ಮಜ್ಹರುದ್ದೀನ್ ಅವರು ‘ಸೀರತ್‌ನ ಸಂದೇಶ’ ಕುರಿತು ಮಾತನಾಡಿ, ಪ್ರವಾದಿ ಮುಹಮ್ಮದ್ ಅವರ ಜೀವನ ಮತ್ತು ಬೋಧನೆಗಳ ಮಹತ್ವವನ್ನು ವಿವರಿಸಿದರು. ಮುಖ್ಯ ಅತಿಥಿ ಡಾ. ಯಶವಂತರಾವ್ ಮೆಂಗಲಿ ಅವರು ಸೀರತ್-ಉನ್ನಬಿಯ ವಿವಿಧ ಆಯಾಮಗಳ ಕುರಿತು ವಿಚಾರ ಹಂಚಿಕೊಂಡರು.
ಹಾಫಿಜ್ ಮೊಹಮ್ಮದ್ ಅನೀಸ್ ರಾಫಿ ಅವರ ಕುರಾನ್ ಪಠಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬಾಬಾ ಹಂಡೇಕರ್ ಅನುವಾದ ಪ್ರಸ್ತುತಪಡಿಸಿದರು. ಡಯಾಲಿಸಿಸ್ ಕೇಂದ್ರದ ಕುರಿತು ಡಾ. ಮುಜಫ್ಫರ್ ಅಲಿ ಮಾಹಿತಿ ನೀಡಿದರು. ಕೇಂದ್ರದ ಉದ್ದೇಶ ಹಾಗೂ ಸಾರ್ವಜನಿಕರಿಗೆ ದೊರೆಯಲಿರುವ ಸೇವೆಗಳ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ನಾರ್ತ್‌ನ ಅಮೀರ್ ಕಲೀಂ ಆಬಿದ್ ಸ್ವಾಗತಿಸಿದರು, ಮೊಹಮ್ಮದ್ ಶಮ್ಸುದ್ದೀನ್ ನಿರೂಪಿಸಿದರು, ನಾಜಿಮ್ ಜಾಕಿರ್ ಹುಸೇನ್ ವಂದಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಒಂಟಿಯಾಗಿದ್ದ ಮಹಿಳೆ ಶವವಾಗಿ ಪತ್ತೆ: ಕೊಲೆ ಶಂಕೆ
ಕಾರ್ಯಕ್ರಮದಲ್ಲಿ ಡಾ. ಸಯ್ಯದ್ ರಹಮತುಲ್ಲಾ, ಮೊಹಮ್ಮದ್ ಅಜೀಮುದ್ದೀನ್, ಮೊಹಮ್ಮದ್ ಮೊಹಿಯುದ್ದೀನ್, ಎಂಜಿನಿಯರ್ ಮೊಹಮ್ಮದ್ ರಫೀಉದ್ದೀನ್, ಅಜೀಜ್ ಅಹ್ಮದ್ ಶಹ್ನಾ ಸೇರಿದಂತೆ ಗಣ್ಯರು, ಸಂಘಟನೆಯ ಪದಾಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.





